Advertisement

ಜಯಚಾಮರಾಜ ಒಡೆಯರ್‌ ಜನ್ಮ ಶತಮಾನೋತ್ಸವ

09:25 PM Jul 16, 2019 | Lakshmi GovindaRaj |

ಮೈಸೂರು: ಮೈಸೂರು ರಾಜಮನೆತನದ ಕೊನೆಯ ಅರಸು ಜಯ ಚಾಮರಾಜ ಒಡೆಯರ್‌ ಅವರನ್ನು ಇಂದಿನ ಪೀಳಿಗೆಗೆ ಪರಿಚಯಿಸಲು ಅವರ ಕುರಿತು ಸಮಗ್ರ ಕೃತಿ ಹೊರತರಬೇಕು ಎಂದು ಭಾರತೀಯ ವಿದ್ಯಾಭವನ ಅಧ್ಯಕ್ಷ ಪ್ರೊ.ಎ.ವಿ.ನರಸಿಂಹಮೂರ್ತಿ ಹೇಳಿದರು.

Advertisement

ಶ್ರೀಜಯಚಾಮರಾಜ ಅರಸು ಎಜುಕೇಷನ್‌ ಟ್ರಸ್ಟ್‌ವತಿಯಿಂದ ಜಗನ್ಮೋಹನ ಅರಮನೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀಜಯಚಾಮರಾಜ ಒಡೆಯರ್‌ ಅವರ ಜನ್ಮ ಶತಮಾನೋತ್ಸವದಲ್ಲಿ ಮಾತನಾಡಿದರು.

ಕೃತಿ ಹೊರ ತನ್ನಿ: ಜಯ ಚಾಮರಾಜ ಒಡೆಯರ್‌ ಬಗ್ಗೆ ಜನರಿಗೆ ಗೊತ್ತಿಲ್ಲದ ಅನೇಕ ವಿಷಯಗಳಿವೆ. ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಹಾಗೂ ಪಾಶ್ಚಾತ್ಯ ಸಂಗೀತಗಳಲ್ಲಿ ನಿಷ್ಣಾತರಾಗಿದ್ದ ಅವರ ಘನತೆ-ಗೌರವ, ಆಧ್ಯಾತ್ಮ ಜ್ಞಾನ, ಸಂಗೀತ ಜ್ಞಾನವನ್ನು ಇಂದಿನ ಪೀಳಿಗೆಗೆ ಪರಿಚಯಿಸಲು ಈ ಟ್ರಸ್ಟ್‌ ಸಮಗ್ರ ಕೃತಿ ಹೊರತರಬೇಕು. ಇಲ್ಲವಾದಲ್ಲಿ ಕೃತಿ ಹೊರತರಲು ಭಾರತೀಯ ವಿದ್ಯಾಭವನ ಸಿದ್ಧವಿದೆ ಎಂದರು.

ಮೈಸೂರು ವಿವಿ ಬಯಲು ರಂಗ ಮಂದಿರದಲ್ಲಿ ಜಯಚಾಮರಾಜ ಒಡೆಯರ್‌ ಸ್ಮರಣಾರ್ಥ ವರ್ಷಕ್ಕೊಮ್ಮೆ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮ ಇತ್ತೀಚಿನಲ್ಲಿ ನಿಂತು ಹೋಗಿದೆ. ಮೈಸೂರು ವಿವಿ ಜೊತೆಗೆ ಮಾತನಾಡಿ ಆ ಕಾರ್ಯಕ್ರಮವನ್ನು ಪುನಾರಂಭಿಸಲು ಮುಂದಾಗಬೇಕೆಂದರು.

ಪತ್ತೆ ಮಾಡಿ: ಜಯಚಾಮರಾಜ ಒಡೆಯರ್‌ ಬಹು ಪ್ರತಿಭೆಯ ವಿದ್ವಾಂಸರು. ಅವರು 94 ಕೃತಿಗಳನ್ನು ರಚಿಸಿದ್ದು, ಇನ್ನೂ ಕೆಲವು ಕೃತಿಗಳು ಪತ್ತೆಯಾಗಬೇಕಿದೆ. ಆ ಕೃತಿಗಳನ್ನು ಪತ್ತೆ ಮಾಡಿ ಪರಿಚಯಿಸಿದರೆ ಅವರ ಜನ್ಮ ಶತಮಾನೋತ್ಸವ ಅರ್ಥಪೂರ್ಣವಾಗಲಿದೆ ಎಂದು ಅಭಿಪ್ರಾಯಪಟ್ಟರು.

Advertisement

ಇವತ್ತಿನ ಬರಹಗಾರರು ಏನೇನೋ ಬರೆಯುತ್ತಾರೆ. ಆದರೆ, ಜಯ ಚಾಮರಾಜ ಒಡೆಯರ್‌ ಅವರು ಧಾರ್ಮಿಕ ವಿಷಯಗಳಲ್ಲಿ ವಿಶೇಷ ಆಸಕ್ತಿ ವಹಿಸಿ ಭಗವದ್ಗೀತೆ ಮೇಲೂ ಕೃತಿ ಬರೆದಿದ್ದಾರೆ. ಇಂದಿನ ಬರಹಗಾರರಿಗೆ ಅವರು ಮಾದರಿ ಎಂದರು.

