Advertisement

ಅತ್ತಿವೇರಿಯಲ್ಲೀಗ ಅತಿಥಿಗಳ ಕಲರವ

12:02 PM Dec 09, 2019 | Suhan S |

ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಅತ್ತಿವೇರಿ ಪಕ್ಷಿಧಾಮಕ್ಕೆ ದೇಶವಿದೇಶಗಳಿಂದ ಅತಿಥಿಗಳು(ಪಕ್ಷಿಗಳು) ಆಗಮಿಸಿದ್ದು, ಕಲರವ ಹೆಚ್ಚಿದೆ. ಪಕ್ಷಿ ಪ್ರಿಯರಿಗೆ ಸಂತಸವನ್ನುಂಟು ಮಾಡಿದೆ.

Advertisement

ಹುನಗುಂದ ಗ್ರಾಪಂ ವ್ಯಾಪ್ತಿಯಲ್ಲಿರುವ ಅತ್ತಿವೇರಿ ಪಕ್ಷಿಧಾಮಕ್ಕೆ ಅಕ್ಟೋಬರ್‌ ತಿಂಗಳಿನಲ್ಲಿ ವಲಸೆ ಬರುವ ವಿವಿಧ ಬಗೆಯ ಪಕ್ಷಿಗಳು ಪಕ್ಷಿಧಾಮ ಬಳಿಯಿರುವ ಜಲಾಶಯದ ನಡುಗಡ್ಡೆ ಹಾಗೂ ಸುತ್ತಲಿನ ದಟ್ಟ ಅರಣ್ಯದ ಮರಗಳಲ್ಲಿ ಗೂಡು ಕಟ್ಟಿಕೊಂಡು ವಾಸಿಸುತ್ತವೆ. ಇಲ್ಲಿಯೇ ವಂಶಾಭಿವೃದ್ಧಿ ಮಾಡುತ್ತವೆ. ನಂತರ ಬೇಸಿಗೆ ವೇಳೆ (ಮಾರ್ಚ್‌ತಿಂಗಳು)ತಮ್ಮ ತಮ್ಮ ಮರಿಗಳೊಂದಿಗೆ ತಮ್ಮ ತಮ್ಮ ದೇಶಗಳಿಗೆ ಮರಳಿ ಹೋಗುತ್ತವೆ. ಚಳಿಗಾಲ ಸಮಯದಲ್ಲಿ ಈ ಹಕ್ಕಿಗಳ ಸಂಭ್ರಮ ನೋಡುವುದೇ ಆನಂದ.

ಈ ಬಾರಿಯೂ ನೂರಾರು ಬಗೆಯ ಪಕ್ಷಿಗಳು ಅತ್ತಿವೇರಿಗೆ ಆಗಮಿಸಿದ್ದು, ಇವುಗಳನ್ನು ನೋಡಲು ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳ ಪಕ್ಷಿ ಪ್ರಿಯರು ಪಕ್ಷಿಧಾಮದತ್ತ ಆಗಮಿಸುತ್ತಿದ್ದಾರೆ. ಈ ಬಾರಿ ಈ ಭಾಗದಲ್ಲಿ ಸಾಕಷ್ಟು ಪ್ರಮಾಣ ಮಳೆಯಾದ ಕಾರಣ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಿರುವುದರಿಂದ ಇವುಗಳ ಸಂಭ್ರಮ ಇನ್ನಷ್ಟು ಹೆಚ್ಚಲು ಕಾರಣವಾಗಿದೆ. ನಡುಗಡ್ಡೆಗಳಲ್ಲಿರುವ ಗಿಡಗಂಟಿಗಳಲ್ಲಿ ಕಂಡು ಬರುವ ನೂರಾರು ಸಂಖ್ಯೆಯ ಪಕ್ಷಿಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ಕಳೆದ ವರ್ಷ ಗಮನಿಸಿದರೆ ಈ ವರ್ಷ ಹೆಚ್ಚಿನ ಸಂಖ್ಯೆಯ ಪಕ್ಷಿಗಳು ಆಗಮಿಸಿವೆ.

ಸೂರ್ಯ ಉದಯಿಸುವ ಮುನ್ನ ಹಾಗೂ ಸೂರ್ಯಾಸ್ತ ವೇಳೆ ಹೆಚ್ಚು ಕಂಡು ಬರುವ ಈ ಹಕ್ಕಿಗಳ ಚಿಲಿಪಿಲಿ ಸದ್ದು, ಹಾರಾಟ, ಕೂಗಾಟ ಜೋರಾಗಿರುತ್ತದೆ. ಹೀಗಾಗಿ ಬೆಳ್ಳಂಬೆಳಿಗ್ಗೆ ಆಗಮಿಸುವ ಜನರು ಇಲ್ಲಿಯೇ ಸಂಜೆಯವರೆಗೂ ಇದ್ದು, ಮಧ್ಯಾಹ್ನ ಇಲ್ಲಿಯೇ ತಂದ ಊಟ ಮಾಡಿಕೊಂಡು ಸಂಜೆ ಇವುಗಳ ಚಿಲಿಪಿಲಿ ವೀಕ್ಷಿಸಿಯೇ ಹೋಗುತ್ತಾರೆ. ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗಿದೆ.

 

Advertisement

-ಚಂದ್ರಶೇಖರಯ್ಯ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next