Advertisement

“ಬಿಟ್‌’ರೂ ಬಿಡದ ಬಿಟ್‌ಕಾಯಿನ್‌ ಮಾಯೆ!

12:33 AM Nov 12, 2021 | Team Udayavani |

ರಾಜ್ಯವಷ್ಟೇ ಅಲ್ಲ, ಇಡೀ ದೇಶಾದ್ಯಂತ ಈಗ ಬಿಟ್‌ಕಾಯಿನ್‌ ಸದ್ದು ತುಸು ಜೋರಾಗಿಯೇ ಕೇಳುತ್ತಿದೆ. ಅದರಲ್ಲೂ ಕರ್ನಾಟಕದ ಕೆಲವು ರಾಜಕಾರಣಿಗಳು, ಪೊಲೀಸ್‌ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ವಿಚಾರ ಇನ್ನೂ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯ ಜನರಂತೂ, ಈಗ ಎದ್ದಿರುವ ವಿವಾದಕ್ಕಿಂತ ಈ ಬಿಟ್‌ಕಾಯಿನ್‌ ಎಂದರೆ ಏನು ಎಂಬ ಗೊಂದಲದಲ್ಲಿದ್ದಾರೆ. ಹಾಗಾದರೆ ಈ ಬಿಟ್‌ಕಾಯಿನ್‌ ಎಂದರೆ ಏನು? ಇದು ಭೌತಿಕ ಕರೆನ್ಸಿ ರೂಪದಲ್ಲಿರುತ್ತದೆಯೋ ಅಥವಾ ಡಿಜಿಟಲ್‌ ಕರೆನ್ಸಿ ರೂಪದಲ್ಲಿ ಇರುತ್ತದೆಯೋ? ಇದನ್ನು ಕಾನೂನಬದ್ಧವಾಗಿ ವ್ಯವಹಾರ ಮಾಡಬಹುದೇ?

Advertisement

ಏನಿದು ಬಿಟ್‌ಕಾಯಿನ್‌?  ಬಿಟ್‌ಕಾಯಿನ್‌ ಅಥವಾ ಕ್ರಿಪ್ಟೋಕರೆನ್ಸಿ ಎಂಬುದು ಡಿಜಿಟಲ್‌ ರೂಪದಲ್ಲಿರುವ ಕರೆನ್ಸಿ. ಇದು ಕಾಯಿನ್‌ ರೂಪದಲ್ಲಿಯೂ ಇರುವುದಿಲ್ಲ, ನೋಟಿನ ರೂಪದಲ್ಲಿಯೂ ಇರುವುದಿಲ್ಲ. ಹಾಗೆಯೇ ಈ ಕರೆನ್ಸಿಯ ವ್ಯವಹಾರವನ್ನು ಕೇವಲ ಆನ್‌ಲೈನ್‌ನಲ್ಲಿ ಮಾಡಲು ಸಾಧ್ಯ. ಈ ವ್ಯವಹಾರ ಮಾಡಲು ನಿಮ್ಮ ಬಳಿ ಮೊಬೈಲ್‌, ಅತ್ಯಂತ ಶ್ರೇಷ್ಠ ದರ್ಜೆಯ ಕಂಪ್ಯೂಟರ್‌ ಇರಲೇಬೇಕು. ಈ ವ್ಯವಹಾರದಲ್ಲಿ ಯಾವುದೇ ಬ್ಯಾಂಕ್‌ಗಳ ಮಧ್ಯಪ್ರವೇಶ ಇರುವುದಿಲ್ಲ. ಸದ್ಯ ಕೇವಲ ಕ್ರಿಪ್ಟೋಕರೆನ್ಸಿ ಮಾತ್ರವಿಲ್ಲ, ಬೇರೆ ಬೇರೆ ಬ್ರಾಂಡ್‌ನಲ್ಲಿಯೂ ಬಿಟ್‌ಕಾಯಿನ್‌ಗಳ ಆಗಮನವಾಗಿದೆ. ಇದರ ವಹಿವಾಟು ಹೆಚ್ಚಾಗಿ ನಡೆಯುವುದು ಡಾರ್ಕ್‌ವೆಬ್‌ನಲ್ಲಿ.

ಬಿಟ್‌ಕಾಯಿನ್‌ ವ್ಯವಹಾರ ಮಾಡುವುದೇಕೆ? ಬಿಟ್‌ಕಾಯಿನ್‌ ಅನ್ನು ತ್ವರಿತಗತಿಯಲ್ಲಿ ಪೇಮೆಂಟ್‌ ಆಗುವ ದೃಷ್ಟಿಯಿಂದ ಬಳಕೆ ಮಾಡಲಾಗುತ್ತದೆ. ಇದರಲ್ಲಿ ಯಾವುದೇ ವಹಿವಾಟು ಮಾಡಿದರೂ ಸಾಮಾನ್ಯ ಬ್ಯಾಂಕ್‌ಗಳಲ್ಲಿ ವಿಧಿಸಲಾಗುವ ಯಾವುದೇ ಸೇವಾಶುಲ್ಕ ವಿಧಿಸಲಾಗುವುದಿಲ್ಲ. ಜತೆಗೆ ಕಳುಹಿಸುವವರು ಮತ್ತು ಸ್ವೀಕರಿಸಿದವರ ಹೆಸರುಗಳು ಸಂಪೂರ್ಣವಾಗಿ ಗೌಪ್ಯವಾಗಿರುತ್ತವೆ.

ಹೂಡಿಕೆ ರೂಪದಲ್ಲಿ ಬಳಕೆ ಮಾಡಬಹುದೇ?
ಹೌದು, ಬಿಟ್‌ಕಾಯಿನ್‌ ಸದ್ಯ ಬಳಕೆಯಾಗುತ್ತಿರುವುದು ಹೂಡಿಕೆ ರೂಪದಲ್ಲಿ ಮಾತ್ರ. ವಿಚಿತ್ರವೆಂದರೆ, 10 ವರ್ಷಗಳ ಹಿಂದೆ ಬಿಟ್‌ಕಾಯಿನ್‌ ದರ ಈಗ ಇರುವಷ್ಟು ದುಬಾರಿಯಾಗಿರಲಿಲ್ಲ. 90ರ ದಶಕದ ಅಂತ್ಯದಲ್ಲಿ ಕೇವಲ 10 ರೂ.ಗಳಿಗೆ ಒಂದು ಬಿಟ್‌ಕಾಯಿನ್‌ ಸಿಗುತ್ತಿತ್ತು. ಆದರೆ ಈಗ ಒಂದು ಬಿಟ್‌ಕಾಯಿನ್‌ಗೆ 50ರಿಂದ 60 ಲಕ್ಷ ರೂ.ಗಳ ವರೆಗೆ ವಹಿವಾಟು ನಡೆಯುತ್ತಿದೆ. ಅಲ್ಲದೇ, ಅಮೆರಿಕದ ಕರೆನ್ಸಿ ಅಥವಾ ಕಂಪೆನಿ ಷೇರುಗಳ ರೀತಿಯಲ್ಲೇ ದಿನನಿತ್ಯವೂ ಈ ಕಾಯಿನ್‌ ದರ ಏರಿಳಿತವಾಗುತ್ತದೆ.

ಇದನ್ನೂ ಓದಿ:ನ.18ರಂದು ಈ ಶತಮಾನದ ಅತಿದೀರ್ಘಾವಧಿಯ ಭಾಗಶಃ ಚಂದ್ರಗ್ರಹಣ

Advertisement

ಬಿಟ್‌ಕಾಯಿನ್‌ ಪಡೆಯುವುದು ಹೇಗೆ?
ಇದನ್ನು ಆನ್‌ಲೈನ್‌ ಮೂಲಕವೇ ಖರೀದಿ ಸಾಧ್ಯ. ಅಂದರೆ ಆನ್‌ ಲೈನ್‌ನಲ್ಲಿರುವ ಎಕ್ಸ್‌ಚೇಂಜ್‌ ವೇದಿಕೆಯಲ್ಲಿ ಬಿಟ್‌ಕಾಯಿನ್‌ ಖರೀದಿಸಬಹುದು. ಕೆಲವರು ಅತ್ಯಂತ ಸುಧಾರಿತ ಕಂಪ್ಯೂಟರ್‌ಗಳ ಮೂಲಕ ಬಿಟ್‌ಕಾಯಿನ್‌ಗಳನ್ನು ಮೈನಿಂಗ್‌ ಮಾಡುತ್ತಾರೆ. ಅಂದರೆ ಅತ್ಯಂತ ಕಷ್ಟಕರವಾದ ಗಣಿತದ ಫ‌ಜಲ್ಸ್‌ಗಳನ್ನುಪರಿಹರಿಸಿ ಬಿಟ್‌ಕಾಯಿನ್‌ ಪಡೆದುಕೊಳ್ಳುತ್ತಾರೆ.