ನಮ್ಮ ಪರಂಪರೆಯಲ್ಲಿ ಮಹಾರಾಜರನ್ನು ದೇವರೆಂದು ಭಾವಿಸಲಾಗಿತ್ತು. ಇವತ್ತು ಮಹಾರಾಜರೂ ಇಲ್ಲ. ಇವತ್ತಿನ ಮುಖ್ಯಮಂತ್ರಿಗಳು ತಮ್ಮ ತಮ್ಮ ಜಗಳದಲ್ಲೇ ನಿರತರಾಗಿದ್ದಾರೆ ಎಂದು ಬೇಸರಿಸಿದರು.

ರಾಜವಂಶಸ್ಥರಾದ ವರ್ಚಸ್ವಿ ಸಿದ್ದಲಿಂಗರಾಜೇ ಅರಸ್‌ ಮಾತನಾಡಿ, ನೂರಾರು ವರ್ಷಗಳ ಈ ಪರಂಪರೆ ಹೀಗೆಯೇ ನಡೆದುಕೊಂಡು ಹೋಗಬೇಕು. ಟ್ರಸ್ಟ್‌ ಮೂಲಕ ಜಯಚಾಮರಾಜ ಒಡೆಯರ್‌ ಅವರನ್ನು ಕುರಿತ ಬರಹಗಳನ್ನು ಸಂಗ್ರಹಿಸಿ ಸಮಗ್ರ ಗ್ರಂಥ ಹೊರತರುವ ಕೆಲಸವಾಗಬೇಕೆಂದರು.

ಮುನ್ನಡೆಸುವೆ: ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ ಅಧ್ಯಕ್ಷ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಕಷ್ಟದಲ್ಲಿದ್ದ ಸಂಸ್ಥೆಯನ್ನು ಅಮ್ಮ ಚೆನ್ನಾಗಿ ನಿರ್ವಹಿಸಿ ಸುಲಭ ಮಾಡಿದ್ದಾರೆ. ಅಮ್ಮನ ಸಲಹೆ, ಪ್ರೋತ್ಸಾಹದಿಂದ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತೇನೆಂದರು.

ಎಚ್‌ಎಎಲ್‌ ಸ್ಥಾಪನೆ ಸೇರಿ ಎಲ್ಲಾ ಕ್ಷೇತ್ರಗಳಿಗೂ ಜಯಚಾಮರಾಜ ಒಡೆಯರ್‌ರ ಕೊಡುಗೆ ಅಪಾರ. 108 ಕೃತಿಗಳನ್ನು ರಚಿಸುವ ಉದ್ದೇಶ ಹೊಂದಿದ್ದರಾದರೂ ಅದು ಸಾಧ್ಯವಾಗಲಿಲ್ಲ. 94 ಕೃತಿ ರಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸುವರ್ಣಯುಗ: ರಾಜ ಪ್ರಮುಖ್‌ ಪದವಿಯನ್ನು ತ್ಯಾಗ ಮಾಡಿ ರಾಜ್ಯಪಾಲರಾಗುವ ಮೂಲಕ ಕರ್ನಾಟಕ ಏಕೀಕರಣಕ್ಕೂ ಕೊಡುಗೆ ನೀಡಿ, ಕನ್ನಡಿಗರ ಕನಸು ನನಸು ಮಾಡಿದ್ದಾರೆ. ನಮ್ಮ ಪೂರ್ವಜನರು ಕಟ್ಟಿಕೊಟ್ಟ ಈ ರಾಜ್ಯ ಅವರ ಆಳ್ವಿಕೆಯಲ್ಲಿ ಸುವರ್ಣಯುಗವಾಗಿತ್ತು.

ಅಂತಹ ಮಾದರಿ ಮೈಸೂರು ಪುನಾ ನೋಡುವಂತಾಗಬೇಕೆಂದರು. ಮಾಜಿ ಮೇಯರ್‌ ಎಚ್‌.ಎನ್‌.ಶ್ರೀಕಂಠಯ್ಯ ಮಾತನಾಡಿದರು. ಟ್ರಸ್ಟ್‌ನ ಕಾರ್ಯದರ್ಶಿ ಭಾರತಿ ಅರಸ್‌, ಟ್ರಸ್ಟಿ ಮಹೇಶ್‌ ಅರಸ್‌ ಮತ್ತಿತರರಿದ್ದರು.

ಇನ್ನೂ ಸಾಕಷ್ಟು ಕೆಲಸ ಮಾಡಬೇಕಿದೆ: ರಾಜಮನೆತನ ಹಿಂದಿನಿಂದಲೂ ವಿದ್ಯಾಭ್ಯಾಸಕ್ಕೆ ಅದರಲ್ಲೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿತ್ತು. ಶ್ರೀ ಜಯಚಾಮರಾಜ ಅರಸು ಎಜುಕೇಷನ್‌ ಟ್ರಸ್ಟ್‌ ಮೂಲಕ ಆ ಕೆಲಸವನ್ನು ಮುಂದುವರಿಸಿದ್ದೇವೆ.

ಇನ್ನು ಮುಂದೆಯೂ ಮಾಡುವ ಕೆಲಸ ಸಾಕಷ್ಟಿದೆ. ಚೆನ್ನಾಗಿ ನಿರ್ವಹಿಸಿಕೊಂಡು ಹೋಗಲಿ ಎಂದು ಶ್ರೀಜಯಚಾಮರಾಜ ಅರಸು ಎಜುಕೇಷನ್‌ ಟ್ರಸ್ಟ್‌ನ ಮಹಾ ಪೋಷಕರಾದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಆಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next