ತರಕಾರಿಗಳಲ್ಲಿ ಹೆಚ್ಚು ಪೌಷ್ಟಿಕಾಂಶವಿರುವ ತರಕಾರಿ ಹಾಗಲಕಾಯಿ. ಕಹಿ ರುಚಿಯನ್ನು ಹೊಂದಿರುವ ಹಾಗಾಲಕಾಯಿಯನ್ನು ಸೇವಿಸುವವರು ಕಡಿಮೆ. ಆದರೆ ಇದರಿಂದ ಹಲವು ವಿಧದ ಆಹಾರಗಳನ್ನು ತಯಾರಿಸಬಹುದು. ಅವುಗಳಲ್ಲಿ ಒಂದು ಹಾಗಾಲಕಾಯಿಯ ಗೊಜ್ಜು. ಡಯಾಬಿಟೀಸ್‌ಗೆ ಇದು ಉತ್ತಮ ಆಹಾರ. ಇದರಲ್ಲಿ ಹೆಚ್ಚಿನ ಪೌಷ್ಟಿಕಾಂಶವಿದೆ. ಪಚನಕ್ರಿಯೆಗೂ ಇದು ಸಹಕಾರಿ.
ಬೇಕಾಗುವ ಸಾಮಗ್ರಿಗಳು
ಒಂದು ಕಪ್ ಸಣ್ಣದಾಗಿ ಹೆಚ್ಚಿದ ಹಾಗಾಲಕಾಯಿ
ಬೆಲ್ಲ
ಹುಣಸೇ ಹಣ್ಣು
ಉಪ್ಪು
ಅರಶಿಣ
ತೆಂಗಿನ ತುರಿ- 1 ಕಪ್
ಉದ್ದಿನ ಬೇಳೆ- 1 ಟೀ ಸ್ಪೂನ್
ಮೆಂತ್ಯೆ ಸ್ವಲ್ಪ
ಜೀರಿಗೆ
ಕೆಂಪು ಮೆಣಸು -4 ರಿಂದ 8
ಕರಿಬೇವು
ತೆಂಗಿನ ಎಣ್ಣೆ -3 ಸ್ಪೂನ್
ಸಾಸಿವೆ
ಮಾಡುವ ವಿಧಾನ: ಮೊದಲು ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿcಕೊಳ್ಳಬೇಕು. ಅದಕ್ಕೆ ಸ್ವಲ್ಪ ಉಪ್ಪು ಮತ್ತು ಅರಿಶಿನ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಅನಂತರ ಸ್ವಲ್ಪ ಎಣ್ಣೆ ಹಾಕಿ ಈ ಹಾಗಾಲಕಾಯಿಯನ್ನು ಬೇಯಿಸಿಕೊಳ್ಳಬೇಕು. ಅನಂತರ ಅದಕ್ಕೆ ನೀರು, ಉಪ್ಪು, ಅರಿಶಿನ ಮತ್ತು ಬೆಲ್ಲ ಹಾಕಿ ಮುಚ್ಚಿಟ್ಟು ಬೇಯಿಸಬೇಕು.
ಜತೆಗೆ ಇನ್ನೊಂದು ಕಡೆ ಇದಕ್ಕೆ ಮಸಾಲೆ ತಯಾರಿಮಾಡಬೇಕು. ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿಕೊಳ್ಳಬೇಕು. ಅನಂತರ ಅದಕ್ಕೆ ಜೀರಿಗೆ, ಕೊತ್ತಂಬರಿ, ಮೆಣಸು, ಮೆಂತ್ಯೆ, ಉದ್ದಿನ ಬೇಳೆ ಹಾಕಿ ಅದನ್ನು ಹುರಿದುಕೊಳ್ಳಬೇಕು. ಅನಂತರ ಅದಕ್ಕೆ ತೆಂಗಿನತುರಿ ಹಾಕಿ ಸ್ವಲ್ಪ ಹೊತ್ತು ಹುರಿದುಕೊಳ್ಳಬೇಕು. ಅದನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಜತೆಗೆ ಪ್ಯಾನ್‌ಗೆ ಎಳ್ಳು ಹಾಕಿಕೊಂಡು ಅದನ್ನು ಹುರಿದುಕೊಳ್ಳಬೇಕು. ಅನಂತರ ಅದನ್ನೂ ಮಿಕ್ಸಿ ಜಾರಿಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು.
ತಯಾರಾದ ಮಸಾಲೆಯನ್ನು ಬೇಯಿಸಿದ ಹಾಗಾಲಕಾಯಿಯ ಪಾತ್ರೆಗೆ ಹಾಕಿ ಕುದಿಸಿಕೊಳ್ಳಬೇಕು. ಇನ್ನೊಂದು ಕಡೆ ಒಗ್ಗರಣೆಗೆ ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ, ಸಾಸಿವೆ ಮತ್ತು ಕರಿಬೇವು ಹಾಕಿ ಕುದಿಯುತ್ತಿರುವ ಹಾಗಲಕಾಯಿ ಗೊಜ್ಜಿಗೆ ಹಾಕಿ.
– (ಸಂಗ್ರಹ) ರಂಜಿನಿ ಮಿತ್ತಡ್ಕ