Advertisement

ಆಹಾರವಿಲ್ಲದೆ ನಲುಗಿದ ಬಾನಾಡಿಗಳು

12:51 PM Apr 09, 2020 | Suhan S |

ಬೆಂಗಳೂರು: ವಿಧಾನಸೌಧ ಮತ್ತು ಹೈಕೋರ್ಟ್‌ ಆವರಣ ಪಾರಿವಾಳಗಳ ಆವಾಸ ಸ್ಥಾನವಾಗಿದ್ದು, ಲಾಕ್‌ಡೌನ್‌ನಿಂದ ಪಕ್ಷಿಗಳಿಗೂ ಆಹಾರ ಇಲ್ಲದಂತಾಗಿದೆ. ಇದರಿಂದ ಕೆಲ ಪಕ್ಷಿಗಳು ಬೆಂಗಳೂರು ಸುತ್ತಲಿನ ಪ್ರದೇಶಗಳಿಗೆ ವಲಸೆ ಹೋಗುತ್ತಿವೆ.

Advertisement

ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿಧಾನಸೌಧ, ಹೈಕೋರ್ಟ್‌ ಆವರಣ, ಕಬ್ಬನ್‌ ಉದ್ಯಾನದಲ್ಲಿ ನೀರಿನ ಲಭ್ಯತೆ ಇಲ್ಲದಿರುವುದರಿಂದ ಪಾರಿವಾಳಗಳು ವಲಸೆ ಹೋಗಲೂ ಇದು ಕೂಡ ಕಾರಣವಾಗಿದೆ. ಪ್ರತಿವರ್ಷ ವಸಂತ ಕಾಲದಲ್ಲಿ ಪಾರಿವಾಳಗಳ ಹಿಂಡು ಆಗಮಿಸುತ್ತಿದ್ದು, ವಿಹಾರಕ್ಕೆಂದು ಕಬ್ಬನ್‌ ಉದ್ಯಾನಕ್ಕೆ ಬಂದಿದ್ದ ಜನ ಪಕ್ಷಿಗಳಿಗೆ ಕಾಳುಗಳನ್ನು ಹಾಕುತ್ತಿದ್ದರು. ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ನಿತ್ಯ ಕಬ್ಬನ್‌ ಉದ್ಯಾನಕ್ಕೆ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರು ಬರುತ್ತಿದ್ದರು. ವಾರಾಂತ್ಯದಲ್ಲಿ ಈ ಸಂಖ್ಯೆ ಲಕ್ಷದ ಗಡಿ ದಾಟುತ್ತಿತ್ತು. ಆದರೀಗ ಕಬ್ಬನ್‌ ಉದ್ಯಾನದಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವವರೇ ಇಲ್ಲದಂತಾಗಿದೆ.

ಬೆಳಗ್ಗೆ ವಾಕಿಂಗ್‌ಗೆ ಬರುತ್ತಿದ್ದ ಜನ ಕೂಡ ಪಾರಿವಾಳಗಳಿಗೆ ಆಹಾರ ಹಾಕುತ್ತಿದ್ದರು. ಮಧ್ಯಾಹ್ನದ ವೇಳೆ ಹೈಕೋರ್ಟ್‌ ಸುತ್ತಲಿನ ಪ್ರದೇಶದಲ್ಲಿ ಹಣ್ಣುಗಳ ಅಂಗಡಿಗಳು ತೆರೆ‌ದಿರುತ್ತಿದ್ದು, ಪಕ್ಷಿಗಳು ಹಾರಾಡುತ್ತಾ ಆಹಾರ ಸೇವಿಸುತ್ತಿದ್ದವು. ಆದರೆ, ಲಾಕ್‌ಡೌನ್‌ನಿಂದ ಪಾರಿವಾಳಗಳಿಗೆ ಆಹಾರ ಇಲ್ಲದಂತಾಗಿದೆ ಎಂದು ಪಕ್ಷಿಪ್ರಿಯರು ತಿಳಿಸಿದ್ದಾರೆ.

