“ಕುಹೂ ಕುಹೂ’ ಎಂದು ಇಂಪಾಗಿ ಮೈಮರೆತು ಹಾಡುವ ಕೋಗಿಲೆ, “ಕ್ಕೋ.. ಕ್ಕೋ.. ಕ್ಕೋ..’ ಎಂದು ಕೂಗಿ ಮುಂಜಾನೆ ಸುಖ ನಿದ್ರೆಯಿಂದ ಎಬ್ಬಿಸುವ ಮನೆ ಯಂಗಳದಲ್ಲಿನ ಕೋಳಿ, ಕಿಚಿಪಿಚಿ ಯೆನ್ನುತ್ತಾ ಚಿಲಿಪಿಲಿಗುಟ್ಟುವ ಹಕ್ಕಿಗಳ ಗುಂಪು ಒಂದೊಂದು ಹಕ್ಕಿಯ ಸ್ವರವೂ ಒಂದೊಂದು ತರ ಅದರದೇ ತಾಳ, ಅದರದೇ ಧಾಟಿ ಎಲ್ಲವೂ ಭಿನ್ನ, ವಿಭಿನ್ನ ಮನಕೆ ಮುದ, ಕಿವಿಗೆ ಇಂಪು, ಕಣ್ಗೆ ತಂಪು… ಹೀಗಿರುವ ಹಕ್ಕಿಯ ಉಲಿಯು ಕಿವಿಗೆ ಬಿದ್ದಾಕ್ಷಣ ಅದು ಯಾವ ಹಕ್ಕಿಯ ಕೂಗು ಎಂದು ಗುರುತಿಸುವಷ್ಟು ಹಕ್ಕಿಗಳು ನಮ್ಮ ಬದುಕಿನ ಭಾಗವಾಗಿದ್ದವು ಎಂದರೂ ಸರಿಯೇ. ಕೆಲವೊಂದು ಹಕ್ಕಿಯ ಕೂಗು ನಮ್ಮ ಬದುಕಿನ ಅವಿನಾ ಭಾವ ಭಾಗ ಎನ್ನುವಂತೆ ಶಕುನಗಳನ್ನು ಹೇಳುವುದಕ್ಕೂ ಜತೆಯಾಗಿವೆ. ಅವುಗಳ ಉಲಿಯುವಿಕೆ ಕೇಳಿದಾಕ್ಷಣ ಇನ್ನೇನೋ ಅಪಶಕುನ ಕಾದಿದೆಯೋ ಎಂಬಂತೆ ಕಿವಿ ಮುಚ್ಚಿಕೊಳ್ಳುವಷ್ಟು ನಂಬಿಕೆಯು ಇಂದಿಗೂ ನಮ್ಮಲ್ಲಿದೆ.
ಅನಾದಿ ಕಾಲದಿಂದಲೂ ಪಕ್ಷಿಗಳ ಹಾರುವ ವಿಶಿಷ್ಟ ಸಾಮರ್ಥ್ಯವು ಮಾನವನ ಕುತೂಹಲಕ್ಕೆ ಕಾರಣವಾಗಿದೆ. ವಿವಿಧ ಹಕ್ಕಿ ಗಳಿಗೆ ನಮ್ಮ ಪುರಾಣ ಕಾವ್ಯಗಳು ಹಾಗೂ ಜಾನಪದ ಸಾಹಿತ್ಯದಲ್ಲಿ ಅನುಪಮ ಸ್ಥಾನ ವನ್ನು ಕೂಡ ನೀಡಲಾಗಿದೆ. ಇದರೊಂದಿಗೆ, ನಮ್ಮ ಮನಸ್ಸನ್ನು ಸೆಳೆವ ಇನ್ನೊಂದು ವಿಸ್ಮಯವೆಂದರೆ ಹಕ್ಕಿಗಳ ಹಾಡುವ ಸಾಮರ್ಥ್ಯ.
