ಪಡುಬಿದ್ರಿ: ಮಾಣಿಯೂರು ಅನಂತ ಪದ್ಮನಾಭನ ಸನ್ನಿಧಾನ ಅಭಿವೃದ್ಧಿಯಾಗಿರುವುದು ಸಂತಸ ತಂದಿದೆ. ಅತನ ಪೂಜೆಯೇ ತನಗೆ ಮುಂದೆ ಕೃಷ್ಣಪೂಜಾ ದೀಕ್ಷೆಯು ದೊರೆಯಲು ಕಾರಣವಾಗಿತ್ತು. ಜನ್ಮಭೂಮಿಯ ದರ್ಶನದ ಸಂತೋಷ ಎಲ್ಲಿ ಹೋದರೂ ಆಗದು. ಅನಂತ ಪದ್ಮನಾಭನ ಜಾಗೃತ ಸನ್ನಿಧಾನ ಇಲ್ಲಿದೆ. ನಮ್ಮ ಪರ್ಯಾಯವು ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಹಾಗೂ ನಮ್ಮ ಜನ್ಮಭೂಮಿ ಮಾಣಿಯೂರಿನ ಅಭಿವೃದ್ಧಿಯ ನೆನಪಲ್ಲಿ ಸದಾ ಹಸಿರಾಗಿರುತ್ತದೆ. ಈ ಬಾರಿಯೂ ಮಾಣಿಯೂರಿನವರದ್ದೇ ಪರ್ಯಾಯ. ತಾವೆಲ್ಲರೂ ಉಡುಪಿಯಲ್ಲಿದ್ದು ಅದನ್ನು ನಡೆಸಿಕೊಡಬೇಕೆಂದು ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಅವರು ಜ. 11ರಂದು ಎಲ್ಲೂರು ಸಮೀಪದ ಮಾಣಿಯೂರು ಮಠದಲ್ಲಿ ತಾವು ಕಲಿತು ಈಗ ಮುನ್ನಡೆಸುತ್ತಿರುವ ಕೆಮುಂಡೇಲು ಅನುದಾನಿತ ಹಿ. ಪ್ರಾ. ಶಾಲೆ, ಶ್ರೀ ಪಾಂಡುರಂಗ ಭಜನ ಮಂಡಳಿ ಕೆಮುಂಡೇಲು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಮುದರಂಗಡಿ ಮತ್ತು ಜನ್ಮಭೂಮಿ ಗೌರವಾಭಿನಂದನ ಸಮಿತಿಗಳ ಆಶ್ರಯದಲ್ಲಿನ `ಗೌರವಾಭಿನಂದನೆ’ಯನ್ನು ಸ್ವೀಕರಿಸಿ ನೆರೆದಿದ್ದವರನ್ನು ಹರಸಿ ಮಾತನಾಡಿದರು.
ಕೆಮುಂಡೇಲು ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಜಗನ್ನಾಥ ಶೆಟ್ಟಿ, ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಎಲ್ಲೂರುಗುತ್ತು ಪ್ರಪುಲ್ಲ ಶೆಟ್ಟಿ, ಮುದರಂಗಡಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣ ದೇವಾಡಿಗ, ಪಾಂಡುರಂಗ ಭಜನಾ ಮಂಡಳಿಯ ಕಾರ್ಯದರ್ಶಿ ಕೃಷ್ಣಾನಂದ ರಾವ್, ಎಲ್ಲೂರು ಗ್ರಾ. ಪಂ. ಮಾಜಿ ಅಧ್ಯಕ್ಷ ಜಯಂತಕುಮಾರ್ ಉಪಸ್ಥಿತರಿದ್ದರು.
ಮಾಣಿಯೂರು ಮಠಕ್ಕಾಗಮಿಸುವ ರಸ್ತೆ ಕಾಂಕ್ರೀಟೀಕರಣಕ್ಕೆ ಹಾಗೂ ಅಭಿವೃದ್ಧಿಗೆ ಸಹಕರಿಸಿದ ಮಾಜಿ ಗ್ರಾ. ಪಂ. ಸದಸ್ಯೆ ತೆರೇಸಾ, ಜಯಂತ್ ಕುಮಾರ್ ಹಾಗೂ ಗಂಜೀಫಾ ಚಿತ್ರಕಲೆಗಳಿಂದ ಮಾಣಿಯೂರು ಮಠದ ಅಂದವನ್ನು ಹೆಚ್ಚಿಸಿರುವ ಉಪಾಧ್ಯಾಯ ಮೂಡುಬೆಳ್ಳೆ ಅವರನ್ನು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಂತ್ರಾಕ್ಷತೆಗಳನ್ನಿತ್ತು ಗೌರವಿಸಿ ಅಭಿನಂದಿಸಿದರು.
ಶ್ರೀಗಳ ಚತುರ್ಥ ಪರ್ಯಾಯ ಕಾಲದಲ್ಲಿ ಗೈಯ್ಯಲಾಗಿರುವ ಮಾಣಿಯೂರು ಮಠದ ಶ್ರೀ ಅನಂತಪದ್ಮನಾಭ ಸನ್ನಿಧಾನದ ಅಭಿವೃದ್ಧಿಕಾರ್ಯಗಳನ್ನು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಲೋಕಾರ್ಪಣೆಗೈದರು. ಕೆಮುಂಡೇಲು ಶ್ರೀ ಪಾಂಡುರಂಗ ಭಜನ ಮಂದಿರದ ಪಾಂಡುರಂಗ ದೇವರಿಗೆ ಶ್ರೀಪಾದರು ಪೂಜೆ ಸಲ್ಲಿಸಿ ತಾವು ಕಲಿತ ಕೆಮುಂಡೇಲು ಅ. ಹಿ. ಪ್ರಾ. ಶಾಲೆಗೆ ತೆರಳಿ ಅಲ್ಲಿ ನೂತನ ಶಾಲಾ ಕೊಠಡಿಗಳ ಕಟ್ಟಡವನ್ನು ಈ ಸಂದರ್ಭದಲ್ಲಿ ಉದ್ಘಾಟಿಸಿದರು. ಮಾಣಿಯೂರು ಮಠಕ್ಕೆ ಬರುವ ಸೂಚನಾ ಫಲಕವನ್ನೂ ಶ್ರೀಪಾದರು ಅನಾವರಣಗೊಳಿಸಿದರು.
ಕೆಮುಂಡೇಲು ಅ. ಹಿ. ಪ್ರಾ. ಶಾಲಾ ಮುಖ್ಯೋಪಾಧ್ಯಾಯ ಚಂದ್ರಹಾಸ ಪ್ರಭು ಸ್ವಾಗತಿಸಿ ಶ್ರೀ ಶ್ರೀಗಳ ಸಮ್ಮಾನಪತ್ರವನ್ನು ವಾಚಿಸಿದರು. ಜಾನಪದ ವಿದ್ವಾಂಸ ಕೆ. ಎಲ್. ಕುಂಡಂತಾಯ ಪ್ರಾಸ್ತಾವಿಸಿದರು. ಹರೀಶ್ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.