Advertisement
ಸೌರಮಾನ ಯುಗಾದಿಯ ಸಂಭ್ರಮದಲ್ಲಿ ತುಳುನಾಡಿನ ಮನೆಗಳಲ್ಲಿ ಬಿಸು ಕಣಿಯ ಜತೆಗೆ ಹಬ್ಬದೂಟ ವಿಶೇಷ. ಕೃಷಿ ಪರಂಪರೆಯ ಆಚರಣೆಯೂ ಆಗಿರುವ ಈ ಹಬ್ಬದಂದು ತುಳುನಾಡಿನಲ್ಲಿ ತಾವು ಬೆಳೆಯುವ ತರಕಾರಿ, ಹಣ್ಣುಗಳನ್ನು ದೇವರ ಕೋಣೆ ಅಥವಾ ಮನೆಯ ಪ್ರಮುಖ ಜಾಗದಲ್ಲಿ ಬೆಳಗ್ಗಿನ ಹೊತ್ತು ಇರಿಸಿ ಪ್ರಕೃತಿ ಮಾತೆ ಹಾಗೂ ತಮ್ಮ ಮನೆ ದೇವರಲ್ಲಿ ವಷವಿಡೀ ಉತ್ತಮ ಫಸಲಿಗಾಗಿ ಪ್ರಾರ್ಥಿಸಲಾಗುತ್ತದೆ. ಮಕ್ಕಳಿಗೆ ಹೊಸಬಟ್ಟೆಯ ಜತೆಗೆ ಮಧ್ಯಾಹ್ನ ಹಬ್ಬದ ಸಿಹಿಯೂಟ ತುಳುನಾಡಿನ ಮನೆಗಳಲ್ಲಿ ಸಾಮಾನ್ಯವಾಗಿರುತ್ತದೆ. ಇದಕ್ಕಾಗಿ ನಗರದಲ್ಲಿ ಶುಕ್ರವಾರ ಮಾರುಕಟ್ಟೆಗಳಲ್ಲಿ ತರಕಾರಿ, ಹೂವು ಜತೆಗೆ ಎಳ್ಳು, ಬೆಲ್ಲ ಮೊದಲಾದ ಅಗತ್ಯ ವಸ್ತುಗಳ ಖರೀದಿ ನಡೆದಿದೆ.
ವಿಷು ಹಬ್ಬದ ಹಿನ್ನೆಲೆಯಲ್ಲಿ ನಗರದ ಬಹುತೇಕ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಸಿದ್ಧತೆ ನಡೆದಿದೆ. ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ದೇವರಿಗೆ ಪ್ರಾತಃ ಕಾಲ ವಿಷುಕಣಿ ಪೂಜೆ ಅನಂತರ ಉಷಾ ಕಾಲ ಪೂಜೆ ಜರಗಿ ಶ್ರೀದೇವರ ಚಂದ್ರಶಾಲೆಯಲ್ಲಿ ನೆರೆದ ಭಕ್ತರಿಗೆ ಪಂಚಾಂಗ ಶ್ರವಣ ಪಠನ ನಡೆಯಲಿದೆ. ಮಹತೋಭಾರ ಶ್ರೀ ಮಂಗಳಾದೇವಿ ಕ್ಷೇತ್ರದಲ್ಲಿ ವಿಷುಕಣಿ ಇರಿಸಿ, ಮಹಾಪೂಜೆ ಬಳಿಕ ವಿಷುಕಣಿ ಪೂಜೆ, ಪಂಚಾಂಗ ಶ್ರವಣ ಪಠನ ಸಹಿತ ನಿತ್ಯ ಪೂಜೆಗಳು ನೆರವೇರಲಿದೆ.
Related Articles
Advertisement
ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಬೆಳಗ್ಗೆ ವಿಷು ಕಣಿಪೂಜೆ, ಉಷಃಕಾಲ ಪೂಜೆ, ಮಧ್ಯಾಹ್ನ ಗಣಪತಿ ಹೋಮ, ರಾತ್ರಿ ಹೂವಿನ ಪೂಜೆ, ಮಹಾಪೂಜೆ ನಡೆಯಲಿದೆ.
ಕದ್ರಿ ಶ್ರೀ ಮಂಜುನಾಥ ಕ್ಷೇತ್ರ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಧಾಹ್ನ ವಿಷು ಕಣಿ ಪೂಜೆ, ಮಹಾಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗಲಿದೆ. ಬೋಳಾರದ ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಶನಿವಾರ ರಾತ್ರಿ 8ಕ್ಕೆ ವಿಶೇಷ ಸರ್ವಾಲಂಕಾರ ಪೂಜೆ ನಡೆಯಲಿದೆ.
ಕೊಡಿಯಾಲಬೈಲು ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ ಸೌರಮಾನ ಯುಗಾದಿಯ ಪ್ರಯುಕ್ತ ವಿಷುಕಣಿ ಸೇವೆ ಎ. 15ರಂದು ಮಧ್ಯಾಹ್ನ 12ಕ್ಕೆ ಜರಗಲಿದೆ. ಬಳಿಕ ಮಹಾಪೂಜೆ ನಡೆಯಲಿದೆ ಎಂದು ಕ್ಷೇತ್ರಗಳ ಪ್ರಮುಖರು ತಿಳಿಸಿದ್ದಾರೆ.