ತುಮಕೂರು: ನಗರದ ರೈಲ್ವೆ ನಿಲ್ದಾಣದಲ್ಲಿ ರೈಲಿನ ಹುಟ್ಟುಹಬ್ಬ ಆಚರಣೆ ಅಲ್ಲಿದ್ದವರ ಸಂಭ್ರಮಕ್ಕೆ ಸಾಕ್ಷಿಯಾಯಿತು.
ಹೌದು… ನಗರದ ರೈಲ್ವೆ ನಿಲ್ದಾಣ ವಿಶಿಷ್ಟ ಕಾರ್ಯಕ್ರಮದ ಮೂಲಕ ಗಮನಸೆಳೆಯಿತು. ಪ್ರತಿಯೊಬ್ಬರೂ ಹುಟ್ಟು ಹಬ್ಬವನ್ನು ಶುಭಾಶಯ ಹೇಳಿಕೊಂಡು ಸಂತೋಷಪಡುತ್ತಾರೆ. ಇದೇನಿದು ರೈಲಿನ ಹುಟ್ಟುಹಬ್ಬ ಎಂದು ಆಶ್ಚರ್ಯಪಡುತ್ತಿದ್ದೀರಾ.. ಸಾಮಾನ್ಯವಾಗಿ ಎಲ್ಲೂ ನಡೆಯದ ರೈಲಿನ ಹುಟ್ಟು ಹಬ್ಬವನ್ನು ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ತುಮಕೂರು ನಗರದಲ್ಲಿ ಕಳೆದ ಆರು ವರ್ಷಗಳಿಂದ ರೈಲು ಹುಟ್ಟುಹಬ್ಬ ಆಚರಿಸಿಕೊಂಡು ಬರುತ್ತಿದೆ. ರೈಲ್ವೆ ಪ್ರಯಾಣಿಕರೆಲ್ಲ ಶನಿವಾರ ಬೆಳ್ಳಂಬೆಳಗ್ಗೆಯೇ ನಿಲ್ದಾಣಕ್ಕೆ ಆಗಮಿಸಿದ ವೇದಿಕೆಯ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರಯಾಣಿಕರ ಸಹಕಾರದೊಂದಿಗೆ ಸೊಲ್ಲಾಪುರ-ಬೆಂಗಳೂರು ನಡುವೆ ಸಂಚರಿಸುವ ರೈಲಿಗೆ ಬಾಳೆ ಕಂದು, ಮಾವಿನ ಸೊಪ್ಪು ಕಟ್ಟಿ, ಹೂವಿನಿಂದ ಅಲಂಕರಿಸಿದರು.
ಸುಮಾರು 8 ಗಂಟೆಗೆ ರೈಲಿನ ಚಾಲಕ ವಿ.ಎನ್. ಪ್ರಸಾದ್ ಹಾಗೂ ಸಹಚಾಲಕ ವಿಶ್ವೇಶ್ವರ್ ಪ್ರಸಾದ್ ಮತ್ತು ಗಾರ್ಡ್ ಎನ್. ಕೆ. ನಿರಾಲ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಅಲ್ಲದೆ ಪ್ರಯಾಣಿಕರಿಗೆ ಕೇಕ್ ವಿತರಿಸಿ ಖುಷಿ ಇಮ್ಮಡಿಗೊಳಿಸಿಕೊಂಡರು. ನಂತರ ಅದೇ ರೈಲಿನಲ್ಲಿ ಬೆಂಗಳೂರಿಗೆ ತೆರಳಿದ ವೇದಿಕೆಯ ಪದಾಧಿಕಾರಿಗಳು ರೈಲಿನ ಎಲ್ಲ ಪ್ರಯಾಣಿಕರಿಗೂ ಸಿಹಿ ವಿತರಿಸಿದರು.
