ಲಕ್ನೋ/ರಾಯ್‌ಬರೇಲಿ: ಈ ತಿಂಗಳ 6ರಂದು 5ನೇ ಹಂತದ ಮತದಾನ ನಡೆಯಲಿದ್ದು ಪ್ರಚಾರವೂ, ವಾಗ್ಧಾಳಿಯೂ ಬಿರುಸಾಗಿದೆ. ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ ಮೈತ್ರಿಕೂಟವನ್ನು ಸೋಲಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಕೈಜೋಡಿಸಿವೆ. ಈ ನಿಟ್ಟಿನಲ್ಲಿ ಅವು ಎರಡೂ ಪಕ್ಷಗಳೂ ಗುಪ್ತ ಕಾರ್ಯಸೂಚಿ ಹೊಂದಿವೆ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಗಂಭೀರ ಆರೋಪ ಮಾಡಿದ್ದಾರೆ. ಬಾರಾಬಂಕಿಯಲ್ಲಿ ಗುರುವಾರ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, “ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದರೆ ತೊಂದರೆ ಇಲ್ಲ. ಆದರೆ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಮೈತ್ರಿಕೂಟದ ಅಭ್ಯರ್ಥಿಗಳು ಸೋಲಬೇಕು ಎಂದು ಕಾಂಗ್ರೆಸ್‌ನ ನಾಯಕರು ಚಿಂತನೆ ನಡೆಸಿದ್ದಾರೆ. ಬಿಜೆಪಿಯಂತೆ ಕಾಂಗ್ರೆಸ್ ಕೂಡ ಬಿಎಸ್‌ಪಿ ಬಗ್ಗೆ ಆಧಾರ ರಹಿತ ಮಾತುಗಳನ್ನು ಆಡುತ್ತಿದೆ’ ಎಂದು ಟೀಕಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಇಂಥ ಆರೋಪಗಳನ್ನು ಎದುರಿಸುವುದಕ್ಕಿಂತ ಸಾಯುವುದೇ ಮೇಲೂ ಎಂದು ತಿರುಗೇಟು ನೀಡಿದ್ದಾರೆ.
ರ್ಯಾಲಿಯಲ್ಲಿ ಮಾತನಾಡಿದ ಮಾಯಾ ವತಿ ಐದು ವರ್ಷಗಳ ಅವಧಿಯಲ್ಲಿ ಎಸ್‌ಪಿ ಅಥವಾ ಬಿಎಸ್‌ಪಿ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ ವಿಚಾರ ಕೇಳಿದ್ದೀರಾ? ಬಿಎಸ್‌ಪಿ ನಾಯಕಿ ಅಥವಾ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್ ಯಾದವ್, ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಪ್ರಧಾನಿಯವರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದ ಉದಾಹರಣೆ ಇದೆಯೇ ಎಂದು ಪ್ರಶ್ನಿಸಿದ್ದಾರೆ. ತಾವು ಪ್ರಧಾನಿ ಮೋದಿ ವಿರುದ್ಧ ಹೆದರುವ ಪ್ರಶ್ನೆಯೇ ಇಲ್ಲ ಎಂದೂ ಅವರು ಹೇಳಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಉತ್ತರ ಪ್ರದೇಶದಲ್ಲಿ ನಮ್ಮ ಮೈತ್ರಿಕೂಟದ ಸೋಲುವಂತೆ ಮಾಡಲು ಗುಪ್ತ ಕಾರ್ಯಸೂಚಿ ಹೊಂದಿವೆ. ಬಿಜೆಪಿ ಗೆಲ್ಲಬೇಕು ಮತ್ತು ನಮ್ಮ ಮೈತ್ರಿಕೂಟ ಸೋಲಬೇಕು ಎಂಬ ಇರಾದೆ ಹೊಂದಿವೆ. ಪ್ರಧಾನಿ ನರೇಂದ್ರ ಮೋದಿ ಬಿಎಸ್‌ಪಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ವಾಗ್ಧಾಳಿ ನಡೆಸಿದ್ದಾರೆ ಮಾಯಾವತಿ.
ಕಾಂಗ್ರೆಸ್‌ನಂತೆ ಬಿಜೆಪಿ ನಕಲಿ ಅಂಬೇಡ್ಕರ್‌ವಾದಿಯಾಗುವುದು ಬೇಡ ಎಂದು ಹೇಳಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಪಾಕಿಸ್ಥಾನ ವಿರುದ್ಧ ಮೌನ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಅವಧಿಯಲ್ಲಿ ವಾಗ್ಧಾಳಿ ನಡೆಸುವ ಔಚಿತ್ಯವಾದರೂ ಏನು ಎಂದು ಬಿಎಸ್‌ಪಿ ವರಿಷ್ಠೆ ಪ್ರಶ್ನಿಸಿದ್ದಾರೆ.
ಸಾಯುವುದೇ ಮೇಲು: ಮಾಯಾವತಿ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶ ಪ್ರಿಯಾಂಕಾ ವಾದ್ರಾ “ಕಾಂಗ್ರೆಸ್ ಅಭ್ಯರ್ಥಿಗಳು ಸೋತು, ಬಿಜೆಪಿ ಗೆಲ್ಲುವಂತೆ ಮಾಡಬೇಕಾದ ಅಗತ್ಯವೇ ಇಲ್ಲ.
ಬಿಜೆಪಿಗೆ ಬೆಂಬಲಿಸುವುದಕ್ಕಿಂತ ಸಾಯುವುದೇ ಮೇಲು’ ಎಂದು ರಾಯ್‌ಬರೇಲಿಯಲ್ಲಿ ತಾಯಿ ಸೋನಿಯಾ ಗಾಂಧಿ ಪರ ಪ್ರಚಾರ ಮಾಡುವ ಸಂದರ್ಭದಲ್ಲಿ ಪತ್ರಕರ್ತರ ಜತೆಗೆ ಮಾತನಾಡುತ್ತಾ ಹೇಳಿದ್ದಾರೆ. ಕಾಂಗ್ರೆಸ್ ಏಕಾಂಗಿಯಾಗಿ ಹೋರಾಟ ನಡೆಸುತ್ತಿದೆ. ದೇಶದ ಜನರಿಗಾಗಿ ನಮ್ಮ ಪಕ್ಷ ಹೋರಾಟ ನಡೆಸುತ್ತಿದೆ ಎಂದು ಹೇಳಿರುವ ಅವರು, ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೇವೆ ಎಂದು ಹೇಳಿಯೇ ಇಲ್ಲ ಎಂದಿದ್ದಾರೆ.
ನಂಬಬೇಡಿ: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್ ಯಾದವ್ ಕೂಡ ಮಾಯಾವತಿ ಅವರ ಹೇಳಿಕೆಯನ್ನು ಬೆಂಬಲಿಸಿದ್ದು, ಪ್ರಿಯಾಂಕಾ ವಾದ್ರಾರ ಹೇಳಿಕೆಯನ್ನು ನಂಬಬೇಡಿ ಎಂದಿದ್ದಾರೆ.