Advertisement

ಭದ್ರಕೋಟೆ ಗೆದ್ದು ಬೀಗಿದ ಕಮಲ ಪಡೆ

10:40 AM May 24, 2019 | Team Udayavani |

ಧಾರವಾಡ: ರಾಜ್ಯದಲ್ಲಿಯೇ ಮೊದಲು ಜನಸಂಘ ನಂತರ ಬಿಜೆಪಿಯ ಭದ್ರಕೋಟೆಯಾಗಿ ನೆಲೆನಿಂತ ಧಾರವಾಡ ಜಿಲ್ಲೆಯಲ್ಲಿ ಮತ್ತೂಮ್ಮೆ ಕಮಲ ಪಡೆ ಕಮಾಲ್ ಮಾಡಿ ಭರ್ಜರಿ ಜಯಭೇರಿ ಬಾರಿಸಿದೆ.

Advertisement

ಇತ್ತ ಕೈ ಪಡೆ ಆಂತರಿಕ ಜಂಜಾಟದಿಂದ ನೆಲಕ್ಕಪ್ಪಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸುನಾಮಿ ಅಲೆ ಮತ್ತೂಮ್ಮೆ ಧಾರವಾಡದಲ್ಲಿ ಕಮಲ ಕಿಲ ಕಿಲ ನಗುವಂತೆ ಮಾಡಿದೆ. ಸತತ 23 ವರ್ಷಗಳಿಂದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಜಯ ಗಳಿಸುತ್ತಲೇ ಬಂದಿರುವ ಬಿಜೆಪಿ ಇದೀಗ ಮತ್ತೆ ಐದು ವರ್ಷಗಳ ಅವಧಿಗೆ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಂಡಂತಾಗಿದೆ.

ಕೈ ಪಡೆಯಲ್ಲಿನ ಟಿಕೆಟ್ ಹಂಚಿಕೆ ವಿಳಂಬ, ಅಲ್ಪಸಂಖ್ಯಾತರ ಒಳ ಮುನಿಸು, ಇತರ ಸಮುದಾಯಗಳು ಮೋದಿಗೆ ಮತ ಚಲಾಯಿಸಿದ್ದು, ಲಿಂಗಾಯತರು ಕಮಲವನ್ನು ಇನ್ನಷ್ಟು ಗಟ್ಟಿಯಾಗಿ ಹಿಡಿದುಕೊಂಡಿದ್ದು ಸೇರಿದಂತೆ ಅನೇಕ ಅಂಶಗಳು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಜಯದ ಬಾಗಿಲಿಗೆ ತಂದು ನಿಲ್ಲಿಸಿದವು. ಅದರಲ್ಲೂ ವಿಶೇಷವಾಗಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ಮತದಾರರು ಅತೀ ಹೆಚ್ಚಿನ ಪ್ರಮಾಣದಲ್ಲಿ ಮೋದಿ ಮತ್ತು ಕಮಲ ಪಾಳೆಯಕ್ಕೆ ಜೈಕಾರ ಹಾಕಿದ್ದು, ಬಿಜೆಪಿಯನ್ನು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವಿಗೆ ಒಯ್ದು ನಿಲ್ಲಿಸಿದವು.

ಕಮಲ ಬಿಡಲಿಲ್ಲ ಲಿಂಗಾಯತರು: ಕ್ಷೇತ್ರದಲ್ಲಿ 6 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಲಿಂಗಾಯತ ಮತದಾರರು ಬಿಜೆಪಿಯನ್ನು ಇನ್ನಷ್ಟು ಗಟ್ಟಿಯಾಗಿ ಹಿಡಿದುಕೊಂಡಿದ್ದು ಫಲಿತಾಂಶದ ರೂಪದಲ್ಲಿ ಗೋಚರಿಸಿತು. ಕಾಂಗ್ರೆಸ್‌ನ ಅಭ್ಯರ್ಥಿ ವಿನಯ್‌ ಕುಲಕರ್ಣಿ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದ್ದರಿಂದ ಈ ಬಾರಿಯಾದರೂ ಲಿಂಗಾಯತರು ವಿನಯ್‌ ಬೆಂಬಲಿಸುತ್ತಾರೆ ಎನ್ನುವ ಲೆಕ್ಕಾಚಾರವನ್ನು ಕಾಂಗ್ರೆಸ್‌ ಹಾಕಿತ್ತು. ಆದರೆ ಕೈ ನಿರೀಕ್ಷೆ ಸುಳ್ಳಾಗಿ ಮತ್ತೂಮ್ಮೆ ಲಿಂಗಾಯತರು ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ.

ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದಿಂದ ವರ್ಚಸ್ಸು ಹೆಚ್ಚಿಸಿಕೊಂಡಿದ್ದ ವಿನಯ್‌ ಕುಲಕರ್ಣಿ ಅವರಿಗೆ ಈ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಲಭಿಸುತ್ತವೆ ಎನ್ನುವ ನಿರೀಕ್ಷೆ ಇತ್ತು. ಆದರೆ ದಶಕಗಳ ಕಾಲ ಬಿಜೆಪಿ ಧ್ವಜ ಹಿಡಿದು ಓಡಾಡಿದ ಲಿಂಗಾಯತರು ಇದ್ದಕ್ಕಿದ್ದಂತೆ ಪಕ್ಷ ತೊರೆದು ಕೈ ಹಿಡಿಯುವುದು ಕಷ್ಟವಾಗಿ ಕೊನೆಗೂ ಕೈ ಕೊಟ್ಟರು. ಇದೇ ಬಿಜೆಪಿಯ ದೊಡ್ಡ ಗೆಲುವಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ಕೈ ಹಿಡಿಯಲಿಲ್ಲ ಹಳ್ಳಿಗರು: ಕ್ಷೇತ್ರ ವ್ಯಾಪ್ತಿಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ ಹು-ಧಾ ಪೂರ್ವ ಕ್ಷೇತ್ರ ಹೊರತು ಪಡಿಸಿದರೆ ಇನ್ನುಳಿದ ಎಲ್ಲ ಏಳೂ ವಿದಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಭಾರಿ ಮುನ್ನಡೆ ಕಾಯ್ದುಕೊಂಡಿದ್ದೇ ಕಾಂಗ್ರೆಸ್‌ ಸೋಲಿಗೆ ಪ್ರಮುಖ ಕಾರಣವಾಯಿತು. ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹೊರತು ಪಡಿಸಿದರೆ ಇನ್ನುಳಿದ ಎಲ್ಲ ಗ್ರಾಮೀಣ ಕ್ಷೇತ್ರಗಳಲ್ಲೂ ವಿನಯ್‌ ಕುಲಕರ್ಣಿ ಮುನ್ನಡೆ ಸಾಧಿಸುತ್ತಾರೆ ಎಂದು ಮತೋತ್ತರ ಸಮೀಕ್ಷೆಯಲ್ಲಿ ವಿಶ್ಲೇಷಿಸಲಾಗಿತ್ತು. ಆದರೆ ಹಳ್ಳಿಗರು ಕೂಡ ಮೋದಿ ಮೋಡಿಗೆ ಬೆರಗಾಗಿದ್ದು, ಅಲ್ಲಿಯೂ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿತು. ಅಷ್ಟೇಯಲ್ಲ, ಸ್ವತಃ ಮಾಜಿ ಸಚಿವ ವಿನಯ್‌ ಅವರು ಸ್ಪರ್ಧಿಸುವ ವಿಧಾನಸಭಾ ಕ್ಷೇತ್ರ ಧಾರವಾಡ ಗ್ರಾಮೀಣ ಮತ್ತು ಅವರ ತವರು ಕ್ಷೇತ್ರ ನವಲಗುಂದದಲ್ಲಿ ಕೈ ಪಡೆ ಹಿನ್ನಡೆ ಅನುಭವಿಸಿದೆ.

