Advertisement

BJP 40 %: ನ್ಯಾಯಾಂಗ ತನಿಖೆಗೆ ?

10:01 PM Jul 30, 2023 | Team Udayavani |

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರವನ್ನು ಶೇ.40ರ ಭ್ರಷ್ಟ ಸರ್ಕಾರ ಎಂದಿದ್ದ ಕಾಂಗ್ರೆಸ್‌, ಇದೀಗ ಈ ಪ್ರಕರಣಗಳನ್ನು ತನ್ನ ಅವಧಿಯಲ್ಲೇ ನ್ಯಾಯಾಂಗ ತನಿಖೆಗೆ ವಹಿಸಲು ಮುಂದಾಗಿದೆ.

Advertisement

ಗುತ್ತಿಗೆದಾರರ ಸಂಘದ ಕೆಂಪಣ್ಣ ಬರೆದಿದ್ದ ಪತ್ರ ಮುಂದಿಟ್ಟುಕೊಂಡು ಅಂದು ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್‌ ಪೇ ಸಿಎಂ ಅಭಿಯಾನ ನಡೆಸಿತ್ತು. ಅಲ್ಲದೆ, ಅಧಿಕಾರಕ್ಕೆ ಬಂದರೆ ಈ ಎಲ್ಲ ಹಗರಣಗಳನ್ನೂ ತನಿಖೆಗೊಪ್ಪಿಸಿ ಬಯಲಿಗಿಡುವುದಾಗಿ ಹೇಳಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿ ಎರಡು ತಿಂಗಳಾಗಿದ್ದು, ಪದೇಪದೆ ಈ ಪ್ರಶ್ನೆ ಎದುರಾಗುತ್ತಲೇ ಇದೆ. ನಮ್ಮ ವಿರುದ್ಧ ವಿನಾಕಾರಣ ಆರೋಪಿಸಿದ್ದವರೇ ಇಂದು ಅಧಿಕಾರಲ್ಲಿದ್ದಾರೆ. ತನಿಖೆ ನಡೆಸಲಿ ಎಂದು ಬಿಜೆಪಿ ಕೂಡ ಸವಾಲು ಹಾಕುತ್ತಲೇ ಬಂದಿದೆ.

ಆದರೆ, ಈ ವಿಚಾರದಲ್ಲಿ ಸಾಕಷ್ಟು ತಾಂತ್ರಿಕ ತೊಡಕುಗಳಿದ್ದು, ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾತ್ರ ಆರೋಪಗಳಿವೆಯೇ? ಇತರೆ ಇಲಾಖೆಗಳಿಗೆ ಸಂಬಂಧಿಸಿದಂತೆಯೂ ಇವೆಯೇ? ಎಂಬಿತ್ಯಾದಿ ಅಂಶಗಳನ್ನು ಕಾನೂನು ಇಲಾಖೆ ಪರಾಮರ್ಶೆ ಮಾಡುತ್ತಿದೆ. ಕೆಂಪಣ್ಣ ಅವರು ಬರೆದಿದ್ದ ಪತ್ರಗಳೂ ಸೇರಿದಂತೆ ಪ್ರಕರಣವನ್ನು ಸಾಬೀತುಪಡಿಸುವ ಗಟ್ಟಿಯಾದ ಸಾಕ್ಷ್ಯಾಧಾರಗಳು ಏನಿರಬಹುದು ಎಂಬುದನ್ನೂ ಅಳೆದುತೂಗುತ್ತಿರುವ ಕಾನೂನು ಇಲಾಖೆ, ಇದಕ್ಕಾಗಿ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿ ತನಿಖೆಗೊಳಪಡಿಸುವುದು ಸೂಕ್ತ ಎಂಬ ಸಲಹೆಗಳು ಬಂದಿರುವುದರಿಂದ ಈ ಬಗ್ಗೆಯೂ ಚಿಂತನೆಗಳು ನಡೆಸಿದೆ. ನಿವೃತ್ತ ನ್ಯಾ.ನಾಗಮೋಹನ್‌ ದಾಸ್‌ ಅವರೂ ಸೇರಿದಂತೆ ಕೆಲವರ ಹೆಸರುಗಳು ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿದ್ದು, ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಗಳಿವೆ.

ತನಿಖೆ ನಡೆಸಿ, ಸತ್ಯಾಸತ್ಯತೆ ಬಯಲಿಗಿಡಿ
ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಸಿ.ಟಿ. ರವಿ, ನಮ್ಮ ಸರ್ಕಾರ ಇದ್ದಾಗ ಆರೋಪ ಮಾಡಿಕೊಂಡೇ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಶೇ.40ರಷ್ಟು ಲಂಚ ಯಾರು ಯಾರಿಗೆ ಕೊಟ್ಟಿದ್ದಾರೆ ಎಂಬುದು ಗೊತ್ತಾಗಲಿ. ತನಿಖೆ ನಡೆಸಿ, ಸತ್ಯಾಸತ್ಯತೆ ಬಯಲಿಗಿಡಲಿ. ಲಂಚ ಕೊಟ್ಟವರ್ಯಾರು, ಅಧಿಕಾರಿ, ಮಂತ್ರಿ, ಶಾಸಕರಲ್ಲಿ ಯಾರು ಲಂಚ ಪಡೆದಿದ್ದಾರೆ ಎಂಬುದೆಲ್ಲವೂ ತಿಳಿಯಲಿ ಎಂದಿದ್ದಾರೆ.

