ಕುಷ್ಟಗಿ: ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಹಳೆ ವೈಷಮ್ಯ ಘರ್ಷಣೆಗೆ ತಿರುಗಿದ ಘಟನೆ ತಾಲೂಕಿನ ಮಲಕಾಪೂರ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದ ಬಿಜೆಪಿ ಕಾರ್ಯಕರ್ತ ಸಂಗಪ್ಪ ಅರಹುಣಸಿ ಹಲ್ಲೆಗೆ ಒಳಗಾದ ವ್ಯಕ್ತಿಯಾಗಿದ್ದು, ಪತ್ನಿ ಜಯಶ್ರೀ ಅರಹುಣಸಿ ನೀಡಿದ ದೂರಿನ ಮೇರೆಗೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಸುರೇಶ ಹೇಮನಗೌಡ ಗೌಡರ, ರಾಮನಗೌಡ ಅಲಿಯಾಸ್ ರಮೇಶ ಚಂದನಗೌಡ ಗೌಡರ ವಿರುದ್ದ ದೂರು ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಆಗಿದ್ದೇನು?: ಸಂಗಪ್ಪ ಅರಹುಣಸಿ ಬುಧವಾರ ಹೊಲದಿಂದ ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಸುರೇಶ ಹಾಗೂ ರಮೇಶ ಎನ್ನುವವರು ಕ್ಯಾತೆ ತೆಗೆದಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡುತ್ತಾನೆಂದು ತಿಳಿದು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಪತಿಯನ್ನು ರಕ್ಷಿಸಲು ಮುಂದಾದ ಪತ್ನಿಗೂ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ:ನಿಮ್ಮ ಪ್ರತಿಭಟನೆ ಕುವೆಂಪು ವಿರುದ್ಧವೇ? ಕಾಂಗ್ರೆಸ್ ನವರೇ ಉತ್ತರ ಕೊಡಿ ಎಂದ ಬಿಜೆಪಿ
ಕಳೆದ ಒಂದೂವರೆ ವರ್ಷಗಳ ಹಿಂದೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿಯ ಸಂಗಪ್ಪ ಅರಹುಣಸಿ ಗೆದ್ದಿದ್ದರು. ಕಾಂಗ್ರೆಸ್ ನ ರಮೇಶ, ಸುರೇಶ ಸೋತಿದ್ದರು. ಈ ಹಿನ್ನೆಲೆಯಲ್ಲಿ ಇವರುಗಳ ನಡುವೆ ಆಗಾಗ ಜಗಳ ನಡೆದು ಠಾಣೆಯ ಮೆಟ್ಟಿಲೇರಿತ್ತು. ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.