ಮಹಾನಗರ: ತುಳುನಾಡಿನಲ್ಲಿ ಬಿಸು ಪರ್ಬ ಎಂದೇ ಕರೆಯುವ ವಿಷು ಹಬ್ಬ ಶುಕ್ರವಾರ ನಡೆಯುತ್ತಿದ್ದು, ಎಲ್ಲೆಡೆ ಸರ್ವ ಸಿದ್ಧತೆಗಳು ನಡೆದಿದೆ. ಕಳೆದ ವರ್ಷ ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಹೆಚ್ಚಿನ ಮಂದಿ ತಮ್ಮ ತಮ್ಮ ಮನೆಗಳಲ್ಲೇ ಹಬ್ಬವನ್ನು ಆಚರಿಸಿದ್ದರು. ಆದರೆ ಈ ಬಾರಿ ಕೋವಿಡ್ ಆತಂಕ ತುಸು ತಗ್ಗಿದ್ದು, ಹಬ್ಬದ ಗೌಜಿ ಮತ್ತಷ್ಟು ಕಳೆಗಟ್ಟಿದೆ.
ಸೌರಮಾನ ಯುಗಾದಿಯ ಹಿನ್ನೆಲೆ ಯಲ್ಲಿ ನಗರದ ಬಹುತೇಕ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಸಿದ್ಧತೆ ನಡೆದಿದೆ. ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ದೇವರಿಗೆ ಪ್ರಾತಃ ಕಾಲ ವಿಷುಕಣಿ ಪೂಜೆ ಅನಂತರ ಉಷಾ ಕಾಲ ಪೂಜೆ ಜರಗಿ ಶ್ರೀದೇವರ ಚಂದ್ರಶಾಲೆಯಲ್ಲಿ ನೆರೆದ ಭಕ್ತರಿಗೆ ಪಂಚಾಂಗ ಶ್ರವಣ ಪಠಣ ನಡೆಯಲಿದೆ. ಬಳಿಕ ಸಾಮೂಹಿಕ ಪ್ರಾರ್ಥನೆ ಮಧ್ಯಾಹ್ನ ಶ್ರೀ ದೇವರಿಗೆ ಹಾಲು ಪಾಯಸ ಹರಿವಾಣ ನೈವೇದ್ಯದೊಂದಿಗೆ ಯುಗಾದಿಯ ವಿಶೇಷ ಮಹಾಪೂಜೆ ಜರಗಿ ಅನ್ನಸಂತರ್ಪಣೆ ನಡೆಯಲಿದೆ. ನಿರಂತರವಾಗಿ ಭಜನೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಶರವು ಶ್ರೀ ಮಹಾಗಣಪತಿ ದೇವಸ್ಥಾನ ದಲ್ಲಿ ಬೆಳಗ್ಗೆ ವಿಷು ಕಣಿಪೂಜೆ, ಉಷಾ ಕಾಲ ಪೂಜೆ, ಗಣಪತಿ ಹೋಮ, ಅಪ್ಪದ ಪೂಜೆ, ರಾತ್ರಿ ರಂಗ ಪೂಜೆ, ಮಹಾಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ. ಮಹತೋಭಾರ ಶ್ರೀ ಮಂಗಳಾದೇವಿ ಕ್ಷೇತ್ರದಲ್ಲಿ ಶುಕ್ರವಾರ ಮಹಾಪೂಜೆ ಬಳಿಕ ವಿಷುಕಣಿ ಪೂಜೆ, ಪಂಚಾಂಗ ಶ್ರವಣ, ಅಭಿಷೇಕ ಅಲಂಕಾರ, ರಂಗಪೂಜೆ ನಡೆಯಲಿದೆ.
ಕೊಡಿಯಾಲಬೈಲು ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ ಸೌರಮಾನ ಯುಗಾದಿಯ ಪ್ರಯುಕ್ತ ವಿಷುಕಣಿ ಸೇವೆ ಎ. 15ರಂದು ಮಧ್ಯಾಹ್ನ 12ಕ್ಕೆ ಜರಗಲಿದೆ. ಆ ಪ್ರಯುಕ್ತ ಕ್ಷೇತ್ರದಲ್ಲಿ ಪುಣ್ಯ ಕಾರ್ಯಗಳು ನಡೆಯಲಿದೆ. ಮೇ 8ರಂದು ಕ್ಷೇತ್ರದ ಐತಿಹಾಸಿಕ ವೀರಸ್ತಂಭಕ್ಕೆ ಸೀಯಾಳ ಅಭಿಷೇಕ ನಡೆಯಲಿದೆ ಎಂದು ಕ್ಷೇತ್ರಡಳಿತ ಸಮಿತಿ ಪ್ರಮುಖರು ತಿಳಿಸಿದ್ದಾರೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಧಾಹ್ನ ವಿಷು ಕಣಿ ಪೂಜೆ, ಮಹಾಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗಲಿದೆ. ಕದ್ರಿ ಶ್ರೀ ಮಂಜುನಾಥ ಕ್ಷೇತ್ರ ದಲ್ಲಿ ವಿಷುಕಣಿ ಪೂಜೆ ಸಹಿತ ಧಾರ್ಮಿಕ ಕಾರ್ಯ ಕ್ರಮ ನಡೆಯಲಿದೆ. ಮನೆಗಳಲ್ಲಿ, ಸಂಘ-ಸಂಸ್ಥೆಗಳಲ್ಲಿಯೂ ಹಬ್ಬದ ಗೌಜಿಗೆ ತಯಾರಿ ಜೋರಾಗಿದೆ.
ಹೂ ಹಣ್ಣು ಖರೀದಿ
ಸೌರಮಾನ ಯುಗಾದಿ ಆಚರಣೆಗೆ ಸಿದ್ಧತೆಗಳು ನಡೆದಿದ್ದು, ನಗರದ ಮಾರುಕಟ್ಟೆ ಯಲ್ಲಿ ಹಬ್ಬ ಆಚರಣೆಗೆ ಬೇಕಾದ ವಸ್ತುಗಳ ಮಾರಾಟ, ಖರೀದಿ ಸಾಗಿತ್ತು. ಯುಗಾದಿ ಆಚರಣೆಯ ಪ್ರಮುಖ ಆಕರ್ಷಣೆಗಳಾದ ಎಳ್ಳು, ಬೆಲ್ಲ, ಹೂವು ಮಾತ್ರವಲ್ಲದೆ ಅತ್ಯಾ ವಶ್ಯಕ ವಸ್ತುಗಳು, ಸ್ಥಳೀಯ ತರಕಾರಿಯ ಖರೀದಿಯಲ್ಲಿ ಜನತೆ ತೊಡಗಿದ್ದರು.