ಎಲ್ಲ ಹಕ್ಕಿಗಳೂ ಹಾಡುವುದಿಲ್ಲ. ಅಂತೆಯೇ, ಹಕ್ಕಿಗಳ ಕಂಠದಿಂದ ಹೊಮ್ಮವ ಎಲ್ಲ ಧ್ವನಿಗಳೂ ಹಾಡುಗಳಲ್ಲ. ಈ ಭೂಮಿಯಲ್ಲಿ ಕಾಣ ಸಿಗುವ ಸುಮಾರು ಹತ್ತು ಸಾವಿರ ಪ್ರಭೇದದ ಹಕ್ಕಿ ಗಳು ಉಲಿಯುತ್ತವೆ, ಚಿಲಿಪಿಲಿ ಗುಟ್ಟು ತ್ತವೆ, ಕರೆಯುತ್ತವೆ, ಕೂಗುತ್ತವೆ. ಆದರೆ ಅವು ಗಳ ಅರ್ಧದಷ್ಟು ಪ್ರಭೇದಗಳಲ್ಲಿ ಕೇವಲ ಗಂಡುಹಕ್ಕಿಗಳು ಮಾತ್ರ ಹಾಡುತ್ತವೆ.
ಹಕ್ಕಿಯ ಕಲರವ, ಚಿಲಿಪಿಲಿಗಳನ್ನು ಹಕ್ಕಿಗಳ ಕರೆಗಳು ಎನ್ನಬಹುದು. ತಮ್ಮ ಸ್ವರಕ್ಷಣೆ ಮತ್ತು ಜೀವನದ ಆವಶ್ಯಕ ಉದ್ದೇಶದಿಂದ ಎಲ್ಲ ಹಕ್ಕಿಗಳೂ ಕರೆಯನ್ನು ಬಳಸಿಕೊಳ್ಳುತ್ತವೆ. ತಮ್ಮ ಗುಂಪಿನ ಇತರ ಹಕ್ಕಿಗಳನ್ನು ಗುರುತಿಸಲು, ಆಹಾರ ಅರಸಿ ಹೋದ ಸಂದರ್ಭದಲ್ಲಿ ತಮ್ಮ ಗುಂಪಿನ ಇತರ ಹಕ್ಕಿಗಳೊಂದಿಗೆ ಸಂಪರ್ಕ ಹೊಂದಲು, ಶತ್ರುಗಳು ಬಂದಾಗ ಎಚ್ಚರಿ ಸಲು, ಎಲ್ಲವೂ ಸಂಜೆಯ ವೇಳೆಯಲ್ಲಿ ಜತೆ ಸೇರಲು ಹೀಗೆ ಹಕ್ಕಿಗಳು ಕಲರವ ವೆಬ್ಬಿಸಿ ಚಿಲಿಪಿಲಿಗುಟ್ಟುತ್ತವೆ. ಅನೇಕ ಪಕ್ಷಿಗಳು ತಮ್ಮ ಕರೆಗಳನ್ನು ಇತರ ಪಕ್ಷಿಗಳಿಗೆ ಎಚ್ಚರಿಕೆಯ ಕರೆಯಾಗಿ, ಒಂದು ನಿರ್ದಿಷ್ಟ ಪ್ರದೇಶವು ತಮ್ಮದು ಎಂದು ಘೋಷಿಸಿ ಎಚ್ಚರಿಕೆ ನೀಡಲು ಬಳಸುತ್ತವೆ. ಒಟ್ಟಿನಲ್ಲಿ ಇದು ತಮ್ಮ ಪ್ರಭೇದಗಳನ್ನು ಗುರುತಿಸಲು ಸಹಕಾರಿ.
ಹಕ್ಕಿಗಳು ಅನೇಕ ಕಾರಣಗಳಿಗಾಗಿ ಹಾಡು ತ್ತವೆ. ಹಕ್ಕಿಗಳು ಪರಸ್ಪರ ಸಂವಹನ ವನ್ನು ನಡೆಸಲು, ಹೆಣ್ಣು ಹಕ್ಕಿಗಳ ಮನಸೆಳೆದು, ಪ್ರಣಯಕ್ಕೆ ತಮ್ಮ ಸಂಗಾತಿ ಗಳನ್ನು ಆಕರ್ಷಿಸಿ ಒಲಿಸಿಕೊಳ್ಳಲು, ತಮ್ಮ ತಮ್ಮ ಪ್ರದೇಶವನ್ನು ಗುರುತಿಸಲು ಮತ್ತು ಮುಂಜಾನೆ ಸೂರ್ಯೋದಯದ ಸುಂದರ ಕ್ಷಣದಲ್ಲಿ ದಿನವನ್ನು ಸ್ವಾಗತಿಸಲು ಹಾಡುತ್ತವೆ. ಹಕ್ಕಿಗಳು ಹಾಡುವುದು, ಉಲಿಯು ವುದು, ಚಿಲಿಪಿಲಿಗುಟ್ಟುವು ದನ್ನು ಆಲಿಸುವುದೆಂದರೆ ಮಧುರವಾದ ಕ್ಷಣಗಳು.