ಆಹಾರ ಸೇವಿಸಿ ಮರಳಿ ಗೂಡಿಗೆ: ವಿಧಾನಸೌಧ ಮತ್ತು ಹೈಕೋರ್ಟ್‌ ಆವರಣಗಳಲ್ಲಿ ಗೂಡುಗಳನ್ನು ಕಟ್ಟಿರುವ ಪಾರಿವಾಳಗಳು ಆಹಾರ ಹುಡುಕಿಕೊಂಡು ಬೇರೆ ಪ್ರದೇಶಗಳಿಗೆ ತೆರಳಿ ಮತ್ತೆ ತಮ್ಮ ಆವಾಸ ಸ್ಥಾನಕ್ಕೆ ಮರಳುತ್ತವೆ. ಇದರಿಂದಾಗಿ ಪಾರಿವಾಳ ವಲಸೆ ಪ್ರಮಾಣ ತೀರ ಕಡಿಮೆ. ಒಂದು ಅಂದಾಜಿನ ಪ್ರಕಾರ ಶೇ. 20ರಷ್ಟು ಪಾರಿವಾಳಗಳು ವಲಸೆ ಹೋಗಿರಬಹುದು ಎಂದು ಪಕ್ಷಿಗಳ ತಜ್ಞ ಇಮ್ರಾನ್‌ ಖಾನ್‌ ತಿಳಿಸಿದ್ದಾರೆ. ವಿಧಾನಸೌಧ ಮತ್ತು ಹೈಕೋರ್ಟ್‌ ಆವರಣವು ಪಾರಿವಾಳಗಳ ತಾಣ ಎಂಬ ಪ್ರಖ್ಯಾತಿ ಇದೆ. ಪ್ರಸ್ತುತ ಲಾಕ್‌ ಡೌನ್‌ ನಿಂದಾಗಿ ಪಕ್ಷಿಗಳಿಗೆ ಆಹಾರ ಕೊರತೆ ಎದುರಾಗಿದ್ದು, ಇದನ್ನು ಮನಗಂಡ, ಕೆಲ ಸಂಘಟನೆಗಳು, ಪಕ್ಷಿ ಪ್ರಿಯರು ಪಾರಿವಾಳಗಳಿಗೆ ಶೇಂಗಾ, ಕಡಲೆ ಸೇರಿ ವಿವಿಧ ಕಾಳುಗಳನ್ನು ಹಾಕುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

ಕಬ್ಬನ್‌ ಉದ್ಯಾನದಲ್ಲಿ ಹಣ್ಣಿನ ಮರಗಳಿಲ್ಲ: ಬೆಂಗಳೂರಿನ ಹಸಿರು ಮನೆ ಎಂಬ ಪ್ರಖ್ಯಾತಿ ಹೊಂದಿದ ಕಬ್ಬನ್‌ ಉದ್ಯಾನದಲ್ಲಿ ಸಾವಿರಾರು ವಿವಿಧ ಪ್ರಭೇದಗಳ ಹೂವಿನ ಗಿಡಗಳಿವೆ. ಆದರೆ, ಬೆರಳೆಣಿಕೆಯಷ್ಟು ಮಾವು ಮತ್ತು ಹಲಸಿನ ಮರಗಳಿದ್ದು, ಈ ಮರಗಳ ಹಣ್ಣುಗಳನ್ನು ಪಕ್ಷಿಗಳಿಗೆ ದೊರೆಯದಂತೆ ಉದ್ಯಾನದ ಸಿಬ್ಬಂದಿ ಕೊಂಡೊಯ್ಯುತ್ತಿದ್ದಾರೆ ಎಂಬ ಆರೋಪಗಳಿವೆ. ಉದ್ಯಾನದಲ್ಲಿ ಹಣ್ಣಿನ ಗಿಡಗಳನ್ನು ನೀಡುವಂತೆ ಕಬ್ಬನ್‌ ಉದ್ಯಾನ ನಡಿಗೆದಾರರ ಸಂಘದ ಪದಾಧಿಕಾರಿಗಳು ತೋಟಗಾರಿಕೆ ಇಲಾಖೆಗೆ ಮನವಿ ಮಾಡಿದ್ದರೂ, ಈವರೆಗೂ ಯಾವುದೇ ರೀತಿಯಲ್ಲಿ ಹಣ್ಣಿನ ಗಿಡಗಳನ್ನು ನೆಡುವಲ್ಲಿ ಮುಂದಾಗಿಲ್ಲ. ಹಣ್ಣುಗಳ ಮರಗಳು ಇದ್ದರೆ ಪಕ್ಷಿಗಳು ವಲಸೆ ಹೋಗುತ್ತಿರಲಿಲ್ಲ ಎಂದು ಪಕ್ಷಿ ತಜ್ಞರು ತಿಳಿಸಿದ್ದಾರೆ.

