Advertisement

ಕೇರಳದಲ್ಲಿ ಹಕ್ಕಿಜ್ವರ, ದ.ಕ.ದಲ್ಲಿ ಭೀತಿ ಇಲ್ಲ: ಮುಂಜಾಗ್ರತೆ ಇರಲಿ

10:28 AM Mar 09, 2020 | sudhir |

ಮಂಗಳೂರು: ದೇಶದ ವಿವಿಧೆಡೆ ಕೊರೊನಾ ವೈರಸ್‌ ಪತ್ತೆಯಾಗುತ್ತಿರುವ ಬೆನ್ನಲ್ಲೇ ಈಗ ಕೇರಳದಲ್ಲಿ ಹಕ್ಕಿಜ್ವರ ಕಾಡತೊಡಗಿದೆ. ಆದರೆ ಇದು ಸಾಮಾನ್ಯವಾಗಿ ಹಕ್ಕಿಗಳಿಂದ ಹಕ್ಕಿಗಳಿಗೆ ಹರಡುತ್ತದೆ ಹೊರತು ಮನುಷ್ಯನಿಗೆ ಕಾಡುವುದು ಅಪರೂಪ.

Advertisement

ಕೇರಳದ ಕೋಯಿಕ್ಕೋಡ್‌ನ‌ ಕೋಳಿಫಾರಂ ಮತ್ತು ನರ್ಸರಿಯೊಂದರಲ್ಲಿ ಹಕ್ಕಿಜ್ವರ ಪತ್ತೆಯಾಗಿದೆ. ಇದು ಮನುಷ್ಯರನ್ನು ಬಾಧಿಸುವುದು ಅಪರೂಪ. ಆದರೆ ಹಕ್ಕಿಗಳ ತ್ಯಾಜ್ಯ ಸೋಕದಂತೆ ಜಾಗರೂಕತೆ ವಹಿಸಬೇಕು ಎಂದು ದ.ಕ. ಜಿಲ್ಲಾ ಆರೋಗ್ಯ ಇಲಾಖೆ ಮನವಿ ಮಾಡಿದೆ.

ಹಕ್ಕಿಯ ತ್ಯಾಜ್ಯ ನಮ್ಮ ಸಂಪರ್ಕಕ್ಕೆ ಬಂದರೆ ಅದರಿಂದ ವೈರಾಣು ಮನುಷ್ಯನ ದೇಹಕ್ಕೆ ಹರಡುವ ಸಾಧ್ಯತೆ ಇರುತ್ತದೆ. ಸೋಂಕು ಪೀಡಿತ ಹಕ್ಕಿಗಳ ಮೂಗಿನ ಸ್ರಾವ, ಬಾಯಿ ಅಥವಾ ಕಣ್ಣಿನಿಂದ ಸ್ರವಿಸುವ ದ್ರವದ ಮೂಲಕವೂ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಕೋಳಿ ಫಾರಂನಲ್ಲಿ ಕೆಲಸ ಮಾಡುವವರು, ಕೊಳಚೆ ಪ್ರದೇಶಗಳಲ್ಲಿ ವಾಸಿಸುವವರು, ಹಕ್ಕಿತ್ಯಾಜ್ಯವಿರುವ ಕೆರೆಗಳಲ್ಲಿ ಈಜಾಡುವುದರಿಂದ ಇದು ಬರುವ ಸಾಧ್ಯತೆ ಇದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಇಂಥವುಗಳಿಂದ ದೂರವಿರಬೇಕು.

ಕೋಳಿ ತಿನ್ನಬಹುದು
ಕೋಳಿ ತಿಂದರೆ ಹಕ್ಕಿ ಜ್ವರ ಬರುವುದಿಲ್ಲ. ಆದರೆ ಸೇವನೆಗೆ ಮುನ್ನ ಕೋಳಿಯನ್ನು ಚೆನ್ನಾಗಿ ಬೇಯಿಸಬೇಕು. ತನ್ನಷ್ಟಕ್ಕೆ ಸತ್ತ ಕೋಳಿಗಳನ್ನು ತಿನ್ನದಿರುವುದು ಉತ್ತಮ.

