ಧಾರವಾಡ: ನಗರದ ವಿವಿಧ ಬಡಾವಣೆಯ ಸಾರ್ವಜನಿಕ ಉದ್ಯಾನಗಳಲ್ಲಿ ಹಕ್ಕಿಗಳನ್ನು ಹೊಡೆದು ತಿನ್ನುವ ಸಾಂಪ್ರದಾಯಕ ಬುಡಕಟ್ಟು ಸಮುದಾಯದ ಯುವಕರ ತಂಡಗಳು ಗುಲೇಲ್ ಅಥವಾ ಕ್ಯಾಟಿ ಬಳಸಿ ನೂರಾರು ಹಕ್ಕಿಗಳ ಜೀವ ತೆಗೆಯುವ ಕೆಲಸ ಮಾಡುತ್ತಿವೆ ಎಂದು ಅವಳಿ ನಗರದ ಪಕ್ಷಿಪ್ರಿಯರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
20ರಿಂದ 25 ವರ್ಷದ ಒಳಗಿನ ಇಪ್ಪತ್ತಕ್ಕೂ ಹೆಚ್ಚು ಯುವಕರು ನಾಲ್ಕಾರು ತಂಡಗಳನ್ನು ಕಟ್ಟಿಕೊಂಡು, ಹಾಡುಹಗಲೇ
ಕಾರ್ಯಾಚರಣೆಗಳಿದು, ಗಿಡಗಳ ಮೇಲಿನ ಬೆಳವ, ಪಾರಿವಾಳ, ಗೊರವಂಕ, ಕೋಗಿಲೆ, ಬುಲ್‌ಬುಲ್, ಕೆರೆಗಳ ಆವಾರದ ನೀಲಿನಾಮಗೋಳಿ, ಬಿಳಿ ನಾಮಗೋಳಿ, ಗುಳಮುಳಕ ಇತ್ಯಾದಿ ಹಕ್ಕಿಗಳನ್ನು ಗುಲೇಲ್ ಅಥವಾ ಕ್ಯಾಟಿ ಬಳಸಿ ಹೊಡೆದುರುಳಿಸಿ, ಅರೆಜೀವಗೊಳಿಸಿ ತಿನ್ನಲು ಒಯ್ಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ನ. 28ರಂದು ಸರೋವರನಗರದ ಕೆಎಚ್‌ಬಿ ಕಾಲೋನಿಯ ಸಾರ್ವಜನಿಕ ಉದ್ಯಾನದಲ್ಲಿ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದ ನಾಲ್ವರ ಪೈಕಿ ಇಬ್ಬರು ಯುವಕರು ಪಾರ್ಶ್ವವಾಯು ಪೀಡಿತರಿಗೆ ಉಪಚಾರಕ್ಕೆಂದು ಹಕ್ಕಿಗಳ ರಕ್ತ ಬೇಕಿತ್ತು. ಗಾಂವಟಿ ವೈದ್ಯರು ಹೇಳಿದ್ದಕ್ಕೆ ಒಯ್ಯುತ್ತಿದ್ದೇವೆ ಎಂದು ಹೇಳಿದ್ದಾರೆ. ಆದರೆ ಅವರ ಕೈಯಲ್ಲಿದ್ದ ಚೀಲವೊಂದನ್ನು ಕಸಿದು ನೋಡಿದಾಗ 20ಕ್ಕೂ ಹೆಚ್ಚು ಹಕ್ಕಿಗಳನ್ನು ಹೊಡೆದುರುಳಿಸಿ ತುಂಬಿಸಿದ್ದು ಗಮನಕ್ಕೆ ಬಂದಿದೆ. 15ಕ್ಕೂ ಹೆಚ್ಚು ಹಕ್ಕಿಗಳು ಆಗಲೇ ಕೊನೆಯುಸಿರು ಎಳೆದಿದ್ದರೆ, ನಾಲ್ಕು ಹಕ್ಕಿಗಳ ಗೋಣು, ರೆಕ್ಕೆ ಮತ್ತು ಕಾಲು ಮುರಿಯಲಾಗಿತ್ತು. ಅರೆಜೀವವಾಗಿದ್ದವು. ನಾಲ್ಕು ದಿನಗಳ ಉಪಚಾರದ ಬಳಿಕ, ಒಂದು ಹೆಣ್ಣು ಕೋಗಿಲೆ ಚೇತರಿಸಿಕೊಂಡು ಹಾರಿದ್ದು, ಗಂಡು ಕೋಗಿಲೆ ಪೂರ್ಣ ಗುಣಮುಖವಾಗಿಲ್ಲ.
ಇದನ್ನೂ ಓದಿ:ಐಎಂಎ ವಂಚನೆ ಪ್ರಕರಣ: ಮಾಜಿ ಸಚಿವ ರೋಶನ್ ಬೇಗ್ ಗೆ ಜಾಮೀನು ಮಂಜೂರು
ಈ ಕುರಿತು ಸೂಕ್ತ ಕ್ರಮ ಜರುಗಿಸುವಂತೆ ನ. 30ರಂದು ವಲಯ ಅರಣ್ಯಾಧಿಕಾರಿಗೆ ಸ್ಥಳೀಯರು ದೂರು ನೀಡಿದ್ದಾರೆ. ಅರಣ್ಯ ರಕ್ಷಕರನ್ನು ಬೀಟ್‌ಗೆ ನಿಯೋಜಿಸುವಂತೆ, ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ನಗರದ ಸಿಬಿಟಿ, ಅಕ್ಕಿಪೇಟೆಯಲ್ಲಿ ಮಾರಾಟವಾಗುವ ಹತ್ತಾರು ನಮೂನೆ ಗುಲೇಲ್ ಮತ್ತು ಕ್ಯಾಟಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಪಕ್ಷಿಪ್ರಿಯರು ಒತ್ತಾಯಿಸಿದ್ದಾರೆ.