ಇದರಲ್ಲಿ ಅಪಾಯಗಳಿವೆಯೇ?
ಭೌತಿಕ ಕರೆನ್ಸಿ ವಹಿವಾಟಿಗಿಂತ ಬಿಟ್‌ಕಾಯಿನ್‌ ವಹಿವಾಟು ಅತ್ಯಂತ ಅಪಾಯಕಾರಿ. ಮೈಯೆಲ್ಲ ಕಣ್ಣಾಗಿರಬೇಕಾಗಿರುತ್ತದೆ. ಒಮ್ಮೆ ನೀವು ಬಿಟ್‌ಕಾಯಿನ್‌ ಅನ್ನು ಮಿಸ್‌ ಆಗಿ ನೀವು ಯಾರಿಗೆ ಕಳುಹಿಸಬೇಕು ಎಂದುಕೊಂಡಿರಿತ್ತೀರೋ ಅವರಿಗೆ ಬಿಟ್ಟು ಬೇರೆಯವರಿಗೆ ಕಳುಹಿಸಿದರೆ ವಾಪಸ್‌ ಪಡೆಯಲು ಸಾಧ್ಯವೇ ಇಲ್ಲ. ಅಲ್ಲದೆ ಒಂದು ವೇಳೆ ಡಿಜಿಟಲ್‌ ವ್ಯಾಲೆಟ್‌ನ ಪಾಸ್‌ವರ್ಡ್‌ ಮರೆತರೆ, ಡಿಜಿಟಲ್‌ ವ್ಯಾಲೆಟ್‌ ಅನ್ನು ಯಾರಾದರೂ ಹ್ಯಾಕ್‌ ಮಾಡಿದರೆ ಬಿಟ್‌ಕಾಯಿನ್‌ ವಾಪಸ್‌ ಸಿಗುವುದಿಲ್ಲ. ಇದಕ್ಕೆ ಬ್ಯಾಂಕ್‌ಗಳಿಂದ ಮಾನ್ಯತೆ ಇರುವುದಿಲ್ಲವಾದ್ದರಿಂದ ಯಾರಿಗೂ ದೂರು ಕೊಡಲೂ ಸಾಧ್ಯವಿಲ್ಲ.