ಇತರರು ಕೈ ಕೊಟ್ಟರೆ ?
ಜಿಲ್ಲೆಯಲ್ಲಿನ ಲಕ್ಷದ ಗಡಿ ಆಸುಪಾಸು ಇರುವ ಮರಾಠಾ, ಕುರುಬ, 50 ಸಾವಿರ ಆಸುಪಾಸು ಇರುವ ರಡ್ಡಿ, ಜೈನ್‌, ಎಸ್‌ಎಸ್‌ಕೆ, ಕುಡುಒಕ್ಕಲಿಗ ಮತ್ತು ಇತರ ಸಮುದಾಯಗಳು ಕೂಡ ಈ ಬಾರಿ ಕಾಂಗ್ರೆಸ್‌ ಕೈ ಹಿಡಿಯಲಿಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಮತಗಳನ್ನು ಕಾಂಗ್ರೆಸ್‌ ಹೆಚ್ಚು ಅವಲಂಬಿಸಿಕೊಂಡಿತ್ತು. ಅದೂ ಅಲ್ಲದೇ ಮೋದಿ ಅಲೆ ಜಾತಿ, ಧರ್ಮಗಳ ಗಡಿಯನ್ನು ಮೀರಿ ಮತ ಬಾಚಿಕೊಂಡಿದೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಮತ್ತು ಕೇಂದ್ರ ಕ್ಷೇತ್ರಗಳೇ ಒಂದು ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆಯನ್ನು ಬಿಜೆಪಿಗೆ ಕೊಟ್ಟಿದ್ದು, ಇಲ್ಲಿ ಕಾಂಗ್ರೆಸ್‌ ಕಳಪೆ ಸಾಧನೆ ಮಾಡಿದೆ. 32 ಸಾವಿರಕ್ಕೂ ಅಧಿಕ ನೂತನ ಮತದಾರರು ಕೂಡ ಮೋದಿ ಅಲೆಯಲ್ಲಿ ತೇಲಿದ್ದು ಸ್ಪಷ್ಟವಾಗುತ್ತದೆ. ಟಿಕೆಟ್ ಸಿಕ್ಕದೇ ಹೋಗಿದ್ದಕ್ಕೆ ಅಲ್ಪಸಂಖ್ಯಾತರಲ್ಲಿನ ಅಸಮಾಧಾನಗೊಂಡ ಪಡೆ ಕೈ ಬೆಂಬಲಕ್ಕೆ ನಿಲ್ಲದೇ ದೂರ ಉಳಿದಿದ್ದು ಕಾಂಗ್ರೆಸ್‌ನ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಅಂಚೆ ಮತ ವಿವರ
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1727311 ಮತಗಳಿದ್ದು, ಈ ಪೈಕಿ 12,09,993 ಮತಗಳು ಚಲಾವಣೆಯಾಗಿದ್ದವು. ನೋಟಾಗೆ 3512 ಮತಗಳು ಬಂದಿವೆ. ಒಟ್ಟು 3620 ಅಂಚೆ ಮತಗಳು ಚಲಾವಣೆಯಾಗಿದ್ದು, 633 ಮತಗಳು ತಿರಸ್ಕೃತಗೊಂಡಿವೆ. ಇನ್ನುಳಿದಂತೆ ಬಿಜೆಪಿಯ ಪ್ರಹ್ಲಾದ ಜೋಶಿ ಅತೀ ಹೆಚ್ಚು 2280 ಮತಗಳನ್ನು ಪಡೆದುಕೊಂಡಿದ್ದು, ವಿನಯ್‌ ಕುಲಕರ್ಣಿ 646 ಮತ ಗಳಿಸಿದ್ದಾರೆ. ಈರಪ್ಪ ಮಾದರ-22, ಗಂಗಾಧರ ಬಡಿಗೇರ-5, ಹಸೀನಾಬಾನು-9, ಸೋಮಶೇಖರ್‌ ಯಾದವ-5, ರೇವಣಸಿದ್ದಪ್ಪ ತಳವಾರ-4 ಹಾಗೂ ರಾಜು ಕಾಂಬಳೆ, ವಾದಿರಾಜ್‌ ಮತ್ತು ಉದಯಕುಮಾರ್‌ ಅಂಬಿಗೇರ ತಲಾ 3 ಮತಗಳನ್ನು ಪಡೆದುಕೊಂಡಿದ್ದಾರೆ.
ಎಣಿಕೆಯ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡ ಜೋಶಿ

