ಚಂಡಿಗಢ: ಹುಟ್ಟುಹಬ್ಬಕ್ಕೆ ತರಿಸಿದ್ದ ಕೇಕ್ ಸೇವಿಸಿ 10 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಪಂಜಾಬ್ ನ ಪಟಿಯಾಲದಲ್ಲಿ ನಡೆದಿದೆ.
ಮಾರ್ಚ್ 24 ರಂದು ಕುಟುಂಬವೊಂದು ಬರ್ತ್ ಡೇ ಪ್ರಯುಕ್ತ ಪಂಜಾಬ್‌ನ ಪಟಿಯಾಲದಲ್ಲಿರುವ ಬೇಕರಿಯಿಂದ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದೆ. ಕೇಕ್ ತಿಂದ ಕೆಲ ಕ್ಷಣದಲ್ಲಿ ಮನೆಯ ಸದಸ್ಯರಿಗೆ ವಾಕರಿಕೆ ಮತ್ತು ವಾಂತಿಯ ಅನುಭವವಾಗಿದೆ. ಇದರಲ್ಲಿ 10 ವರ್ಷದ ಮಾನ್ವಿ ಅವರ ಆರೋಗ್ಯ ಹದಗೆಟ್ಟಿದೆ.
ನೆರೆಹೊರೆಯವರು ಮಾನ್ವಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ವರದಿ ತಿಳಿಸಿದೆ.
ಫುಡ್ ಪಾಯ್ಸನ್ ನಿಂದಾಗಿ ಈ ದುರಂತ ಘಟನೆ ನಡೆದಿದೆ ಎನ್ನಲಾಗಿದೆ. ಬೇಕರಿ ಅಂಗಡಿ ಮಾಲೀಕರ ವಿರುದ್ಧ ಐಪಿಸಿ ಸೆಕ್ಷನ್ 273 ಮತ್ತು 304ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಥಳೀಯ ವರದಿಗಳು ಖಚಿತಪಡಿಸಿವೆ. ಬೇಕರಿಯ ಹೆಸರು ಮತ್ತು ಬೇಕರಿ ಇರುವ ವಿವರಗಳು ಇನ್ನೂ ತಿಳಿದುಬಂದಿಲ್ಲ.
ತಮ್ಮ ಮಗಳ ಸಾವಿಗೆ ಕೇಕ್ ಕಾರಣ ಎಂದು ಹೇಳಿರುವ ಕುಟುಂಬವು ಬೇಕರಿ ಮತ್ತು ಅದು ಮಾರಾಟ ಮಾಡುವ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದೆ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ.