Advertisement

ಬಿಟ್ಟಂಗಾಲ: ಬಾಲಕನ ಮೇಲೆ ಕಾಡಾನೆ ದಾಳಿ; ಗಂಭೀರ ಗಾಯ

12:51 AM Jun 27, 2019 | Team Udayavani |

ಮಡಿಕೇರಿ: ಶಾಲೆಗೆ ತೆರಳುತ್ತಿದ್ದ ಬಾಲಕನೊಬ್ಬ ಕಾಡಾನೆಯೊಂದರ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡ ಘಟನೆ ನಗರದಂಚಿನ ಬಿಟ್ಟಂಗಾಲ ಗ್ರಾಮದಲ್ಲಿ ಸಂಭವಿಸಿದೆ. ಜತೆಗಿದ್ದ ಸ್ನೇಹಿತರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.

Advertisement

ಬಿಟ್ಟಂಗಾಲ ಗ್ರಾಮದ ನಿವಾಸಿ ಬಿ.ಎ. ಸುಭಾಷ್‌ ಚಂದ್ರ ಮತ್ತು ನೇತ್ರಾವತಿ ದಂಪತಿಯ ಪುತ್ರ ಚಂದನ್‌ ಬಿ.ಎಸ್‌. (11) ಗಾಯಗೊಂಡ ಬಾಲಕ. ಆನೆ ದಾಳಿಯಿಂದ ಆತನ ತಲೆ ಮತ್ತು ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಬಿಟ್ಟಂಗಾಲ ಗ್ರಾಮದ ಅಂಬಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಬೆಳಗ್ಗೆ ಸುಭಾಷ್‌ಚಂದ್ರ ಅವರ ಮಕ್ಕಳಾದ ಚಂದನ್‌, ಸಹೋದರ ಕೀರ್ತನ್‌, ತಂಗಿ ಶಾಲಿನಿ ಮತ್ತು ಸುಭಾಷ್‌ ಚಂದ್ರ ಅವರ ತಮ್ಮನ ಮಗ ಪವನ್‌ ತೆರಳುತ್ತಿದ್ದರು. ಶಾಲೆಗೆ ತೆರಳುವ ಮಾರ್ಗದ ಸಮೀಪದ ಆಲ್ಬರ್ಟ್‌ ಅವರ ತೋಟದಲ್ಲಿ ಐದು ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಅದರ ಮಾಹಿತಿಯಿಲ್ಲದ ಮಕ್ಕಳು ಶಾಲೆಯತ್ತ ಸಾಗುತ್ತಿದ್ದ ಸಂದರ್ಭ ಹಠಾತ್ತನೆ ಕಾಡಾನೆಯೊಂದು ಮಕ್ಕಳ ಮೇಲೆ ದಾಳಿ ನಡೆಸಿ, ಚಂದನ್‌ನನ್ನು ಸೊಂಡಿಲಿನಿಂದ ಎತ್ತಿ ಒಗೆಯಿತು. ಇತರ ಮಕ್ಕಳು ಭಯದಿಂದ ಚೀರುತ್ತಾ ಓಡಿ ಪಾರಾದರು. ಅವರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಧಾವಿಸಿ ಬಂದ ಪರಿಸರದ ಮನೆಯವರು ಚಂದನ್‌ನನ್ನು ವೀರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ಅನಂತರ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಅಲ್ಲಿಂದ ಮಂಗಳೂರಿಗೆ ಕರೆದೊಯ್ಯಲಾಯಿತು.

ಅರಣ್ಯಾಧಿಕಾರಿ ಭೇಟಿ
ವಲಯ ಅರಣ್ಯಾಧಿಕಾರಿ ಕೆ. ಗೋಪಾಲ್‌ ಮತ್ತು ಸಿಬಂದಿ ಆಸ್ಪತ್ರೆಗೆ ಭೇಟಿ ನೀಡಿ, ವಿದ್ಯಾರ್ಥಿ ಚಂದನ್‌ನ ಚಿಕಿತ್ಸಾ ವೆಚ್ಚವನ್ನು ಇಲಾಖೆಯ ವತಿಯಿಂದ ಭರಿಸುವ ಭರವಸೆ ನೀಡಿದರು.

ಗ್ರಾಮಸ್ಥರ ಆಕ್ರೋಶ
ಬಿಟ್ಟಂಗಾಲ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಂಡಿಲ್ಲ. ದಾಳಿಗೀಡಾದವರಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ವಿಫ‌ಲವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಗ್ರಾಮಸ್ಥರಾದ ದಾಮೋದರ್‌, ಸಣ್ಣಪ್ಪ, ರತನ್‌, ನವೀನ್‌ ಮಂದಣ್ಣ, ಮುತ್ತಪ್ಪ, ಸಂಜು ಯೋಗೇಶ್‌ ಮೊದಲಾದವರಿದ್ದರು.

ಮಕ್ಕಳು ಶಾಲೆಗೆ ಬರುತ್ತಿಲ್ಲ
ಬಿಟ್ಟಂಗಾಲ ಪಂಚಾಯತ್‌ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿರುವುದರಿಂದ ಕಾರ್ಮಿಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬಿಟ್ಟಂಗಾಲ ಅಂಬಲ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋ ಪಾಧ್ಯಾಯಿನಿ ಕಮಲಾಕ್ಷಿ ಟಿ.ಎನ್‌. ಕಳವಳ ವ್ಯಕ್ತಪಡಿಸಿದ್ದಾರೆ.

ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿ ಚಂದನ್‌ನನ್ನು ಭೇಟಿ ಮಾತನಾಡಿದ ಅವರು, ಬಿಟ್ಟಂಗಾಲದಲ್ಲಿ ಕಾರ್ಮಿಕರ ಸಂಖ್ಯೆಅಧಿಕವಿದ್ದು ಅವರ ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆಯೂ ಕ್ಷೀಣಿಸಿದೆ. ಅರಣ್ಯ ಇಲಾಖೆ ಕಾಡಾನೆ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next