ಧಾರವಾಡ: ಕಾಂಗ್ರೆಸ್‌ ಪಕ್ಷ ವಿನಯ್‌ ಕುಲಕರ್ಣಿ ಅವರನ್ನು ಕಣಕ್ಕಿಳಿಸಿದಾಗ ಸಂಸದ ಪ್ರಹ್ಲಾದ ಜೋಶಿ ಅವರಿಗೆ ಈ ಬಾರಿಯಾದರೂ ಟಾಂಗ್‌ ಕೊಡಬಹುದು ಎನ್ನುವ ನಿರೀಕ್ಷೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಆದರೆ ಕಾಂಗ್ರೆಸ್‌ ನಿರೀಕ್ಷೆ ಹುಸಿಯಾಗಿ ಮೊದಲ ಸುತ್ತಿನಿಂದ ಕೊನೆಯ ಸುತ್ತಿನ ವರೆಗೂ ಬಿಜೆಪಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ತನ್ನ ಮುನ್ನಡೆ ಕಾಯ್ದುಕೊಂಡು ಅಚ್ಚರಿ ಮೂಡಿಸಿತು. ಅದರಲ್ಲೂ ಹುಬ್ಬಳ್ಳಿ-ಧಾರವಾಡ ಕೇಂದ್ರ ಮತ್ತು ಪಶ್ಚಿಮ ಕ್ಷೇತ್ರಗಳಲ್ಲಿ ತಲಾ 50 ಸಾವಿರಕ್ಕೂ ಅಧಿಕ ಮತಗಳನ್ನು ಕೂಡಿ ಹಾಕಿಕೊಂಡ ಕಮಲ ಪಡೆ ಜಯದತ್ತ ಭಾರಿ ದಾಪುಗಾಲು ಹಾಕಿತು.

1ನೇ ಸುತ್ತು: ಮೊದಲ ಸುತ್ತಿನಲ್ಲಿ ಬಿಜೆಪಿ ಒಟ್ಟು 41,193 ಮತಗಳನ್ನು ಪಡೆದುಕೊಂಡರೆ ಕಾಂಗ್ರೆಸ್‌ 28,431 ಮತಗಳನ್ನು ಪಡೆದುಕೊಂಡಿತು. ಇಲ್ಲಿ ಬಿಜೆಪಿ ಒಟ್ಟು 13762 ಮತಗಳ ಮುನ್ನಡೆ ಕಾಯ್ದುಕೊಂಡಿತು.

2ನೇ ಸುತ್ತು: ಈ ಸುತ್ತಿನಲ್ಲಿ ಬಿಜೆಪಿ 41,880 ಮತಗಳನ್ನು ಹಾಗೂ ಕಾಂಗ್ರೆಸ್‌ 28,929 ಮತಗಳನ್ನು ಪಡೆದುಕೊಂಡವು. ಇಲ್ಲಿ ಬಿಜೆಪಿ 12,951 ಮತಗಳ ಮುನ್ನಡೆ ಸಾಧಿಸಿತು.

3ನೇ ಸುತ್ತು: ಇಲ್ಲಿ ಬಿಜೆಪಿ 51,115 ಮತಗಳನ್ನು ಹಾಗೂ ಕಾಂಗ್ರೆಸ್‌ 31,536 ಮತಗಳನ್ನು ಪಡೆದುಕೊಂಡವು. ಬಿಜೆಪಿ 19,579 ಮತಗಳ ಅಂತರದಿಂದ ಮುನ್ನಡೆ ಸಾಧಿಸಿತು.

4ನೇ ಸುತ್ತು: ಈ ಸುತ್ತಿನಲ್ಲಿ ಬಿಜೆಪಿ 34,111 ಹಾಗೂ ಕಾಂಗ್ರೆಸ್‌ 26,192 ಮತಗಳನ್ನು ಪಡೆದವು. ಇಲ್ಲಿ ಬಿಜೆಪಿ 7,917 ಮತಗಳ ಮುನ್ನಡೆ ಕಾಯ್ದುಕೊಂಡಿತು.

5ನೇ ಸುತ್ತು: ಇಲ್ಲಿ ಬಿಜೆಪಿ 42,365 ಹಾಗೂ ಕಾಂಗ್ರೆಸ್‌ 24,497 ಮತಗಳನ್ನು ಪಡೆದುಕೊಂಡಿತು. ಈ ಸುತ್ತಿನಲ್ಲಿ ಬಿಜೆಪಿ 17,868 ಮತಗಳ ಮುನ್ನಡೆ ಸಾಧಿಸಿತು.

