Advertisement

ಬಿಪಿನ್‌ ಫುಟ್ಬಾಲ್‌ ಅಕಾಡೆಮಿ: ಇಂಟರ್‌ ಸೆಂಟರ್‌ ಫುಟ್ಬಾಲ್‌ ಪಂದ್ಯಾಟ

11:19 AM Jan 05, 2019 | |

ಮುಂಬಯಿ:  ತುಳು-ಕನ್ನಡಿಗರ ಪ್ರತಿಷ್ಠಿತ ಬಿಪಿನ್‌ ಫುಟ್ಬಾಲ್‌ ಅಕಾಡೆಮಿ ಮುಂಬಯಿ ಇದರ 32 ನೇ ವಾರ್ಷಿಕ ಇಂಟರ್‌ ಸೆಂಟರ್‌ ಫುಟ್ಬಾಲ್‌ ಪಂದ್ಯಾಟವು ಡಿ. 29 ರಂದು ಬೆಳಗ್ಗೆ 8 ರಿಂದ ಚರ್ಚ್‌ಗೇಟ್‌ ಪರಿಸರದ ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ ಕ್ರೀಡಾಂಗಣದಲ್ಲಿ ನಡೆಯಿತು.

Advertisement

ಸಂಜೆ ನಡೆದ ಅಂತಿಮ ಪಂದ್ಯದಲ್ಲಿ ಬಿಪಿನ್‌ ಬಿಎಂಸಿ ಕ್ಯಾಂಪ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಇಂಡಿಯನ್‌ ರೈಲ್ವೆಸ್‌ ಆ್ಯಂಡ್‌ ಮಹಾರಾಷ್ಟ್ರ ಫುಟ್ಬಾಲ್‌ ತಂಡದ ಕೋಚ್‌ ಐರೆನಿಯೋ ವಾಜ್‌ ಮತ್ತು ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಜಯ ಶೆಟ್ಟಿ ಅವರು ವಿಜೇತ ಬಿಎಂಸಿ ಕ್ಯಾಂಪ್‌ ತಂಡಕ್ಕೆ ಪ್ರಶಸ್ತಿ ಪ್ರದಾನಿಸಿ ಶುಭಹಾರೈಸಿದರು.

ಪೆನಾಲ್ಟಿ ಶೂಟೌಟ್‌ನಲ್ಲಿ ಬಿಪಿನ್‌ ಕಾಂದಿವಲಿ ಕ್ಯಾಂಪ್‌ನ್ನು 5-3 ಅಂತರಗಳಿಂದ ಮಣಿಸಿದ ಬಿಎಂಸಿ ಕ್ಯಾಂಪ್‌ 32 ನೇ ಆವೃತ್ತಿಯ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತು. ಪೂರ್ಣಾವಧಿಯಲ್ಲಿ ಇತ್ತಂಡಗಳು ಸಮಬಲ ಸಾಧಿಸಿದ್ದು, ಅಂತಿಮವಾಗಿ ಪೆನಾಲ್ಟಿ ಶೂಟೌಟ್‌ ಮೂಲಕ ವಿಜೇತರನ್ನು ನಿರ್ಧರಿಸಲಾಯಿತು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಬಿಪಿನ್‌ ಕಾಂದಿವಲಿ ಕ್ಯಾಂಪ್‌ ತಂಡವು ಬಿಪಿನ್‌ ವಿಲೇಪಾರ್ಲೆ ಕ್ಯಾಂಪ್‌ನ್ನು ಟ್ರೈಬ್ರೇಕರ್‌ ಮೂಲಕ ಮಣಿಸಿ ಫೈನಲ್‌ ಪ್ರವೇಶಿಸಿತು. ಇನ್ನೊಂದೆಡೆ ಬಾಲಕಿಯರ ಅಂಡರ್‌ 16 ಪಂದ್ಯದಲ್ಲಿ ವೆಸ್ಟರ್ನ್ ವಲಯ ತಂಡವು ಸೆಂಟರ್‌ ವಲಯ ವಿರುದ್ಧ 2-0 ಅಂತರಗಳಿಂದ ಜಯ ಸಾಧಿಸಿ ಚಾಂಪಿಯನ್‌ ಎನಿಸಿತು. ತಂಡದ ಪರವಾಗಿ ಪ್ರಿಯಾಂಕಾ ಕಾನೋಜಿಯಾ ಗೋಲು ಹೊಡೆದು ಮಿಂಚಿದರು.

