Advertisement

ಬಾನಾಡಿಗಳ ಕಲರವ

12:01 PM Mar 18, 2020 | Suhan S |

ಬೀಳಗಿ: ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಆವೃತಗೊಳ್ಳುವ ತಾಲೂಕಿನ ಅನಗವಾಡಿ ಬ್ರಿಡ್ಜ್, ಹೆರಕಲ್‌ ಬ್ರಿಡ್ಜ್ ನಿಂದ ಹಿಡಿದು ಐತಿಹಾಸಿಕ ಪ್ರವಾಸಿ ತಾಣ ಚಿಕ್ಕಸಂಗಮದವರೆಗಿನ ಪ್ರಕೃತಿ ಸೌಂದರ್ಯದಿಂದ ಬೀಗುತ್ತಿರುವ ವಿಶಾಲ ಪ್ರದೇಶಕ್ಕೆ ಚಳಿಗಾಲ, ಬೇಸಿಗೆ ಕಾಲಕ್ಕೆ ಲಗ್ಗೆ ಇಡುವ ದೇಶ-ವಿದೇಶಗಳ ವಿವಿಧ ಜಾತಿಯ ಸಾವಿರಾರು ಪಕ್ಷಿ ಸಂಕುಲಗಳ ಸಂರಕ್ಷಣೆ ನಿಟ್ಟಿನಲ್ಲಿ ಸರ್ಕಾರ ಈ ಸ್ಥಳದಲ್ಲಿ ಪಕ್ಷಿಧಾಮ ನಿರ್ಮಿಸುವ ಅವಶ್ಯಕತೆಯಿದೆ.

Advertisement

ಆಲಮಟ್ಟಿ ಹಿನ್ನೀರಿನ ವಿಸ್ತಾರವಾದ ಜಾಗದಲ್ಲಿಯೇ ಹೆಚ್ಚು ಪ್ರದೇಶ ಬೀಳಗಿ ತಾಲೂಕಿನದ್ದಾಗಿರುವುದು ಗಮನಾರ್ಹ. ಮಂಗೋಲಿಯಾ, ಥೈಲ್ಯಾಂಡ್‌, ಸೈಬೀರಿಯಾ, ಆಸ್ಟ್ರೇಲಿಯಾ, ಗುಜರಾತ್‌, ಅಸ್ಸಾಂ ಸೇರಿದಂತೆ ದೇಶ-ವಿದೇಶಗಳ ವಿವಿಧ ಭಾಗಗಳಿಂದ ಸುಮಾರು 60ಕ್ಕೂ ಹೆಚ್ಚು ವಿವಿಧ ಜಾತಿಯ ಸಾವಿರಾರು ಪಕ್ಷಿಗಳು ವಲಸೆ ಬರುತ್ತಿರುವುದು ಇಲ್ಲಿನ ಪ್ರಕೃತಿ ಸೌಂದರ್ಯದ ಮೆರಗು ಹೆಚ್ಚಿಸಿದೆ. ಹೆಚ್ಚು ಕಪ್ಪು ಮಣ್ಣು ಪ್ರದೇಶ ಇದಾಗಿರುವುದರಿಂದ ಇಲ್ಲಿ ಸಿಗುವ ವಿಫುಲ ಆಹಾರಕ್ಕಾಗಿ ಹಾಗೂ ಸಂತಾನೋತ್ಪತ್ತಿಗಾಗಿ ಪಕ್ಷಿಗಳು ವಲಸೆ ಬರುತ್ತವೆ.

