ಸೌಥಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯ ಅಂತ್ಯವಾಗಿದೆ. ಉತ್ತಮವಾಗಿ ಆಡಿದ ಕೇನ್ ವಿಲಿಯಮ್ಸನ್ ಬಳಗ ಜಯ ಸಾಧಿಸಿ ಟೆಸ್ಟ್ ಕ್ರಿಕೆಟ್ ಇತಿಹಾಸದ ಮೊದಲ ಚಾಂಪಿಯನ್ ಪಟ್ಟಕ್ಕೇರಿದೆ. ಇದೇ ವೇಳೆ ತನ್ನ ಕ್ರಿಕೆಟ್ ಜೀವನದ ಅಂತಿಮ ಅಂತಾರಾಷ್ಟ್ರೀಯ ಪಂದ್ಯವಾಡಿದ ನ್ಯೂಜಿಲ್ಯಾಂಡ್ ಕೀಪರ್ ಬಿಜೆ ವಾಟ್ಲಿಂಗ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಅಂತಿಮ ದಿನದಾಟದಲ್ಲಿ ಬಿಜೆ ವಾಟ್ಲಿಂಗ್ ಅವರು ಭಾರತದ ಮಾಜಿ ನಾಯಕ, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಯವರ ದಾಖಲೆಯನ್ನು ಅಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಹೆಚ್ಚು ಕ್ಯಾಚ್ ಪಡೆದವರ ಪಟ್ಟಿಯಲ್ಲಿ ವಾಟ್ಲಿಂಗ್ ಇದೀಗ ಧೋನಿಗಿಂತ ಮುಂದಿದ್ದಾರೆ.
ಇದನ್ನೂ ಓದಿ:ಐಸಿಸಿ ವಿಶ್ವಕಪ್ ಟೆಸ್ಟ್ ಚಾಂಪಿಯನ್‌ಶಿಪ್ ನಲ್ಲಿ ಚಾಂಪಿಯನ್ ಆದ ನ್ಯೂಜಿಲ್ಯಾಂಡ್
ಮಹೇಂದ್ರ ಸಿಂಗ್ ಧೋನಿ 166 ಇನ್ನಿಂಗ್ಸ್ ಗಳಲ್ಲಿ 256 ಕ್ಯಾಚ್ ಪಡೆದಿದ್ದರು. ನಿನ್ನೆ ತನ್ನ 127ನೇ ಇನ್ನಿಂಗ್ಸ್ ಆಡಿದ ವಾಟ್ಲಿಂಗ್ 257ನೇ ಕ್ಯಾಚ್ ಪಡೆದು ಧೋನಿಯನ್ನು ಹಿಂದಿಕ್ಕಿದ್ದಾರೆ. ನೀಲ್ ವ್ಯಾಗ್ನರ್ ಎಸೆತದಲ್ಲಿ ರವೀಂದ್ರ ಜಡೇಜಾರ ಕ್ಯಾಚ್ ಪಡೆಯುವ ಮೂಲಕ ವಾಟ್ಲಿಂಗ್ ಈ ಸಾಧನೆ ಮಾಡಿದರು. ಅಂದಹಾಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದವರ ಪಟ್ಟಿಯಲ್ಲಿ ವಾಟ್ಲಿಂಗ್ ಸದ್ಯ ಏಳನೇ ಸ್ಥಾನದಲ್ಲಿದ್ದಾರೆ.
ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಮಾರ್ಕ್ ಬೌಚರ್. ಅವರು ಬರೋಬ್ಬರಿ 532 ಕ್ಯಾಚ್ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿರುವ ಆ್ಯಡಂ ಗಿಲ್ ಕ್ರಿಸ್ಟ್ ಹಿಡಿದಿರುವುದು 379 ಕ್ಯಾಚ್ ಗಳನ್ನು.