ಕರೆನ್ಸಿ ಬಿಟ್‌ಕಾಯಿನ್‌
ಕ್ರಿಪ್ಟೋಕರೆನ್ಸಿ ಅಥವಾ ಬಿಟ್‌ಕಾಯಿನ್‌ಗೆ ಯಾವುದೇ ಸರಕಾರ ಅಥವಾ ಬ್ಯಾಂಕ್‌ಗಳ ಮಾನ್ಯತೆ ಇರುವುದಿಲ್ಲ. ಕ್ರಿಪ್ಟೋ ಕರೆನ್ಸಿ ಅಥವಾ ಇನ್ನಾವುದೇ ಬಿಟ್‌ಕಾಯಿನ್‌ ಥರ್ಡ್‌ಪಾರ್ಟಿ ಕಂಪೆನಿಗಳದ್ದಾಗಿರುತ್ತದೆ. ಒಂದು ವೇಳೆ ಈ ಕಂಪೆನಿ ಮುಳುಗಿ ಹೋದರೆ ಅಥವಾ ಈ ಕಂಪೆನಿಯ ಬಿಟ್‌ಕಾಯಿನ್‌ ಅಕೌಂಟ್‌ ಅನ್ನು ಬೇರೆ ಯಾರಾದರೂ ಹ್ಯಾಕ್‌ ಮಾಡಿದರೆ ನಿಮ್ಮ ಹಣ ಸಂಪೂರ್ಣವಾಗಿ ಹೋದಂತೆಯೇ.  ಇನ್ನು ಬಿಟ್‌ಕಾಯಿನ್‌ ಮೌಲ್ಯ ಪ್ರತೀ ದಿನ ಅಥವಾ ಗಂಟೆಗೊಮ್ಮೆ ಬದಲಾಗುತ್ತಿರುತ್ತದೆ. ಅಂದರೆ ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ಬದಲಾವಣೆ ಯಾಗುತ್ತಿರುತ್ತದೆ. ಒಂದು ವೇಳೆ ಇವತ್ತು ಸಾವಿರಾರು ರೂಪಾಯಿ ತೆತ್ತು ಬಿಟ್‌ಕಾಯಿನ್‌ ಖರೀದಿ ಮಾಡಿದ್ದೀರಿ ಎಂದುಕೊಳ್ಳಿ ನಾಳೆ ಇದರ ದರ ಲಕ್ಷ ದಾಟಬಹುದು ಅಥವಾ ಕೇವಲ ನೂರುಗಳ ಲೆಕ್ಕಾಚಾರಕ್ಕೂ ಕುಸಿಯಬಹುದು. ಈ ಏರಿಳಿತ ತಡೆಯುವ ಯಾವುದೇ ನಿಯಂತ್ರಣ ವ್ಯವಸ್ಥೆ ಇಲ್ಲಿಲ್ಲ.

ಬಿಟ್‌ಕಾಯಿನ್‌ ವ್ಯವಹಾರ ಸಂಪೂರ್ಣ ಗೌಪ್ಯವಾಗಿರಲ್ಲ
ಇದುವರೆಗೂ ತುಂಬಾ ಜನ ಭಾವಿ ಸಿರುವುದು ಬಿಟ್‌ಕಾಯಿನ್‌ ವ್ಯವಹಾರ ಮಾಡಿದರೆ ತಮ್ಮ ಗುರುತು ಪತ್ತೆಯಾಗುವುದಿಲ್ಲ ಎಂಬುದು. ಆದರೆ ಇದು ಸುಳ್ಳು ಎಂದು ಹೇಳುತ್ತಾರೆ ತಜ್ಞರು. ಬಿಟ್‌ ಕಾಯಿನ್‌ ವ್ಯಾಲೆಟ್‌ ಅನ್ನು ಅನಾಮಧೇಯ ಹೆಸರಲ್ಲಿ ಮಾಡಿಕೊಂಡರೂ ನೀವು ಇದನ್ನು ಹಣದ ರೂಪಕ್ಕೆ ಮಾಡಿಕೊಳ್ಳುವಾಗ ನಿಮ್ಮ ಬ್ಯಾಂಕ್‌ ಅಕೌಂಟ್‌ನ ಮಾಹಿತಿ ಕೊಡಲೇಬೇಕಾಗುತ್ತದೆ. ಹಾಗೆಯೇ ಖರೀದಿ ಮಾಡುವಾಗ ನಿಮ್ಮ ಖಾತೆಯಿಂದಲೇ ಹಣ ವರ್ಗಾಯಿಸಿಕೊಳ್ಳಬೇಕು. ಆಗಲೂ ನಿಮ್ಮ ಮಾಹಿತಿ ಗೊತ್ತಾಗುತ್ತದೆ. ಅಲ್ಲದೆ ಬ್ಲ್ಯಾಕ್‌ಚೈನ್‌ ಮೂಲಕ ಕ್ರಿಪ್ಟೋ

ಕರೆನ್ಸಿಯ ಎಲ್ಲ ಮಾಹಿತಿಗಳೂ ಸಾರ್ವಜನಿಕಗೊಳ್ಳುತ್ತವೆ. ಹೀಗಾಗಿ ಕಳುಹಿಸಿದವರು, ಪಡೆದವರು ಇಬ್ಬರೂ ಸಿಕ್ಕಿಯೇ ಸಿಗುತ್ತಾರೆ.

