ಕೆ.ಆರ್.ನಗರ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಲ್ಲ. ಅವರು ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿಯಾಗಿದ್ದು, ಮತದಾರರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು.
ತಾಲೂಕಿನ ಹೊಸೂರು ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖೀಲ್‌ಕುಮಾರಸ್ವಾಮಿ ಪರ ಮತ ಯಾಚಿಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಕೆಲವರು ಬಿಜೆಪಿ ಬಿ.ಟೀಮ್ ಎಂದು ಟೀಕಿಸುತ್ತಿದ್ದರು. ಆದರೆ, ಈಗ ಬಿ.ಟೀಮ್ ಯಾರು ಎಂದು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.
ಯಾರು ಬೇಕು?: ಚಲನಚಿತ್ರ ವೀಕ್ಷಿಸಿ ಭರವಸೆ ಇಟ್ಟುಕೊಂಡು ಮನೆ ಬಾಗಿಲಿಗೆ ಹೋದವರನ್ನು ಮಾತನಾಡಿಸದೇ ದೂರ ತಳ್ಳುವವರು ಬೇಕೋ ಅಥವಾ 80 ವರ್ಷ ಇಳಿ ವಯಸ್ಸಿನಲ್ಲಿಯೂ ರಾಜ್ಯವನ್ನು ಸುತ್ತಿ ಜನರ ಸಂಕಷ್ಟ ಆಲಿಸುವ ಎಚ್.ಡಿ.ದೇವೇಗೌಡರಂತಹ ರಾಷ್ಟ್ರ ನಾಯಕ ಬೇಕೆ ಎಂಬುದನ್ನು ಮತದಾರರು ನಿರ್ಧರಿಸಬೇಕಿದೆ. ಜನರು ಬುದ್ಧಿವಂತರಿದ್ದು, ಉತ್ತಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ತಾಲೂಕಿಗೆ 800 ಕೋಟಿ ರೂ.: ರೈತರ ಜೀವನಾಡಿಯಾಗಿರುವ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ ಟೆಂಡರ್ ನೀಡಿ ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ರಮ ಕೈಗೊಂಡಿದ್ದಾರೆ. ತಾಲೂಕಿನ ಅಭಿವೃದ್ಧಿಗೆ 800 ಕೋಟಿ ರೂ. ಅನುದಾನ ನೀಡಿದ್ದು, ಮತದಾರರು ಇದನ್ನರಿತು ನಿಖೀಲ್‌ಗೆೆ ಮತ ನೀಡಬೇಕೆಂದು ಕೋರಿದರು.
ನಂತರ ಸಚಿವ ಸಾ.ರಾ.ಮಹೇಶ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಡನೆ ಚುಂಚನಕಟ್ಟೆ ಹೋಬಳಿಯ ಚುಂಚನಕಟ್ಟೆ, ದಿಡ್ಡಹಳ್ಳಿ, ಸಾಲೆಕೊಪ್ಪಲು, ದೊಡ್ಡಕೊಪ್ಪಲು, ಚಿಕ್ಕಕೊಪ್ಪಲು, ಕುಪ್ಪೆ, ಮುದ್ದನಹಳ್ಳಿ ಮತ್ತಿತರ ಗ್ರಾಮಗಳಿಗೆ ತೆರಳಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಹೆಚ್.ಆರ್.ಮಧುಚಂದ್ರ, ಟಿಎಪಿಸಿಎಂಎಸ್ ನಿರ್ದೇಶಕ ಎಸ್.ಟಿ.ಕೀರ್ತಿ, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಕಾರ್ಯಾಧ್ಯಕ್ಷ ಪ್ರದೀಪ್ ಪಾಪಣ್ಣಿ, ಭೂ ನ್ಯಾಯಮಂಡಳಿ ಸದಸ್ಯ ಬಿ.ರಮೇಶ, ಜೆಡಿಎಸ್ ಮುಖಂಡರಾದ ಎಚ್.ಕೆ.ಮಧುಚಂದ್ರ ಇತರರು ಹಾಜರಿದ್ದರು.