ನೆಲಮಂಗಲ: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಶ್ರೀಗಳ ಕಾಯಕ ತತ್ವ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಯುವಪೀಳಿಗೆಗೆ ಶ್ರೀಗಳು ದಾರಿದೀಪ ಆಗಿದ್ದಾರೆ ಎಂದು ಅಖೀಲಭಾರತ ವೀರಶೈವ ಮಹಾಸಭಾ ಕೇಂದ್ರ ಘಟಕದ ನಿರ್ದೇಶಕ ಎನ್.ಎಸ್ . ನಟರಾಜು ತಿಳಿಸಿದರು.
ಪಟ್ಟಣದ ಎನ್‌ಸಿಎಸ್ ಸದನದಲ್ಲಿರುವ ಮಹಾಸಭಾ ಕಚೇರಿಯಲ್ಲಿ ಆಯೋಜಿಸಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರ 114ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಮಕ್ಕಳೆಂದರೆ ಅಚ್ಚು ಮೆಚ್ಚು. ದಾಸೋಹ ಅವರ ಕಾಯಕತತ್ವ ಅಸಾಮಾನ್ಯವಾದದ್ದು, ಶ್ರೀಗಳಿಗೆ ಬೇಡುವ ಮನಸ್ಸು ಇರಲಿಲ್ಲ, ಅವರು ಮಠಬೆಳಸಿದ ರೀತಿ ಒಂದು ವಿಸ್ಮಯವೇ ಸರಿ ಎಂದು ಹೇಳಿದರು.
ಭೌತಿಕ ಮತ್ತು ಬೌದ್ಧಿಕತೆಯನ್ನು ಸಾಧಿಸಿದ ಮಹಾನ್ ಮಾನವತಾವಾದಿ ಆಗಿರುವ ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳು, ಮಠದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ ವಿಶ್ವದ ಉದ್ದಗಲಕ್ಕೂ ತಮ್ಮ ಶಿಷ್ಯಕೋಟಿಯನ್ನು ಹೊಂದುವ ಮೂಲಕ ಜಗದ್ಗುರು ಆಗಿದ್ದಾರೆ ಎಂದು ಹೇಳಿದರು. ಪುಷ್ಪನಮನ: ಕಾರ್ಯಕ್ರಮದ ಅಂಗವಾಗಿ ಡಾ.ಶಿವಕು ಮಾರ ಸ್ವಾಮೀಜಿ, ಬಸವಣ್ಣ, ರೇಣುಕಾಚಾರ್ಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.
ಅಭಿನಂದನೆ: ಮಹಾಸಭಾ ರಾಜ್ಯ ಯುವ ಘಟಕದ ಕಾರ್ಯದರ್ಶಿ ಆರ್.ಕೊಟ್ರೇಶ್, ಜಿಲ್ಲಾ ಶ್ರೀ ಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ವೇದಾವತಿ ಅವರನ್ನು ಅಭಿನಂದಿಸಿ ಗೌರಸಲಾಯಿತು. ಮಹಾಸಭಾ ತಾಲೂಕು ಅಧ್ಯಕ್ಷ ಎನ್.ಎಸ್. ಶಾಂತಕುಮಾರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ರಾಜಮ್ಮ ಪ್ರಕಾಶ್, ರಾಜ್ಯ ನಿರ್ದೇಶಕ ಎಂ.ಬಿ.ಮಂಜುನಾಥ್, ತಾಲೂಕು ಕಾರ್ಯದರ್ಶಿ ಎನ್.ರಾಜಶೇಖರ್, ಪದಾ ಧಿಕಾರಿಗಳಾದ ಅಣ್ಣಪ್ಪ, ರೇಣುಕಾಸ್ವಾಮಿ, ಪ್ರದೀಪ್, ಸತೀಶ್, ಮರುಳಸಿದ್ದಯ್ಯ, ಲೋಕೇಶ್, ಗಂಗರಾಜು, ಸರ್ವಮಂಗಳಮ್ಮ, ವಿಜಯಕುಮಾರಿ, ಸುಮಾ, ಮಂಜುಳಾ ಸುರೇಶ್, ನೀಲಮ್ಮ, ರುದ್ರಾಣಮ್ಮ, ಚಂದ್ರಿಕಾ, ಪ್ರಮೀಳಾ ಮತ್ತಿತರರು ಉಪಸ್ಥಿತರಿದ್ದರು.