Advertisement

ಪಕ್ಷಿಗಳ ವಲಸೆ ಎಲ್ಲಿಗೆ? :  ಕೆಲ ಪಾರಿವಾಳಗಳು ಆಹಾರ ಹುಡುಕಿ ಬೆಂಗಳೂರಿನ ಸುತ್ತಲ ಪ್ರದೇಶಕ್ಕೆ ತೆರಳುತ್ತಿವೆ. ಮುಖ್ಯವಾಗಿ ಲಾಲ್‌ ಬಾಗ್‌, ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್ ಸೈನ್ಸ್ ಕೃಷಿ ಮತ್ತು ಬೆಂಗಳೂರು ವಿವಿ ಕಡೆಗೆ ವಲಸೆ ಹೋಗುತ್ತಿವೆ ಎಂದು ಕಬ್ಬನ್‌ ಉದ್ಯಾನ ನಡಿಗೆದಾರರ ಸಂಘದ ಅಧ್ಯಕ್ಷ ಡಾ.ಎಸ್‌. ಉಮೇಶ್‌ ತಿಳಿಸಿದ್ದಾರೆ.

ವಿಧಾನಸೌಧ ಮತ್ತು ಹೈಕೋರ್ಟ್‌ ಆವರಣದಲ್ಲಿ ವಾಸವಿದ್ದ ಪಾರಿವಾಳಗಳು ಆಹಾರ ಹುಡುಕಿ ಲಾಲ್‌ ಬಾಗ್‌ ಕಡೆಯೂ ಬರುತ್ತಿವೆ. ಲಾಲ್‌ ಬಾಗ್‌ ನಲ್ಲಿ ನೂರಾರು ಪ್ರಭೇದಗಳ ಹಣ್ಣಿನ ಮರುಗಳು ಇವೆ. ಹಾಗೇ ನೀರಿನ ವ್ಯವಸ್ಥೆಯೂ ಇದೆ. ತಜ್ಞರ ಮಾಹಿತಿ ಪ್ರಕಾರ ಪಾರಿವಾಳಗಳು ಹೆಚ್ಚಾಗಿ ವಲಸೆ ಹೋಗಿಲ್ಲ. ಬೆಂಗಳೂರು ಸುತ್ತಲಿನ ಪ್ರದೇಶದಲ್ಲಿ ಆಹಾರ ಹುಡುಕುತ್ತಿವೆ. – ಚಂದ್ರಶೇಖರ್‌, ತೋಟಗಾರಿಕೆ ಇಲಾಖೆಯ ಲಾಲ್‌ ಬಾಗ್‌ ಉಪ ನಿರ್ದೇಶಕ

ಲಾಕ್‌ ಡೌನ್‌ ಹಿನ್ನೆಲೆ ವಿಧಾನಸೌಧ ಮತ್ತು ಹೈಕೋರ್ಟ್‌ ಸುತ್ತಲು ವಾಸಿಸುತ್ತಿದ್ದ ಪಾರಿವಾಳಗಳಿಗೆ ಆಹಾರದ ಕೊರತೆ ಎದುರಾಗಿದೆ. ಆದ್ದರಿಂದ ಪಕ್ಷಿಗಳು ವಲಸೆ ಹೋಗುತ್ತಿವೆ. ಜನರು ತಮ್ನ ಮನೆ ಮೇಲೆ ಪಕ್ಷಿಗಳಿಗಾಗಿ ನೀರು, ಕಾಳು ಹಾಕಿದರೆ ಪಕ್ಷಿಗಳ ವಲಸೆ ತಡೆಯಬಹುದು -ರೇಖಾ ಸತೀಶ್‌, ನೃತ್ಯಾಂಕುರ ಸಂಸ್ಥೆಯ ಸಂಸ್ಥಾಪಕಿ

Advertisement

Udayavani is now on Telegram. Click here to join our channel and stay updated with the latest news.

Next