ಮುಂಬೈ: ಭಾರತೀಯ ಜನತಾ ಪಕ್ಷ ಮತ್ತು ಶಿವಸೇನಾ ಸೋಮವಾರ ಪ್ರತ್ಯೇಕವಾಗಿ ಮಹಾರಾಷ್ಟ್ರ ಗವರ್ನರ್ ಭಗತ್ ಸಿಂಗ್ ಕೋಶಯಾರಿ ಅವರನ್ನು ಭೇಟಿಯಾಗಲಿದ್ದು, ಸರ್ಕಾರ ರಚನೆ ಬಗ್ಗೆ ಚರ್ಚೆ ನಡೆಸಲಿವೆ ಎಂದು ವರದಿ ತಿಳಿಸಿದೆ.
ಇಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಶಿವಸೇನಾ ಹಿರಿಯ ಮುಖಂಡ, ಸಾರಿಗೆ ಸಚಿವ ದಿವಾಕರ್ ರಾವೋಟೆ ರಾಜಭವನದಲ್ಲಿ ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ವರದಿ ವಿವರಿಸಿದೆ.
ಯಾವುದೇ ಕಾರಣಕ್ಕೂ ಚುನಾವಣಾ ಪೂರ್ವದ ಮೈತ್ರಿಯನ್ನು ಗಂಭೀರವಾಗಿ ಪರಿಗಣಿಸಬಾರದು, ಅಲ್ಲದೇ ಬಿಜೆಪಿ ಅತಿದೊಡ್ಡ ಪಕ್ಷ ಎಂಬ ನೆಲೆಯಲ್ಲಿ ಸರಕಾರ ರಚಿಸಲು ಅವಕಾಶ ನೀಡಬಾರದು. ಶಿವಸೇನಾ 50; 50 ಸೂತ್ರದ ಬಗ್ಗೆ ಎದುರು ನೋಡುತ್ತಿದೆ ಎಂಬುದನ್ನು ಗವರ್ನರ್ ಗೆ ಶಿವಸೇನಾ ಮನದಟ್ಟು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ಸರಕಾರ ರಚಿಸುವ ಮೊದಲು ಬಿಜೆಪಿ 50;50 ಸೂತ್ರದ ಬಗ್ಗೆ ಲಿಖಿತವಾಗಿ ನಮಗೆ ಆಶ್ವಾಸನೆ ನೀಡಬೇಕು. ಅದರಂತೆ ಶಿವಸೇನಾಗೆ 2.5 ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಬಿಜೆಪಿ ಹೈಕಮಾಂಡ್ ಗೆ ಒತ್ತಾಯಿಸಿದೆ.
ಶಿವಸೇನಾ ಮತ್ತು ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ಹಂಚಿಕೆ ಬಗ್ಗೆ ಬಿಜೆಪಿಯ ಅಮಿತ್ ಶಾ ಅಥವಾ ದೇವೇಂದ್ರ ಫಡ್ನವೀಸ್ ಲಿಖಿತ ಭರವಸೆ ನೀಡಬೇಕು. ಆ ನಂತರವೇ ಮಹಾರಾಷ್ಟ್ರದಲ್ಲಿ ಸರಕಾರ ರಚನೆಯಾಗಲಿದೆ ಎಂದು ಶಿವಸೇನಾ ಈಗಾಗಲೇ ಸಂದೇಶ ರವಾನಿಸಿತ್ತು.