ಕ್ರಿಪ್ಟೋ ಕರೆನ್ಸಿಯಿಂದ ಪಾವತಿ
ಈಗಿರುವ ವ್ಯವಸ್ಥೆಯಲ್ಲಿ ಬಿಟ್‌ಕಾಯಿನ್‌ಗಳಿಂದ ಆನ್‌ಲೈನ್‌ ಮೂಲಕ ಯಾವುದೇ ಪಾವತಿ ಬೇಕಾದರೂ ಮಾಡಬಹುದು. ಆದರೆ ಇದು ತಲುಪಿರುವುದಕ್ಕೆ ಅಥವಾ ಮಧ್ಯದಲ್ಲಿ ಎಲ್ಲಾದರೂ ಸ್ಥಗಿತವಾದರೆ ಇದನ್ನು ವಾಪಸ್‌ ಪಡೆಯುವುದು ಕಷ್ಟ. ಅಂದರೆ ಒಂದೊಮ್ಮೆ ನೀವು ಕ್ರೆಡಿಟ್‌ ಕಾರ್ಡ್‌ ಮತ್ತು ಡೆಬಿಟ್‌ ಕಾರ್ಡ್‌ ವ್ಯವಸ್ಥೆಯಲ್ಲಿ ಹಣ ಪಾವತಿಸಿ, ಅದು ಡೆಬಿಟ್‌ ಆಗದೇ ಇದ್ದರೆ ಕಂಪೆನಿಯ ಗ್ರಾಹಕ ಸೇವಾ ಕೇಂದ್ರದ ಬಳಿ ಮಾತನಾಡಿ ಬಗೆಹರಿಸಿಕೊಳ್ಳಬಹುದು. ಆದರೆ ಕ್ರಿಪ್ಟೋ ಕರೆನ್ಸಿಯಲ್ಲಿ ಈ ವ್ಯವಸ್ಥೆಯೇ ಇಲ್ಲ.

ಬಿಟ್‌ಕಾಯಿನ್‌ ಹ್ಯಾಕ್‌ ಹೆಚ್ಚು
ಬಿಟ್‌ಕಾಯಿನ್‌ ಇರಿಸಿಕೊಂಡವರ ಮೇಲೆ ಆನ್‌ಲೈನ್‌ ಹ್ಯಾಕರ್ಸ್‌ನ ಹದ್ದಿನ ಕಣ್ಣು ಯಾವಾಗಲೂ ಇದ್ದೇ ಇರುತ್ತದೆ. ಇಂಥವರನ್ನು ಟಾರ್ಗೆಟ್‌ ಮಾಡಿಕೊಳ್ಳುವ ಸ್ಕ್ಯಾಮರ್ಸ್‌, ದೂರವಾಣಿ ಕರೆ ಮಾಡಿ, ನಮ್ಮ ಸೇವೆಗೆ ಬಿಟ್‌ಕಾಯಿನ್‌ ಮೂಲಕ ಪಾವತಿಸಿ ಎಂದು ಕೇಳುತ್ತಾರೆ. ಜತೆಗೆ ವೈರ್‌ ಟ್ರಾನ್ಸ್‌ಫ‌ರ್‌, ಗಿಫ್ಟ್ ಕಾರ್ಡ್‌ ಮೂಲಕವೂ ಹಣ ಪಾವತಿಸಿ ಎಂದು ಕೇಳುತ್ತಾರೆ. ಒಂದೊಮ್ಮೆ ಅನಾಮಧೇಯ ಕರೆ ಬಂದು ಈ ರೀತಿ ಕೇಳಿ, ನೀವು ಪಾವತಿಸಲು ಹೋದರೆ, ಅವರ ಕಪಿಮುಷ್ಟಿಗೆ ಬಿದ್ದೀರಿ ಎಂದೇ ಅರ್ಥ. ಹೀಗಾಗಿ ಅಗತ್ಯಕ್ಕಿಂತ ಹೆಚ್ಚೇ ಹುಶಾರಾಗಿ ಇರಬೇಕಾಗುತ್ತದೆ. ಒಮ್ಮೆ ಹಣ ಹೋದರೆ ವಾಪಸ್‌ ಪಡೆಯಲು ಸಾಧ್ಯವೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next