ಲಕ್ಷಣಗಳೇನು ?
ವಿಪರೀತ ಜ್ವರ, ಕೆಮ್ಮು, ತಲೆನೋವು, ಗಂಟಲು ಬೇನೆ, ಭೇದಿ, ಉಸಿರಾಟದ ಸಮಸ್ಯೆ ಇದರ ಲಕ್ಷಣವಾಗಿದೆ. ಮೂರು ದಿನಗಳ ಬಳಿಕ ನೋವು ಮತ್ತು ಜ್ವರ ಜಾಸ್ತಿಯಾಗುತ್ತದೆ. ಇಂತಹ ಲಕ್ಷಣ ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ ಸಲಹೆ, ಚಿಕಿತ್ಸೆ ಪಡೆದುಕೊಳ್ಳಬೇಕು. ಈ ನಡುವೆ ಪ್ರಸ್ತುತ ಸಾಮಾನ್ಯ ಜ್ವರವೂ ಇರುವುದರಿಂದ ಎಲ್ಲ ಜ್ವರ, ತಲೆನೋವನ್ನು ಹಕ್ಕಿಜ್ವರ ಎಂದು ತಿಳಿದುಕೊಳ್ಳಬಾರದು.

Advertisement

ಸಾಂಕ್ರಾಮಿಕ ರೋಗಗಳು ಈಗ ಏಕೆ ಹರಡುತ್ತದೆ ಎಂದು ಹೇಳಲಾಗದು. ವಾತಾ ವರಣದ ಬದಲಾವಣೆಯೂ ಕಾರಣವಾಗು ತ್ತದೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ಇಲ್ಲ. ಕೇರಳದಲ್ಲಿ ಹಕ್ಕಿ ಜ್ವರ ಬಂದಿರುವುದರಿಂದ ನಮ್ಮ ಜಿಲ್ಲೆಯ ಆಸ್ಪತ್ರೆಗಳಲ್ಲಿಯೂ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗುವುದು. ಈಗಾಗಲೇ ಕೊರೊನಾ ವೈರಸ್‌ ಹಬ್ಬದಂತೆ ತಡೆಯುವ ಸಲುವಾಗಿ ದ.ಕ. ಜಿಲ್ಲೆಯಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
-ಡಾ| ನವೀನ್‌ಚಂದ್ರ ಕುಲಾಲ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ

ಕೊರೊನಾ ಮುನ್ನೆಚ್ಚರಿಕೆಗೆ ರಿಂಗ್‌ ಟ್ಯೂನ್‌
ಕೊರೊನಾ ವೈರಸ್‌ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲೆಡೆ ಜಾಗೃತಿ ಕಾರ್ಯಗಳು ನಡೆಯುತ್ತಿವೆ. ಈ ನಡುವೆ ಕೆಲವು ಮೊಬೈಲ್‌ ಕಾಲರ್‌ ಟ್ಯೂನ್‌ನಲ್ಲಿಯೂ ಕೊರೊನಾ ಜಾಗೃತಿಯನ್ನು ಅಳವಡಿಸಲಾಗಿದೆ.
ಮೊದಲು ಕೆಮ್ಮುವುದು, ಬಳಿಕ ಸೋಪ್‌ನಿಂದ ಕೈ ತೊಳೆಯಬೇಕು ಸಹಿತ ಆರೋಗ್ಯ ಜಾಗೃತಿಯ ವಿಚಾರಗಳನ್ನು ಕಾಲರ್‌ ಟ್ಯೂನ್‌ನಲ್ಲಿ ಹೇಳಲಾಗಿದೆ. ಮೊಬೈಲ್‌ ಕಂಪೆನಿಗಳೇ ಈ ಘೋಷವನ್ನು ಕಾಲರ್‌ ಟ್ಯೂನ್‌ನಲ್ಲಿ ಅಳವಡಿಕೆ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next