ಹೊಸದಿಲ್ಲಿ: ಉತ್ತರ ಪ್ರದೇಶದ ಎರಡು ಲೋಕಸಭಾ ಸ್ಥಾನಗಳು ಹಾಗೂ ನಾಲ್ಕು ರಾಜ್ಯ ಗಳ ಏಳು ವಿಧಾನ ಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ- ಚುನಾವಣೆಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಈ ಕ್ಷೇತ್ರಗಳಿಗೆ ಜೂ. 23ರಂದು ಮತದಾನ ನಡೆಯಲಿದೆ.ಉತ್ತರ ಪ್ರದೇಶದ ರಾಮ್‌ಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಘನಶ್ಯಾಮ್ ಲೋಧಿಯವರನ್ನು ಕಣಕ್ಕಿಳಿಸಲಾಗಿದ್ದರೆ, ಆಜಂಗಢ ಕ್ಷೇತ್ರಕ್ಕೆ ಭೋಜ್‌ಪುರಿ ಚಿತ್ರನಟ ಹಾಗೂ ರಾಜಕೀಯ ನೇತಾರ ದಿನೇಶ್ ಲಾಲ್ ಯಾದವ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.
ಇದೇ ವರ್ಷ ಜನವರಿಯಲ್ಲಿ ಘನಶ್ಯಾಮ್ ಲೋಧಿಯವರು ಸಮಾಜವಾದಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ನಖ್ವಿ ಗೆ ಕೊಕ್!: ಬಿಜೆಪಿಯಲ್ಲಿ ಅಲ್ಪಸಂಖ್ಯಾಕರ ನಾಯಕರೆಂದೇ ಗುರುತಿಸಿಕೊಂಡಿರುವ ಮುಖ್ತಾರ್ ಅಬ್ಬಾಸ್ ನಖ್ವಿಯವರಿಗೆ ಆಜಂಗಢ ಕ್ಷೇತ್ರದಿಂದ ಟಿಕೆಟ್ ನೀಡಲಾಗುತ್ತದೆಂದು ಭಾವಿಸಲಾಗಿತ್ತು. ಇತ್ತೀಚೆಗೆ ರಾಜ್ಯಸಭಾ ಸದಸ್ಯತ್ವಕ್ಕಾಗಿ ಬಿಜೆಪಿ ಕಣಕ್ಕಿಳಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಾಲಿ ರಾಜ್ಯಸಭಾ ಸದಸ್ಯ ಮುಖ್ತಾರ್ ಅಬ್ಬಾಸ್ ನಖ್ವಿ ಹೆಸರು ಇರಲಿಲ್ಲ. ಹಾಗಾಗಿ, ಅವರನ್ನು ಆಜಂಗಢದ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಣಕ್ಕಿಳಿಸಲಾಗುತ್ತದೆ ಎಂದು ಹೇಳಲಾಗಿತ್ತು.
ಸಾಹಾರಿಗೆ ಸ್ಪರ್ಧಿಸಲು ಅವಕಾಶ: ತ್ರಿಪುರಾದಲ್ಲಿ ಹಾಲಿ ಸಿಎಂ ಮಾಣಿಕ್ ಸಾಹಾ ಅವರನ್ನು ಬೊರಾಡ್ವಾಲಿ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಡಾ| ಅಶೋಕ್ ಅವರಿಗೆ ಅಗರ್ತಲಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಅಂತೆಯೇ, ಸ್ವಪ್ನಾ ದಾಸ್ ಪಾಲ್‌ಗೆ ಸುರ್ಮಾ ಕ್ಷೇತ್ರದಿಂದ, ಮಲಿನಾ ದೇಬರಥ್ ಅವರಿಗೆ ಜುಬಾರನಗರ್‌ನಿಂದ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.
ಇತರೆಡೆ ಅಭ್ಯರ್ಥಿಗಳ ಘೋಷಣೆ: ಆಂಧ್ರ ಪ್ರದೇಶದಲ್ಲಿ ಗುಂಡ್ಲಪಲ್ಲಿ ಭರತ್ ಕುಮಾರ್ ಯಾದವ್ (ಆತ್ಮಾಕುರ್), ದಿಲ್ಲಿಯಲ್ಲಿ ರಾಜೇಶ್ ಭಾತಿ (ರಾಜಿಂದರ್ ನಗರ್), ಝಾರ್ಖಂಡ್‌ನಲ್ಲಿ ಗಂಗೋತ್ರಿ ಕುಜೂರ್ (ಮಂದಾರ್) ಅವರಿಗೆ ಟಿಕೆಟ್ ನೀಡಲಾಗಿದೆ.