ಪಕ್ಷಿಧಾಮ ಅಗತ್ಯ: ಕೋಟಿ, ಕೋಟಿ ವೆಚ್ಚ ಮಾಡಿ ಎಲ್ಲಿ ಬೇಕೆಂದಲ್ಲಿ ಪಕ್ಷಿಧಾಮ ನಿರ್ಮಿಸಿದರೆ ಪಕ್ಷಿಗಳು ವಲಸೆ ಬರಲಾರವು. ಆದರೆ, ಪಕ್ಷಿ ಸಂಕುಲ ತಾವು ಗುರುತಿಸಿ ಆಯ್ಕೆ ಮಾಡಿಕೊಂಡು ವಲಸೆ ಬರುವ ಸ್ಥಳದಲ್ಲಿ ಪಕ್ಷಿಧಾಮ ಕಟ್ಟಿ ಬೆಳೆಸಿದರೆ ಬಾನಾಡಿಗಳ ವಂಶಾಭಿವೃದ್ಧಿಗೆ ಅನುಕೂಲವಾಗುತ್ತದೆ. ಬೀಳಗಿ ತಾಲೂಕು ಪಕ್ಷಿಗಳ ವಲಸೆಗೆ ಮುಕ್ತವಾಗಿ ತೆರೆದುಕೊಂಡಿರುವ ಪರಿಣಾಮ, ಸರ್ಕಾರ ಈ ಜಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪಕ್ಷಿಧಾಮ ನಿರ್ಮಿಸುವುದು ಅಗತ್ಯವಾಗಿದೆ. ಸಕಲ ಜೀವಿಗಳಿಗೂ ಲೇಸನ್ನೇ ಬಯಸಿದ ಬಸವಣ್ಣನನಾಡಿನಲ್ಲಿ ಪಕ್ಷಿಧಾಮ ನಿರ್ಮಿಸಿದ್ದೇ ಆದರೆ ಪ್ರವಾಸೋದ್ಯಮಕ್ಕೆ ಬೀಳಗಿ ತಾಲೂಕು ಬೆಳಕು ಚೆಲ್ಲುವುದರಲ್ಲಿ ಸಂದೇಹವೇ ಇಲ್ಲ. ತಾಲೂಕಿನ ಚಿಕ್ಕಸಂಗಮದ ಬಳಿಯಿರುವ ನಡುಗಡ್ಡೆಯ ವಿಶಾಲ ಪ್ರದೇಶದಲ್ಲಿ ಪಕ್ಷಿಧಾಮ ನಿರ್ಮಿಸುವ ಕನಸು ಬಿತ್ತಿ ದಶಕಗಳೇ ಗತಿಸಿದೆ. ಅದರ ಸಾಕಾರಕ್ಕೆ ಜನತೆ ಕಾತರಿಸುತ್ತಿದ್ದಾರೆ.

ನೀರು ಸಂರಕ್ಷಣೆ ಅವಶ್ಯ: ಘಟಪ್ರಭಾ ನದಿ ಬೇಸಿಗೆಯಲ್ಲಿ ಒಣಗಿ ಅಲ್ಲಿನ ಜಲಚರ ಪ್ರಾಣಿಗಳು ಸತ್ತಿವೆ. ಪ್ರಾಣಿ-ಪಕ್ಷಿಗಳು ಹನಿ ನೀರಿಗಾಗಿ ಪರಿತಪಿಸಿವೆ. ಕಾರಣ, ಬೇಸಿಗೆ ಸಂದರ್ಭ ಕನಿಷ್ಠ ಮಟ್ಟದ ನೀರನ್ನಾದರೂ ಸಂರಕ್ಷಿಸುವ ಕೆಲಸ ನಡೆಯಬೇಕಿದೆ ಎನ್ನುವುದು ಪರಿಸರ ಪ್ರೇಮಿಗಳ ಒತ್ತಾಸೆ.

ಹಕ್ಕಿಗಳ ಮ್ಯಾಪ್‌ಲ್ಲಿ ಬೀಳಗಿ: ರೈಲು, ಬಸ್‌, ವಿಮಾನಗಳಿಗೆ ಮನುಷ್ಯ ಮಾರ್ಗ ಹಾಕುತ್ತಾನೆ. ಆದರಂತೆ ಪಕ್ಷಿಗಳೂ ಕೂಡ ಜಗತ್ತಿನಾದ್ಯಂತ ನಿಖರ ವಾಯುಮಾರ್ಗ ನಿರ್ಮಿಸಿರುತ್ತವೆ. ಹಕ್ಕಿಗಳ ಈ ನಿಖರ ಮ್ಯಾಪ್‌ನಲ್ಲಿ ಬೀಳಗಿಯನ್ನು ಅವುಗಳು ಗುರುತಿಸಿರುವುದು ಈ ನೆಲದ ಭಾಗ್ಯ.

Advertisement

ಆಹಾರ ಅರಸಿ ದೇಶ-ವಿದೇಶಗಳಿಂದ ಹಲವಾರು ಜಾತಿಯ ಸಾವಿರಾರು ಪಕ್ಷಿಗಳು ವಲಸೆ ಬರುತ್ತವೆ. ಈಗಾಗಲೇ ತಜ್ಞರು ವಲಸೆ ಪಕ್ಷಿಗಳ ಸಮೀಕ್ಷೆ ಕೂಡ ನಡೆಸಿದ್ದಾರೆ. ಪಕ್ಷಿಧಾಮ ಮಾಡುವ ಮೂಲಕ ಅವುಗಳ ಸಂರಕ್ಷಣೆ ಮಾಡುವುದು ನಾಗರಿಕ ಸಮಾಜದ ಹೊಣೆ. –ಎಚ್‌.ಬಿ. ಡೋಣಿ, ವಲಯ ಅರಣ್ಯಾಧಿಕಾರಿಗಳು, ಬೀಳಗಿ

 

-ರವೀಂದ್ರ ಕಣವಿ

Advertisement

Udayavani is now on Telegram. Click here to join our channel and stay updated with the latest news.

Next