ಮೈಸೂರು: ಮೈಸೂರು ಸಂಸ್ಥಾನದ ಯದುವಂಶದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವವನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.
ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ವತಿಯಿಂದ ಅಂಬಾವಿಲಾಸ ಅರಮನೆಯ ದರ್ಬಾರ್ ಹಾಲ್ನಲ್ಲಿ ಜಯಚಾಮರಾಜ ಒಡೆಯರ್ ಅವರ ಕೊಡುಗೆಯನ್ನು ಸ್ಮರಿಸುವ ಮೂಲಕ ಜನ್ಮಶತಮಾನೋತ್ಸವ ಆಚರಿಸಲಾಯಿತು.
ಜಯಚಾಮರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜನ್ಮಶತಮಾನೋ ತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ತಮ್ಮ ರಾಜ್ಯದ ಜನರ ಬದುಕನ್ನು ಉನ್ನತೀಕರಣಕ್ಕಾಗಿ ದುಡಿದ ಮೈಸೂರು ಮಹಾರಾಜರು ಪ್ರಜಾಪ್ರಭುತ್ವದಲ್ಲಿಯೂ ರಾಜ ಪ್ರಭುತ್ವದ ಕುರುಹು ಉಳಿಯುವಂತೆ ಮಾಡಿದ್ದಾರೆ ಎಂದು ಪ್ರಶಂಸಿಸಿದರು.
94 ಕೃತಿಗಳ ಸೀಡಿ: ಕಾರ್ಯಕ್ರಮದಲ್ಲಿ ಜಯಚಾಮ ರಾಜ ಒಡೆಯರ್ ಸಂಗೀತ ಸಂಯೋಜನೆಯ 94 ಕೃತಿಗಳ ಸೀಡಿಯನ್ನು ಮೈಸೂರು ಆಕಾಶವಾಣಿಯ ನಿರ್ದೇಶಕ ಸುನಿಲ್ ಭಾಟೀಯಾ ಅವರು ರಾಜವಂಶ ಸ್ಥರಿಗೆ ಹಸ್ತಾಂತರ ಮಾಡಿದರು. ಚಾಮುಂಡಿ ಬೆಟ್ಟದ ತೊಪ್ಪಲಿನ ಮೈಸೂರು ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‌ಗೆ ಜಯಚಾಮರಾಜ ಒಡೆಯರ್ ಸೆಂಟರ್ ಆಫ್ ಹೈಯರ್ ಎಜುಕೇಷನ್ ಎಂದು ನಾಮಕರಣ ಮಾಡುವುದಾಗಿ ಮೈಸೂರು ವಿವಿ ಕುಲಪತಿ ಡಾ.ಹೇಮಂತಕುಮಾರ್ ಘೋಷಿಸಿದರು. ಲಲಿತ ಕಲೆಗಳಿಗೆ ಸ್ಮರಣೀಯ ಕೊಡುಗೆ ನೀಡಿದ ಮಾವನವರಾದ ಜಯಚಾಮರಾಜ ಒಡೆಯರ್ ಅವರಿಗೆ ನವೀಕೃತ ಜಗನ್ಮೋಹನ ಅರಮನೆಯ ಆರ್ಟ್ ಗ್ಯಾಲರಿ ಸಮರ್ಪಿಸುವುದಾಗಿ ಪ್ರಮೋದಾದೇವಿ ಒಡೆಯರ್ ಪ್ರಕಟಿಸಿದರು. ಸಂಜೆ ಅರಮನೆ ಆವರಣದಲ್ಲಿ ಸಿಂಪೋನಿ ಆರ್ಕೆಸ್ಟ್ರಾದ ಮೂಲಕ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಸಮಾರಂಭ ನಡೆಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 9 ಮಂದಿಗೆ ಜಯ ಚಾಮರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾ ಯಿತು. ಪ್ರೊ.ಎಲ್.ಶಿವರುದ್ರಪ್ಪ (ತತ್ವಶಾಸ್ತ್ರ), ಬಿ.ಎನ್.ಎಸ್.ಅಯ್ಯಂಗಾರ್ (ಯೋಗ), ಪ್ರೊ.ಎಂ.ಎ.ಲಕ್ಷ್ಮೀ ತಾತಾಚಾರ್ಯ ಶಾಸ್ತ್ರಿ (ಸಂಸ್ಕೃತ), ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ (ಕನ್ನಡ), ಬಿ.ಸರೋಜದೇವಿ (ಸಿನಿಮಾ), ಡಾ. ಸುಧಾಮೂರ್ತಿ(ಸಮಾಜ ಸೇವೆ), ಸೈಯದ್ ಘನಿಖಾನ್ (ಕೃಷಿ), ಡಾ. ಅಜಯ್ ದೇಸಾಯಿ (ವನ್ಯಜೀವಿ) ಮತ್ತು ಪ್ರಣವಿ ಅರಸ್ (ಗಾಲ್ಫ್ ಕ್ರೀಡಾಪಟು) ಇವರಿಗೆ ಪ್ರಮಾಣ ಪತ್ರ, ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು.