ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ 13 ವಲಯಗಳಲ್ಲಿಯೂ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಪಕ್ಷಿಗಳ ಗಣತಿ ಕಾರ್ಯಕ್ರಮ ಆರಂಭವಾಯಿತು.
ತಾಲೂಕಿನ ಬಂಡೀಪುರ, ಗುಂಡ್ಲುಪೇಟೆ ಹಾಗೂ ಹೆಡಿಯಾಲ ಉಪಭಾಗಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ 700ಕ್ಕೂ ಹೆಚ್ಚು ಜನರ ಪೈಕಿ ಈ ಹಿಂದೆ ವಿವಿಧ ಗಣತಿ ಕಾರ್ಯಗಳಲ್ಲಿ ಪಾಲ್ಗೊಂಡಿದ್ದ 77 ಸ್ವಯಂಸೇವಕರನ್ನು ಮಾತ್ರ ಅಯ್ಕೆ ಮಾಡಲಾಯಿತು. ಅದರಂತೆ ಹೆಡಿಯಾಲ ಉಪವಿಭಾಗದಲ್ಲಿ 24 ಕಳ್ಳಬೇಟೆ ನಿಗ್ರಹ ಶಿಬಿರಗಳಿರುವುದರಿಂದ ಅಲ್ಲಿಗೆ 48, ಬಂಡೀಪುರಕ್ಕೆ 15 ಹಾಗೂ ಗುಂಡ್ಲುಪೇಟೆಗೆ 14 ಗಣತಿದಾರರನ್ನು ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಮೊದಲನೇ ದಿನವಾದ ಶುಕ್ರವಾರ ಸ್ವಯಂಸೇವಕರಿಗೆ ಗಣತಿ ಸಂದರ್ಭದಲ್ಲಿ ಪರಿಗಣಿಸಬೇಕಾದ ಅಂಶಗಳ ಬಗ್ಗೆ ಸೂಚನೆ ನೀಡಲಾಯಿತು. ಪ್ರತಿ ತಂಡದಲ್ಲಿ ಇಬ್ಬರು ಗಣತಿದಾರರು ಹಾಗೂ ಒಬ್ಬರು ಅರಣ್ಯ ಸಿಬ್ಬಂದಿ ಇದ್ದು ಇವರು ಸಮೀಪದಲ್ಲಿ ಸಿಗುವ ಕಳ್ಳಬೇಟೆ ನಿಗ್ರಹ ಶಿಬಿರದಲ್ಲಿ ಉಳಿದುಕೊಳ್ಳಲಿದ್ದಾರೆ. ಪಕ್ಷಿ ಗಣತಿಯನ್ನು ಶುಕ್ರವಾರ, ಶನಿವಾರ ಹಾಗೂ ಭಾನುವಾರ ಬೆಳಗ್ಗೆ 6ರಿಂದ 9 ಮಧ್ಯಾಹ್ನ 3ರಿಂದ ಸಂಜೆ 6 ಗಂಟೆವರೆಗೆ ಗಣತಿ ನಡೆಸಲಾಗುವುದು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಟೇಶ್ ತಿಳಿಸಿದ್ದಾರೆ.
ಇದನ್ನೂ ಓದಿ :ಉತ್ತಮ ಶಿಕ್ಷಣ ಪಡೆದು ಪ್ರಗತಿ ಸಾಧಿಸಿ: ಕೊಟ್ರೇಶ್
ಈ ಪಕ್ಷಿ ಗಣತಿ ಕಾರ್ಯದಲ್ಲಿ ಹೆಡಿಯಾಲ ಉಪಭಾಗದ ಎಸಿಎಫ್ ಎಂ.ಎಸ್.ರವಿಕುಮಾರ್ ಗುಂಡ್ಲುಪೇಟೆ ಉಪಭಾಗದ ಎಸಿಎಫ್ ಪರಮೇಶ್ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.