6ನೇ ಸುತ್ತು: ಈ ಸುತ್ತಿನಲ್ಲಿ ಬಿಜೆಪಿ 45,583 ಹಾಗೂ ಕಾಂಗ್ರೆಸ್‌ 25,377 ಮತಗಳನ್ನು ಪಡೆದುಕೊಂಡವು. ಇಲ್ಲಿ ಬಿಜೆಪಿ 20,206 ಮತಗಳ ಮುನ್ನಡೆ ಸಾಧಿಸಿತು.

7ನೇ ಸುತ್ತಿನಿಂದ 18ನೇ ಸುತ್ತಿನ ವರೆಗೂ ಬಿಜೆಪಿ ಪ್ರತಿ ಸುತ್ತಿನಲ್ಲಿಯೂ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಲೇ ಹೊಯಿತು. ಪ್ರತಿ ಸುತ್ತಿನಲ್ಲೂ ಅಂದಾಜು 20-25 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿತು. ಕೊನೆಯ ಸುತ್ತಿನಲ್ಲೂ ಬಿಜೆಪಿ ಭರ್ಜರಿ 23,457 ಮತಗಳ ಮುನ್ನಡೆಯೊಂದಿಗೆ ಒಟ್ಟು 2,05,074 ಮತಗಳ ಭಾರಿ ಅಂತರದಿಂದ ಜಯ ಗಳಿಸಿತು.
ನಾಲ್ಕನೇ ಬಾರಿ ಗೆಲುವಿನ ನಗು; 2 ಲಕ್ಷಕ್ಕೂ ಅಧಿಕ ಮತ ವಿಕ್ರಮ
ಧಾರವಾಡ:
ರಾಜ್ಯದ ಹೈವೋಲೆrೕಜ್‌ ಕ್ಷೇತ್ರಗಳ ಪೈಕಿ ಒಂದಾಗಿದ್ದ ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಸತತ 4ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.

ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಿನಯ್‌ ಕುಲಕರ್ಣಿ ಅವರಿಗಿಂತಲೂ 2,05,074 ಮತಗಳ ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡರು. ಸಂಸದ ಪ್ರಹ್ಲಾದ ಜೋಶಿ ಒಟ್ಟು 6,84,837 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ವಿನಯ್‌ ಕುಲಕರ್ಣಿ 4,79,765 ಮತಗಳನ್ನು ಪಡೆದುಕೊಂಡರು. ಬಿಎಸ್‌ಪಿಯ ಈರಪ್ಪ ಮಾದರ 6344 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರೆ, ನೋಟಾಗೆ ಒಟ್ಟು 3512 ಮತಗಳು ಬಂದಿವೆ.

ಹು-ಧಾ ಪೂರ್ವ ಕ್ಷೇತ್ರದ ಮತಗಳನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಡೌನ್‌ಲೋಡ್‌ ಮಾಡುವಲ್ಲಿ ಉಂಟಾದ ವಿಳಂಬದಿಂದಾಗಿ ಸಂಜೆ 6 ಗಂಟೆ ನಂತರವೇ ಕ್ಷೇತ್ರದ ಪೂರ್ಣ ಪ್ರಮಾಣದ ಫಲಿತಾಂಶ ಹೊರಬಂದಿತು. ಜಿಲ್ಲಾಧಿಕಾರಿ ದೀಪಾ ಚೋಳನ್‌ ಅವರು ಸಂಜೆ 5:30ಕ್ಕೆ ಪ್ರಹ್ಲಾದ ಜೋಶಿ ಅವರಿಗೆ ಗೆಲುವಿನ ಪ್ರಮಾಣ ಪತ್ರ ನೀಡಿದರು.

17 ಜನರ ಠೇವಣಿ ಭರಕಾಸ್ತು: ಧಾರವಾಡ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಒಟ್ಟು 19 ಅಭ್ಯರ್ಥಿಗಳ ಪೈಕಿ 17 ಜನರ ಠೇವಣಿ ನಷ್ಟವಾಗಿದೆ. ಈ ಪೈಕಿ 10 ಜನ ಸ್ವತಂತ್ರ ಅಭ್ಯರ್ಥಿಗಳಾಗಿದ್ದು ಇನ್ನುಳಿದ ಏಳು ಜನ ವಿವಿಧ ಪಕ್ಷದ ಅಭ್ಯರ್ಥಿಗಳಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next