ಹೆಚ್ಚಿನ ಪಕ್ಷಿ ಪ್ರಭೇದಗಳಲ್ಲಿ, ಗಂಡು ಪಕ್ಷಿಯು ಉತ್ತಮ ಹಾಡುಗಾರನಾಗಿದ್ದು, ಹೆಣ್ಣು ಪಕ್ಷಿಗಳನ್ನು ಆಕರ್ಷಿಸಲು ಬಳಸು ತ್ತವೆ. ಪ್ರತಿಯೊಂದು ಹಕ್ಕಿಯೂ ತನ್ನದೇ ಆದ ವಿಶೇಷ ಸಂಯೋಜನೆಯ ಮೂಲಕ ಹಾಡನ್ನು ಇನ್ನಷ್ಟು ವಿಶಿಷ್ಟಗೊಳಿಸುತ್ತದೆ.ಹಾಡುವ ಸಮಯ ಅಂದರೆ ಬೆಳಗಿನ ಜಾವ ಮತ್ತು ಮುಸ್ಸಂಜೆಯ ವೇಳೆಯಲ್ಲಿ ಹಾಡುವ ಸಂದರ್ಭಗಳಲ್ಲಿ ಹಕ್ಕಿಗಳ ಧ್ವನಿಗಳು/ಉಲಿಯುವಿಕೆಗಳು ಬದ ಲಾಗು ತ್ತವೆ. ಬೆಳಗ್ಗೆ ಹಕ್ಕಿಗಳ ಸ್ವರ ತುಂಬಾ ಮಧುರವಾಗಿದ್ದು, ಬಹಳ ದೂರದ ವರೆಗೂ ಕೇಳಿಸುತ್ತವೆ.
ಮಕ್ಕಳು ತೊದಲುವಿಕೆಯಿಂದ ಆರಂಭಿಸಿ ತಮ್ಮ ಭಾಷಾಕೋಶವನ್ನು ಹಿಗ್ಗಿಸಿ ಕೊಂಡು ಮಾತನ್ನು ಕಲಿಯುವಂತೆ ಹಕ್ಕಿಗಳು ಕೂಡ ಒಂದೊಂದೇ ಸ್ವರವನ್ನು ಗ್ರಹಿಸುತ್ತ, ಪ್ರಯತ್ನ ಮತ್ತು ಪರಿಶ್ರಮದ ಮೂಲಕ ಹಾಡುವುದನ್ನು ಕಲಿಯುತ್ತವೆ. ಕೋಗಿಲೆ, ಗುಬ್ಬಚ್ಚಿ, ಬುಲ್ ಬುಲ…, ಸೂರಕ್ಕಿ ಮೊದಲಾದವುಗಳು ಮನಸೆಳೆವ ಹಾಡುಗಾರ ಹಕ್ಕಿಗಳು. ಆದರೆ ಅದೇಕೋ ದಿನಗಳು ಕಳೆದಂತೆ ಕಾಡು ಮರೆಯಾಗಿ, ನಾಡು ಮೆರೆವ ಈ ಕಾಂಕ್ರೀಟ್ ಕಾಡಿನಲ್ಲಿ ಹಕ್ಕಿಗಳು ಬೆರಳೆಣಿಕೆ ಯಷ್ಟೇ ಉಳಿದುಕೊಂಡಿವೆ. ಅವುಗಳ ಉಲಿಯುವಿಕೆಯಾಗಲೀ, ಕರೆಯಾಗಲೀ, ಕೂಗಾಗಲೀ ಮೆಲ್ಲನೇ ನಮ್ಮ ಕಿವಿಗಳಿಗೆ ಕೇಳಿಸದೇ ಅರಿವಾಗದಂತೆ ಕಳೆದು ಹೋಗುತ್ತಿವೆ. ಆದರೆ ಹಾಗಾಗದಿರಲಿ ಮುಂಜಾನೆ ಹಕ್ಕಿಗಳ ಚಿಲಿಪಿಲಿ ನಾದ ನಮ್ಮ ಮನಕೆ ತಂಪೆರೆಯುತಿರಲಿ.
ಡಾ| ಮೈತ್ರಿ ಭಟ್, ವಿಟ್ಲ