ಬೆಂಗಳೂರು: ಎಚ್‌ಎಎಲ್ ಏರ್‌ಪೋರ್ಟ್ ರಸ್ತೆಯ ಕೆಂಪ್ ಫೋರ್ಟ್ ಮಾಲ್‌ನಲ್ಲಿ ನಿರ್ಬಂಧಿತ ಕ್ರಿಪ್ಟೋಕರೆನ್ಸಿ “ಬಿಟ್‌ಕಾಯಿನ್’ ಎಟಿಎಂ ಕಿಯೋಸ್ಕ್ ಚಟುವಟಿಕೆಯನ್ನು ಬಂದ್ ಮಾಡಿಸಿರುವ ನಗರ ಸೈಬರ್ ಕ್ರೈಂ ಪೊಲೀಸರು, ಪ್ರಕರಣದ ಆರೋಪಿ ಬಿ.ವಿ ಹರೀಶ್ ಎಂಬಾತನನ್ನು ಬಂಧಿಸಿದ್ದಾರೆ.
ಅ.14ರಂದು ಕೆಂಪ್ ಫೋರ್ಟ್ ಮಾಲ್‌ನಲ್ಲಿ ಎಟಿಎಂ ಕಿಯೋಸ್ಕ್ ಅಳವಡಿಸಿ ವ್ಯವಹಾರ ಆರಂಭಿಸಿತ್ತು. ಈ ಕುರಿತು ಬ್ಯಾಂಕಿಂಗ್ ವಲಯದಿಂದ ದೂರುಗಳು ಬಂದ ಕಾರಣ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಸಿಸಿಬಿ ಪೊಲೀಸರು, ಮಂಗಳವಾರ ಆರೋಪಿಯ ಹರೀಶ್‌ನನ್ನು ಬಂಧಿಸಿದ್ದಾರೆ.
ಜತೆಗೆ, 1.79 ಲಕ್ಷ ರೂ. ನಗದು, ಎರಡು ಲ್ಯಾಪ್‌ಟಾಪ್, ಒಂದು ಮೊಬೈಲ್ ಫೋನ್, 3 ಕ್ರೆಡಿಟ್‌ಕಾರ್ಡ್‌ಗಳು, 5 ಡೆಬಿಟ್‌ಕಾರ್ಡ್, ಕಂಪನಿಯ ಸೀಲ್‌ಗಳು, ಒಂದು ಕ್ರಿಪೊಕರೆನ್ಸಿಯ ಉಪಕರಣ, ಕಂಪನಿಯ 5 ಸೀಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ತುಮಕೂರು ಮೂಲದ ಆರೋಪಿ ಹರೀಶ್ ಬಿಸಿಎ ಪದವೀಧರನಾಗಿದ್ದು 2014ರಿಂದ ಬಿಟ್ ಕಾಯಿನ್ ವ್ಯವಹಾರದ ಬಗ್ಗೆ ಆಸಕ್ತಿ ಹೊಂದಿದ್ದ. ಅದರಂತೆ, ತನ್ನ ಸ್ನೇಹಿತನ ಜತೆಗೂಡಿ ಇತ್ತೀಚೆಗೆ ರಾಜಾಜಿನಗರ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ಯುನೋಕಾಯಿನ್ ಪ್ರೈ.ಲಿನ ಹೆಸರಿನ ಕಂಪನಿ ತೆರೆದಿದ್ದಾನೆ.
ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಎಂದು ಹೇಳಿಕೊಂಡಿರುವ ಬಿ.ವಿ ಹರೀಶ್ ನನ್ನು ಮತ್ತಷ್ಟು ವಿಚಾರಣೆ ನಡೆಸುವ ಸಲುವಾಗಿ 7 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ನೋಟುಗಳ ಅಮಾನೀಕರಣದ ನಂತರ ಬಿಟ್‌ಕಾಯಿನ್ ವ್ಯವಹಾರಗಳು ದೇಶದಲ್ಲಿ ಗರಿಗೆದರಿದ್ದವು ಎಂದು ಕೇಂದ್ರ ಹಣಕಾಸು ಇಲಾಖೆ ಹೇಳಿತ್ತು.
ಬಿಟ್‌ಕಾಯಿನ್ ವ್ಯವಹಾರವೂ ಕಾನೂನು ಬಾಹಿರ ಅದಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದು ಹಣಕಾಸು ಇಲಾಖೆ ಎಚ್ಚರಿಕೆ ನೀಡಿತ್ತು. ಈ ನಡುವೆಯೂ, ಬ್ಲಾಕ್‌ಚೈನ್ ಅಸೆಟ್ ಕಂಪನಿಯಾದ ಯುನೋಕಾಯಿನ್, ನಗರದಲ್ಲಿ ಬಿಟ್‌ಕಾಯಿನ್ ಕಿಯೋಸ್ಕ್ ತೆರೆದು ಭಾರತೀಯ ಹಣದಲ್ಲಿ ವ್ಯವಹಾರ ನಡೆಸಿ ಬಿಟ್‌ಕಾಯಿನ್ ಖರೀದಿಗೆ ಅವಕಾಶ ಕಲ್ಪಿಸಿದ್ದ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.