Advertisement

“ಕೈ’ಗೆ ಮೆಣಸಿನಕಾಯಿ ಉರಿ!

11:16 PM Apr 02, 2019 | mahesh |

ಹಾವೇರಿ: ಸತತ 11 ಬಾರಿ ವಿಜಯದ ನಗೆ ಬೀರಿದ್ದ ಕಾಂಗ್ರೆಸ್‌ಗೆ “ಮೆಣಸಿನಕಾಯಿ’ ಕಣ್ಣೀರು ಹಾಕುವಂತೆ ಮಾಡಿತ್ತು. ಸದಾ ಗೆಲುವಿನ ಹಾರ ಹಿಡಿದ “ಕೈ’ಗಳಿಗೆ ಆ “ಮೆಣಸಿನಕಾಯಿ’ ಉರಿ ಮೂಡಿಸಿತ್ತು. ಅದು ಅಂತಿಂಥ “ಮೆಣಸಿನಕಾಯಿ’ ಅಲ್ಲ, ಹಾವೇರಿ ಮೂಲದ “ಲೋಕಶಕ್ತಿ’ಯ “ಮೆಣಸಿನಕಾಯಿ’! ಒಂದು “ಮೆಣಸಿನಕಾಯಿ’ ಕಾಂಗ್ರೆಸ್‌ ಭದ್ರಕೋಟೆಗೆ ನುಸುಳಿ ಘಾಟು ಎಬ್ಬಿಸಿ ತಲ್ಲಣ ಮೂಡಿಸಿದ ಇತಿಹಾಸ 2009ಕ್ಕಿಂತ
ಮುಂಚೆ ಧಾರವಾಡ ದಕ್ಷಿಣ ಕ್ಷೇತ್ರ ಎನಿಸಿದ್ದ ಈಗಿನ ಹಾವೇರಿ ಲೋಕಸಭೆ ಕ್ಷೇತ್ರದಲ್ಲಿದೆ. ಈ ಹಿಂದೆ ಧಾರವಾಡ ದಕ್ಷಿಣ ಲೋಕಸಭೆ ಕ್ಷೇತ್ರವಾಗಿದ್ದ ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ 1952ರಿಂದ 1998ರವರೆಗೆ ನಡೆದ 11 ಲೋಕಸಭೆ ಚುನಾವಣೆಗಳಲ್ಲಿ ನಿರಂತರವಾಗಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಇಲ್ಲಿನ ಮತದಾರರು ಸತತವಾಗಿ “ಕೈ’ ಹಿಡಿದಿದ್ದರು.

Advertisement

ಕ್ಷೇತ್ರದಲ್ಲಿ “ಕೈ’ ಪ್ರಾಬಲ್ಯ ಪ್ರಬಲವಾಗಿತ್ತು. ಸದಾ ನಗುವಿನಲ್ಲೇ ಇದ್ದ ಕಾಂಗ್ರೆಸ್‌ಗೆ ಕ್ಷೇತ್ರ “ಕೈ’ ತಪ್ಪುವಂತೆ ಮಾಡಿದ್ದು ಲೋಕಶಕ್ತಿ ಪಕ್ಷದ ಅಭ್ಯರ್ಥಿ ಬಸವಣ್ಣೆಪ್ಪ ಮೆಣಸಿನಕಾಯಿ. ಅವರ ಹೆಸರಲ್ಲಿರುವ “ಮೆಣಸಿನ
ಕಾಯಿ’ಯೇ ಕಾಂಗ್ರೆಸ್‌ಗೆ ಮುಳುವಾಯಿತು. ಹಾವೇರಿ ಜಿಲ್ಲೆಯ ಅಕ್ಕೂರ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಬಸವಣ್ಣೆಪ್ಪ ಮೆಣಸಿನಕಾಯಿ ಹಾವೇರಿಯಲ್ಲಿ ತೆರಿಗೆ ಸಲಹೆಗಾರರಾಗಿದ್ದರು. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ ಸದಸ್ಯರಾಗಿ ಯೂ ಆಯ್ಕೆಯಾಗಿದ್ದರು. ಬಸವಣ್ಣೆಪ್ಪ ಮೆಣಸಿನಕಾಯಿ 1998ರಲ್ಲಿ ಲೋಕಶಕ್ತಿ ಪಾರ್ಟಿಯಿಂದ ಸ್ಪರ್ಧಿಸಿ 3,28,333 ಮತಗಳಿಸಿ ಕಾಂಗ್ರೆಸ್‌ ಪಾಲಿಗೆ ಅಕ್ಷರಶಃ ಖಾರವಾಗಿದ್ದರು. ಅಂದಿನ ಚುನಾವಣೆಯಲ್ಲಿ ಪ್ರತಿಸ್ಪಧಿ ಕಾಂಗ್ರೆಸ್‌ನ ಐ.ಜಿ. ಸನದಿ 2,41,371, ಜನತಾದಳದಿಂದ ಕಣಕ್ಕಿಳಿದಿದ್ದ ಬಸವರಾಜ ಶಿವಣ್ಣನವರ 1,26,722 ಮತಗಳಿಸಿ ಸೋತಿದ್ದರು. ಕಾಂಗ್ರೆಸ್‌ನ ಭದ್ರಕೋಟೆಯನ್ನು ಮೊದಲ ಬಾರಿಗೆ ಛಿದ್ರಗೊಳಿಸಿದ ಕೀರ್ತಿ ಬಸವಣ್ಣೆಪ್ಪ ಮೆಣಸಿನಕಾಯಿ ಅವರಿಗೆ ಸಲ್ಲುತ್ತದೆ.

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next