ಪ್ರಯಾಣಿಕರಿಗೆ ಅನುಕೂಲ: ಉದ್ಯೋಗ ನಿಮಿತ್ತ ಬೆಂಗಳೂರಿಗೆ ಪ್ರತಿನಿತ್ಯ ಸಂಚರಿಸುವ ಉದ್ಯೋಗಿಗಳಿಗೆ ಅನುಕೂಲವಾಗಿದ್ದ ಬೆಳಗ್ಗೆ 8ಕ್ಕೆ ತುಮಕೂರು ಮಾರ್ಗ ವಾಗಿ ತೆರಳುತ್ತಿದ್ದ ಸೊಲ್ಲಾಪುರ-ಬೆಂಗಳೂರು ರೈಲಿನ ವೇಳೆ ಬದಲಾವಣೆಯಿಂದ ಉಂಟಾಗಿದ್ದ ತೊಂದರೆ ನಿವಾರಣೆಗೆ ಆರಂಭಿಸಲಾದ ರೈಲಿನಿಂದ ತುಂಬಾ ಅನುಕೂಲವಾಗಿತ್ತು. ಅದೇ ಸಂದರ್ಭ ಮುಂಚೂಣಿ ಯಲ್ಲಿ ನಿಂತು ನೇತೃತ್ವ ವಹಿಸಿ ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿ ಮಾಡಿ ತೊಂದರೆ ಮನವರಿಕೆ ಮಾಡಿಕೊಡಲಾಗಿತ್ತು. ಅಲ್ಲದೆ, ನೈಋತ್ಯ ರೈಲ್ವೇ ಅಧಿಕಾರಿಗಳ ಮನವೊಲಿಸಿ ನೂತನ ರೈಲು ಆರಂಭದಕ್ಕೆ ಕಾರಣವಾಗಿದ್ದ ಉತ್ಸಾಹಿ ಪ್ರಯಾಣಿಕರು ಸೇರಿ ವೇದಿಕೆಯೊಂದನ್ನು ಸ್ಥಾಪಿಸಿ ಕೊಂಡು ರೈಲ್ವೆ ಪ್ರಯಾಣಿಕರಿಗೆ ಅಗತ್ಯವಾಗಿರುವ ಅನುಕೂಲ ಒದಗಿಸುತ್ತ ಬಂದಿದ್ದಾರೆ. ಅದೇ ಸಂದರ್ಭ ಹುಟ್ಟಿಕೊಂಡದ್ದು, ಸಂಕಷ್ಟ ನಿವಾರಣೆಗೆ ಆರಂಭ ಗೊಂಡ ರೈಲಿಗೆ ಜನ್ಮ ದಿನಾಚರಣೆ. ರೈಲು ಆರಂಭ ಗೊಂಡ ಆ. 3ರಂದು ಪ್ರತಿವರ್ಷವೂ ರೈಲಿಗೆ ಹುಟ್ಟು ಹಬ್ಬ ಆಚರಿಸಿ ಪ್ರಯಾಣಿಕರೊಂದಿಗೆ ವೇದಿಕೆ ಪದಾಧಿಕಾರಿಗಳು ಸಂಭ್ರಮಿಸುತ್ತಿದ್ದಾರೆ.
ರೈಲು ಪ್ರಯಾಣಿಕರ ವೇದಿಕೆ ಅಧ್ಯಕ್ಷೆ ಬಾ. ಹ. ರಮಾಕುಮಾರಿ, ರೈಲ್ವೇ ಸುರಕ್ಷಾ ಪಡೆಯ ಉಪ ನಿರೀಕ್ಷಕ ಕುಬೇರಪ್ಪ ಮತ್ತು ತುಮಕೂರು ರೈಲ್ವೇ ವ್ಯವಸ್ಥಾಪಕ ರಮೇಶ್ ಬಾಬು ಮತ್ತು ಸಿಬ್ಬಂದಿ, ಡಿಆರ್‌ಯುಸಿಸಿ ಸದಸ್ಯ ರಘೋತ್ತಮರಾವ್, ವೇದಿಕೆ ಕಾರ್ಯದರ್ಶಿ ಕರುಣಂರಮೇಶ್ ಮತ್ತಿತರರು ಭಾಗವಹಿಸಿದ್ದರು.