Advertisement

ನೈಸ್‌ ರಸ್ತೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಬಂದಾಗ ಕಾಂಗ್ರೆಸ್‌ ಸರ್ಕಾರವೇ ಸದನ ಸಮಿತಿ ರಚಿಸಿತ್ತು. ವರದಿ ಬಂದರೂ ಯಾವುದೇ ಕ್ರಮ ಜರುಗಿಸಿರಲಿಲ್ಲ. ಅರ್ಕಾವತಿ ಭೂಮಿ ರೀಡೂ ಆರೋಪದ ತನಿಖೆಗೆ ಕೆಂಪಣ್ಣ ನೇತೃತ್ವದಲ್ಲಿ ಆಯೋಗ ರಚಿಸಿ, ವರದಿ ಪಡೆದುಕೊಂಡಿತ್ತು. ಇದರ ಮೇಲೂ ಕ್ರಮ ಆಗಿರಲಿಲ್ಲ. ಕನಿಷ್ಠಪಕ್ಷ ನಮ್ಮ ಪಕ್ಷದ ವಿರುದ್ಧ ಮಾಡಿರುವ ಸುಳ್ಳು ಆರೋಪದ ತನಿಖೆಯನ್ನಾದರೂ 3 ತಿಂಗಳಲ್ಲಿ ಮುಗಿಸಿ, ವರದಿ ಪಡೆದುಕೊಳ್ಳಿ. ಆಗ ಸರ್ಕಾರದ ಮೇಲೆ ಭರವಸೆ ಬರುತ್ತದೆ. ಇಲ್ಲದಿದ್ದರೆ, ಬೇರೇನೋ ಷಡ್ಯಂತ್ರ ನಡೆಸಿದ್ದೀರಿ ಎಂಬುದು ಸಾಬೀತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾರ ಮೇಲೂ ವೃಥಾ ಆರೋಪ ಮಾಡಲ್ಲ
ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ಚಿತ್ರೀಕರಿಸಿದ ಪ್ರಕರಣದಲ್ಲಿ ಏನೂ ಇಲ್ಲದಿದ್ದರೆ ಕಾಲೇಜಿನ ಆಡಳಿತ ಮಂಡಳಿಯು ವಿದ್ಯಾರ್ಥಿನಿಯರನ್ನು ಅಮಾನತು ಮಾಡಿದ್ದೇಕೆ? ಪೊಲೀಸರು ಎಫ್ಐಆರ್‌ ಹಾಕಿದ್ದೇಕೆ? ನಾವು ಯಾರ ಮೇಲೂ ವೃಥಾ ಆರೋಪ ಮಾಡುವುದಿಲ್ಲ, ಯಾರಿಗೂ ಕ್ಲೀನ್‌ ಚಿಟ್‌ನೂ° ನೀಡುವುದಿಲ್ಲ. ಆದರೆ, ಸರ್ಕಾರದ ನಡೆಯು ತನಿಖೆಗೆ ಮೊದಲೇ ಕ್ಲೀನ್‌ ಚಿಟ್‌ ನೀಡುವ ನಿಟ್ಟಿನಲ್ಲಿ ಇದ್ದಿದ್ದರಿಂದ ಅನುಮಾನ ಹೆಚ್ಚಾಗಿದೆ.

ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಗಲಭೆ ಪ್ರಕರಣದಲ್ಲಿ ಪೊಲೀಸ್‌ ಠಾಣೆಗೆ ಬೆಂಕಿ ಹಾಕಿದವರು ಅಮಾಯಕರು ಹೇಗಾಗುತ್ತಾರೆ? ಸರ್ಕಾರ ಬದಲಾದ ಕೂಡಲೇ ಗಲಭೆಕೋರರು ಅಮಾಯಕರಾಗಿಬಿಡುತ್ತಾರಾ? ಪ್ರಕರಣ ದಾಖಲಾದಾಗಲೇ ಇವರು ಅಮಾಯಕರು ಎಂದು ಏಕೆ ಹೇಳಲಿಲ್ಲ? ಅದೇನು ರೈತ ಚಳವಳಿಯೇ? ಕನ್ನಡಪರ ಹೋರಾಟವೇ? ಇಷ್ಟಕ್ಕೂ ಅಮಾಯಕರು ಎಂಬ ನಿರ್ಣಯವನ್ನು ಯಾರು ಮಾಡಬೇಕು? ಇವರೇ ತನಿಖೆ ಮಾಡಿ, ವರದಿ ಕೊಡುತ್ತಿದ್ದಾರಾ? ನ್ಯಾಯಾಲಯದ ಪಾತ್ರವನ್ನೂ ಇವರೇ ವಹಿಸುತ್ತಾರಾ? ಕಾಂಗ್ರೆಸ್‌ನ ಇಂತಹ ನಡವಳಿಕೆಗಳೇ ಅಮಾನವನ್ನು ಜಾಸ್ತಿ ಮಾಡುತ್ತವೆ ಎಂದು ಸಿ.ಟಿ. ರವಿ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next