Advertisement

ಕಾಡುಕೋಣ ಹಾವಳಿ; ರೈತರು ಕಂಗಾಲು

12:14 AM Apr 20, 2023 | Team Udayavani |

ಶಿರ್ವ: ಸಮೀಪದ ಪಿಲಾರು ಕಾನ ರಕ್ಷಿತಾರಣ್ಯದ ಪರಿಸರ ಮತ್ತು ಸೂಡ ಗ್ರಾಮದಲ್ಲಿ ಕಾಡುಕೋಣಗಳ ಹಾವಳಿ ವಿಪರೀತವಾಗಿದ್ದು ಗ್ರಾಮಸ್ಥರು ಭಯದಿಂದ ದಿನ ಕಳೆಯುವಂತಾಗಿದೆ.

Advertisement

ಕಾಡಿನಂಚಿನ ಕೃಷಿ ಭೂಮಿಗೆ ಕಾಡುಕೋಣಗಳು ರಾತ್ರಿ – ಹಗಲೆನ್ನದೆ ಹಿಂಡು ಹಿಂಡಾಗಿ ನುಗ್ಗುತ್ತಿದ್ದು ಅಡಿಕೆ, ಭತ್ತ, ಬಾಳೆ, ಗೆಣಸು ಸೇರಿದಂತೆ ವಿವಿಧ ಬಗೆಯ ಕೃಷಿ ನಾಶ ಮಾಡುತ್ತವೆ.
10-13 ಕೋಣಗಳು ಹಿಂಡಾಗಿ ಲಗ್ಗೆ ಕೃಷಿ ಹಾಳುಗೆಡವುತ್ತಿವೆ. ಕೆಲವೆಡೆ ರೈತರು ಮಲ್ಲಿಗೆ ಗಿಡಗಳಿಗೆ ವಿದ್ಯುತ್‌ ದೀಪ ಅಳವಡಿಸಿಕೊಂಡು ರಾತ್ರಿಯಿಡೀ ಕಾವಲು ಕಾಯುತ್ತಿದ್ದಾರೆ.

ಸುಮಾರು 25 ಕ್ವಿಂಟಾಲ್‌ ಭತ್ತ
ಬೆಳೆಯುತ್ತಿದ್ದ ಗದ್ದೆ ಕಾಡುಕೋಣಗಳ ಹಾವಳಿಯಿಂದ ಸರ್ವನಾಶವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಪಿಲಾರುವಿನ ಪ್ರಗತಿಪರ ಕೃಷಿಕ ಅರುಣ್‌ ಡಿ’ಸೋಜಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಅರಣ್ಯ ಇಲಾಖೆ ಸೂಚನೆ
ರಾತ್ರಿ ವೇಳೆ ರಕ್ಷಿತಾರಣ್ಯ ಪ್ರದೇಶದ ರಸ್ತೆಯಲ್ಲಿ ಸಾಗುವ ವಾಹನ ಸವಾರರು ಕರ್ಕಶ ಹಾರ್ನ್ ಬಳಸದೆ ಮಿತ ವೇಗದಲ್ಲಿ ಚಲಿಸಬೇಕಾಗಿದೆ. ಅರಣ್ಯ ಪ್ರದೇಶದಲ್ಲಿ ಅಡ್ಡಾಡುವ ಜನರು ಜಾಗರೂಕರಾಗಿರಬೇಕೆಂದು ಅರಣ್ಯಾಧಿಕಾರಿಗಳು ಸೂಚಿಸಿದ್ದಾರೆ.

ದೇಗುಲಕ್ಕೆ ಬರಲೂ ಭಕ್ತರಿಗೆ ಜೀವಭಯ!
ಪಿಲಾರುಕಾನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸುತ್ತಮುತ್ತ ಭಾರೀ ಗಾತ್ರದ ಕಾಡುಕೋಣಗಳು ಮತ್ತು ಮರಿ ಕೋಣಗಳು ಸುತ್ತಾಡುತ್ತಿದ್ದು, ದೇವಸ್ಥಾನಕ್ಕೆ ಬರುವ ಭಕ್ತರು ಕೂಡ ಭಯಭೀತರಾಗಿದ್ದಾರೆ.

Advertisement

ಕಾರಿಗೆ ಕಾಡುಕೋಣ ಢಿಕ್ಕಿ
ಪಿಲಾರುಕಾನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದ್ವಾರದ ಸಮೀಪ ಬೃಹತ್‌ ಗಾತ್ರದ ಕಾಡುಕೋಣವೊಂದು ರಸ್ತೆಯಲ್ಲಿ ಹೋಗುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದು ಚಾಲಕ ಸಹಿತ ವಾಹನದಲ್ಲಿದ್ದವರು ಪವಾಡ ಸದೃಶ ಪಾರಾದ ಘಟನೆ ಮಂಗಳವಾರ ರಾತ್ರಿ 7.30ರ ವೇಳೆಗೆ ನಡೆದಿದೆ. ಜಿಲ್ಲಾ ಪರಿಷತ್‌ ಮಾಜಿ ಉಪಾಧ್ಯಕ್ಷೆ ಶಿರ್ವದ ಲೀನಾ ಮಥಾಯಸ್‌ ಅವರ ಪುತ್ರ ನೀಲ್‌ ಕ್ವಾಡ್ರಸ್‌ ಪತ್ನಿ, ಪುತ್ರನೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಅಭಯಾರಣ್ಯದಿಂದ ರಸ್ತೆ ದಾಟಲು ಯತ್ನಿಸುತ್ತಿದ್ದ ಕಾಡುಕೋಣ ಢಿಕ್ಕಿ ಹೊಡೆದು ಹಿಂದಕ್ಕೆ ಓಡಿ ಹೋಯಿತು. ಕಾರಿಗೆ ಹಾನಿ ಸಂಭವಿಸಿದ್ದು, ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಪಿಲಾರುಕಾನ ರಕ್ಷಿತಾರಣ್ಯದ ಪ್ರದೇಶದ ಸುತ್ತ ಸುಮಾರು 45 ಲ.ರೂ. ವೆಚ್ಚದಲ್ಲಿ ತಂತಿ ಬೇಲಿ ನಿರ್ಮಿಸಲಾಗುತ್ತಿದೆ. ಕಾಡುಕೋಣದ ಢಿಕ್ಕಿಯಿಂದ ಹಾನಿಗೀಡಾದ ಕಾರಿನವರಿಗೆ ಇಲಾಖೆಯಿಂದ ಪರಿಹಾರ ನೀಡಲು ಪ್ರಯತ್ನಿಸಲಾಗುವುದು.
– ಜೀವನ್‌ದಾಸ್‌ ಶೆಟ್ಟಿ, ಉಪ ವಲಯ ಅರಣ್ಯಾಧಿಕಾರಿ, ಪಡುಬಿದ್ರಿ

– ಸತೀಶ್ಚಂದ್ರ ಶೆಟ್ಟಿ, ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next