Advertisement

ಪಕ್ಷಿಗಳ ವಾಸಕ್ಕೆ ಬೀದರ ಜಿಲ್ಲೆ ಸೂಕ್ತ ಪ್ರದೇಶ: ಅರಳಿ

09:59 AM Feb 10, 2019 | |

ಬೀದರ: ಬೀದರ ಜಿಲ್ಲೆ ಪಕ್ಷಿಗಳ ವಾಸಕ್ಕೆ ಅತ್ಯಂತ ಸೂಕ್ತ ಪ್ರದೇಶವಾಗಿದೆ. ಬೇರೆ ಬೇರೆ ದೇಶಗಳಿಂದ ಸಾಕಷ್ಟು ಪಕ್ಷಿಗಳು ಇಲ್ಲಿಗೆ ಬಂದು ಹೋಗುತ್ತವೆ. ಅವುಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಹೇಳಿದರು.

Advertisement

ಹಳ್ಳದಕೇರಿಯ ವೃಕ್ಷೋದ್ಯಾನದಲ್ಲಿ ಶನಿವಾರ ಅರಣ್ಯ ಇಲಾಖೆ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ, ಅರಣ್ಯ ವಸತಿ ಮತ್ತು ವಿಹಾರಧಾಮ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ‘ಕರ್ನಾಟಕ ಹಕ್ಕಿ ಹಬ್ಬ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ ವಿವಿಧೆಡೆ ವಿವಿಧ ಬಗೆಯ ಪಕ್ಷಿಗಳು ಕಂಡುಬರುತ್ತವೆ. ಹೆಚ್ಚಾಗಿ ನವಿಲುಗಳು ಇದ್ದು, ಜಿಲ್ಲೆಯಲ್ಲಿ ನವಿಲುಧಾಮವನ್ನು ಸ್ಥಾಪಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿರುವ ಪಕ್ಷಿಗಳ ರಕ್ಷಣೆಗೆ ಪ್ರತಿಯೊಬ್ಬರು ಸದಾ ಸಿದ್ಧರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ ಅಧ್ಯಕ್ಷೆ ಭಾರತಬಾಯಿ ಶೇರಿಕಾರ್‌, ಅಳಿವಿನಂಚಿನತ್ತ ಸಾಗುತ್ತಿರುವ ಹಕ್ಕಿಗಳ ಉಳಿವಿಗಾಗಿ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಿದೆ ಎಂದರು.

ನಗರಸಭೆ ಅಧ್ಯಕ್ಷೆ ಶಾಲಿನಿರಾಜು ಚಿಂತಾಮಣಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಲ್ಲಿ ಪಕ್ಷಿಗಳ ಬಗ್ಗೆ ಕುತೂಹಲ ಮೂಡಿಸಿ ಪಕ್ಷಿ ಪ್ರೇಮ ಬೆಳೆಸಲು ಪ್ರಯತ್ನಿಸಬೇಕು ಎಂದರು.

Advertisement

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸಿ.ಜಯರಾಮ್‌, ಕಲಬುರಗಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಗೀತಾಂಜಲಿ ವಿ., ಬೀದರ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಡಿ.ತೋಡುರ್‌ಕರ್‌ ಮಾತನಾಡಿದರು. ಬೀದರ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ.ಗಾಮನಗಟ್ಟಿ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಜನರಲ್‌ ಮ್ಯಾನೇಜರ್‌ ರಮೇಶ, ಅರಣ್ಯ ವಿಹಾರ ವಸತಿ ಸಂಸ್ಥೆಯ ಕಾರ್ತಿಕೇಯನ್‌, ಪಕ್ಷಿ ತಜ್ಞರು, ಪಕ್ಷಿ ಪ್ರೇಮಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next