ಕಾನ್ಪುರ: ಯಾರಿಗಾದರೂ ಹಾವು ಕಚ್ಚಿದರೆ ಕೂಡಲೇ ಅವರನ್ನು ತುರ್ತು ಚಿಕಿತ್ಸೆ ನೀಡಲು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತದೆ. ಆದರೆ ಇಲೊಬ್ಬರು ಹಾವು ಕಚ್ಚಿ ಚಿಕಿತ್ಸೆ ಪಡೆಯಲು 1,307 ಕಿ.ಮೀ ದೂರ ಪ್ರಯಾಣಿಸಿ ಆಸ್ಪತ್ರೆಗೆ ಬಂದಿದ್ದಾರೆ.
ಉತ್ತರ ಪ್ರದೇಶದ ಫತೇಪುರದ ಸುನಿಲ್ ಕುಮಾರ್ (20) ಗುಜರಾತ್‌ನ ರಾಜ್ ಕೋಟ್ ನಲ್ಲಿ ಕೂಲಿ ಕೆಲಸ ಮಾಡುತ್ತಾರೆ.
ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡುತ್ತಿದ್ದ ವೇಳೆ ಸುನಿಲ್ ಅವರಿಗೆ ಹಾವೊಂದು ಕಚ್ಚಿದ್ದು, ಕೂಡಲೇ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿದೆ. ಆದರೆ ಹಾವು ಕಡಿತದಿಂದ ಅವರ ಸ್ಥಿತಿ ಗಂಭೀರವಾಗಿದ್ದು, ಕೆಲ ಸಮಯದ ಬಳಿಕ ಅವರು ಪ್ರಜ್ಞೆ ತಪ್ಪಿದ್ದಾರೆ.
ಅವರ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಅವರ ಕುಟುಂಬ ಸದಸ್ಯರು ಚಿಂತಿತರಾಗಿದ್ದು, ಸುನಿಲ್ ಅವರ ಚಿಕಿತ್ಸೆಗೆ 1,307 ಕಿ.ಮೀ ದೂರವಿರುವ ಕಾನ್ಪುರದ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ.
ಇದಕ್ಕಾಗಿ ಕುಟುಂಬದ ಸದಸ್ಯರು ಗುಜರಾತ್‌ನಲ್ಲಿ 51,000 ರೂಪಾಯಿಗಳಿಗೆ ಅಡ್ವಾನ್ಸ್ಡ್ ಲೈಫ್ ಸಪೋರ್ಟ್ (ALS) ಆಂಬ್ಯುಲೆನ್ಸ್ ನ್ನು ಬಾಡಿಗೆಗೆ ಪಡೆದಿದ್ದಾರೆ. ರೋಗಿಯನ್ನು ಕಾನ್ಪುರಕ್ಕೆ ಕರೆತರಲು 1,307 ಕಿಮೀ ದೂರ ಪ್ರಯಾಣಿಸಿ ಎಲ್‌ಎಲ್‌ಆರ್ ಆಸ್ಪತ್ರೆ ತಲುಪಿದ ಕೂಡಲೇ ವೆಂಟಿಲೇಟರ್‌ನಲ್ಲಿರಿಸಿ ಚಿಕಿತ್ಸೆ ಆರಂಭಿಸಲಾಗಿದೆ.
ವೈದ್ಯರ ನಿರಂತರ ಪ್ರಯತ್ನದಿಂದ ರೋಗಿ ಚೇತರಿಕೆ ಕಾಣಲು ಆರಂಭಿಸಿದ್ದು,ಶನಿವಾರ ವೆಂಟಿಲೇಟರ್ ಸಪೋರ್ಟ್ ನ್ನು ತೆಗೆಯಲಾಗಿದೆ ಎಂದು ಎಲ್ ಎಲ್ ಆರ್ ನ ಹಿರಿಯ ವೈದ್ಯ ಡಾ.ಬಿ.ಪಿ. ಹೇಳಿದ್ದಾರೆ.
“ಆ.17 ರಂದು ರಾತ್ರಿ ಆಸ್ಪತ್ರೆಗೆ ಬರುವಾಗ ಅವರ ಸ್ಥಿತಿ ತುಂಬಾ ಗಂಭೀರವಾಗಿತ್ತು. ಹಾವಿನ ವಿಷವು ದೇಹದಲ್ಲಿ ವಿಷಕಾರಿ ಪರಿಣಾಮವನ್ನು ಬೀರಿತ್ತು. ಆ್ಯಂಟಿ ವೆನಮ್ ಮತ್ತಿತರ ಔಷಧಗಳನ್ನು ನೀಡಲಾಯಿತು. ಇದೀಗ ಸುನಿಲ್ ಸ್ಥಿತಿ ಸುಧಾರಿಸಿದೆ. ಅವರನ್ನು ವೆಂಟಿಲೇಟರ್‌ನಿಂದ ಹೊರತೆಗೆದು ಐಸಿಯು ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಅವರ ಜೀವ ಈಗ ಅಪಾಯದಿಂದ ಪಾರಾಗಿದೆ’ʼ ಎಂದು ವೈದ್ಯ ಪ್ರಿಯದರ್ಶಿ ಹೇಳಿದ್ದಾರೆ.