ಇದೇ ರಫೀಕ್‌ ಮನ್ಸೂರಿ ಟೂರ್ನಿಯ ಶ್ರೇಷ್ಠ ಆಟಗಾರರಾಗಿ ಹೊರಹೊಮ್ಮಿದರೆ, ಬಿಪಿನ್‌ ವಿರಾರ್‌ ಕ್ಯಾಂಪ್‌ ಫೇರ್‌ ಪ್ಲೇ ಪ್ರಶಸ್ತಿಗೆ ಭಾಜನವಾಯಿತು. ಬಿಪಿನ್‌ ಕ್ಯಾಂಪ್‌ನ ಅಭಿಷೇಕ್‌ ದೇಸಾಂಜಿ, ಬಿಪಿನ್‌ ಕಾಂದಿವಲಿ ಕ್ಯಾಂಪ್‌ನ ಮೊಹಮ್ಮದ್‌ ಸೈಫ್‌, ಬಿಪಿನ್‌ ಕೊಲಬಾ-ಚರ್ಚ್‌ ಗೇಟ್‌ ಕ್ಯಾಂಪಿನ ಸಂಜೂ ರಾಥೋಡ್‌, ಬಿಪಿನ್‌ ವಿಲೇಪಾರ್ಲೆ ಕ್ಯಾಂಪ್‌ನ ಶರ್ಮಾದ್‌ ಬೋಯಿರ್‌, ಬಿಪಿನ್‌ ಕಾಂದಿವಲಿ ಕ್ಯಾಂಪ್‌ನ ಭರತ್‌, ಬಿಪಿನ್‌ ಮೀರಾರೋಡ್‌ ಕ್ಯಾಂಪ್‌ನ ಧೈರ್ಯ ಬಾರಿ, ಬಿಪಿನ್‌ ಉಲ್ಲಾಸ್‌ ನಗರ ಕ್ಯಾಂಪಿನ ಅಭಿಜಿತ್‌ ಶಿಂಧೆ ಅವರು ತಂಡದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

Advertisement

ಮಹಾರಾಷ್ಟ್ರ ರಾಜ್ಯ ಮಾಜಿ ಫುಟ್ಬಾಲ್‌ ಆಟಗಾರ ಗಿರೀಶ್‌ ನಾೖರ್‌ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ದೀಪಪ್ರಜ್ವಲಿಸಿ ಪಂದ್ಯಾಟಕ್ಕೆ ಚಾಲನೆ ನೀಡಿದರು. ಭಾರತೀಯ ಮಾಜಿ ಫುಟ್ಬಾಲ್‌ ಆಟಗಾರ ಸಲ್ವಾದೋರ್‌ ಡಿ’ಸೋಜಾ, ಸ್ಟೀವನ್‌ ಡಾೖಸ್‌, ಮೋನಪ್ಪ ಮೂಲ್ಯ, 

ಸುರೇಶ್‌ ಮೆಂಡನ್‌, ಸುರೇಶ್‌ ರಾವುಲ್‌ ಮೊದಲಾದವರು ಉಪಸ್ಥಿತರಿದ್ದು ಆಟಗಾರರಿಗೆ ಶುಭಹಾರೈಸಿದರು.

ಪಂದ್ಯಾಟದಲ್ಲಿ ಬಿಪಿನ್‌ ವಿಲೇಪಾರ್ಲೆ ಕ್ಯಾಂಪ್‌, ಬಿಪಿನ್‌ ಕೊಲಬಾ-ಚರ್ಚ್‌ಗೇಟ್‌, ಬಿಪಿನ್‌ ಉಲ್ಲಾಸ್‌ ನಗರ ಕ್ಯಾಂಪ್‌, ಬಿಪಿನ್‌ ವಿರಾರ್‌ ಕ್ಯಾಂಪ್‌, ಬಿಪಿನ್‌ ಬಿಎಂಸಿ ಕ್ಯಾಂಪ್‌, ಬಿಪಿನ್‌ ಕಾಂದಿವಲಿ ಕ್ಯಾಂಪ್‌, ಬಿಪಿನ್‌ ಕಲ್ಯಾಣ್‌ ಕ್ಯಾಂಪ್‌, ಬಿಪಿನ್‌ ಮೀರಾರೋಡ್‌ ಕ್ಯಾಂಪ್‌ ಇನ್ನಿತರ ತಂಡಗಳು ಭಾಗವಹಿಸಿದ್ದವು. ತುಳು-ಕನ್ನಡಿಗರು, ಫುಟ್ಬಾಲ್‌ ಪ್ರೇಮಿಗಳು, ಆಟಗಾರರ ಪಾಲಕ-ಪೋಷಕರು ಪಾಲ್ಗೊಂಡು ಆಟಗಾರರನ್ನು ಪ್ರೋತ್ಸಾಹಿಸಿದರು.

ಬಿಪಿನ್‌ ಫುಟ್ಬಾಲ್‌ ಅಕಾಡೆಮಿಯ ಅಧ್ಯಕ್ಷ ಸತೀಶ್‌ ಉಚ್ಚಿಲ್‌, ಉಪಾಧ್ಯಕ್ಷ ಸಂಸದ ಗೋಪಾಲ್‌ ಶೆಟ್ಟಿ, ಕಾರ್ಯದರ್ಶಿ ಎಚ್‌. ವಿ. ಸುವರ್ಣ ಮತ್ತು ಎಸ್‌. ಎಸ್‌. ನಾರಾಯಣ್‌ ಹಾಗೂ ಇನ್ನಿತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಆಟಗಾರರಿಗೆ ಶುಭಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next