ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ ಕೆಲ ವೈದ್ಯರು ಮೇಲಧಿಕಾರಿಗಳ ಪೂರ್ವಾನುಮತಿ ಪಡೆಯದೆ ಕರ್ತವ್ಯಕ್ಕೆ ಗೈರಾಗುವುದು ಹಾಗೂ ಅರ್ಧಕ್ಕೆ ಚಕ್ಕರ್ ಹೊಡೆಯುವುದನ್ನು ತಡೆಯಲು ಅ. 1ರಿಂದ ಬಯೋಮೆಟ್ರಿಕ್ ಹಾಜರಾತಿ ಆಧರಿಸಿ ವೇತನ ಬಟವಡೆ ಮಾಡಲು ನಿರ್ಧರಿಸಲಾಗಿದೆ.
ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್)ಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಕೆಲ ಹಿರಿ-ಕಿರಿಯ ವೈದ್ಯರು ಆಡಳಿತ ಮಂಡಳಿ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆ ಹಾಗೂ ಪೂರ್ವಾನುಮತಿ ಪಡೆಯದೆ ತಿಂಗಳುಗಟ್ಟಲೇ ಕೆಲಸಕ್ಕೆ ಗೈರಾಗುತ್ತಿದ್ದಾರೆ. ಜೊತೆಗೆ ಕೆಲವರು ಕೆಲಸಕ್ಕೆ ಹಾಜರಾದರೂ ಕೆಲಹೊತ್ತು ಇದ್ದು ನಂತರ ಹೋಗಿ ಬಿಡುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದರಿಂದ ಆಸ್ಪತ್ರೆಗೆ ಹೊರ ರೋಗಿಗಳಾಗಿ ಬರುವ ಹಾಗೂ ದಾಖಲಾಗಿರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯದೆ ತೀವ್ರ ಸಮಸ್ಯೆ ಉಂಟಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.
ದೊಡ್ಡ ತಲೆನೋವು: ಕಿಮ್ಸ್‌ನಲ್ಲಿ ಖಾಸಗಿ ಆಸ್ಪತ್ರೆಗಳಿಗಿಂತಲೂ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳಿವೆ. ಅಲ್ಲದೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೂಡ ಆರಂಭಗೊಂಡಿದೆ. ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಆರ್‌ಎಂಒ, ಹೌಸ್ ಸರ್ಜನ್, ಪಿಜಿ ವಿದ್ಯಾರ್ಥಿಗಳು ಸೇರಿ ಒಟ್ಟು 300 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ವೈದ್ಯರ ಅನಿರೀಕ್ಷಿತ ಗೈರು ಹಾಜರಾತಿಯಿಂದ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಇದು ಆಡಳಿತ ಮಂಡಳಿಗೆ ದೊಡ್ಡ ತಲೆನೋವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಯೋ ಮೆಟ್ರಿಕ್ ಹಾಜರಾತಿ ಆಧರಿಸಿ ವೇತನ ಬಟವಡೆಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಕಿಮ್ಸ್‌ನ ವೈದ್ಯ ಸಿಬ್ಬಂದಿ ವೇತನವನ್ನು ಅ. 1ರಿಂದ ಎಚ್ಆರ್‌ಎಂಎಸ್‌ಗೆ ಲಿಂಕ್ ಮಾಡಿ ಬಟವಡೆ ಮಾಡಲಾಗುವುದು. ವೈದ್ಯರ ಬಯೋಮೆಟ್ರಿಕ್ ಹಾಜರಾತಿ ಆಧರಿಸಿ ವೇತನ ಬಟವಡೆ ಮಾಡುವುದರಿಂದ ಪೂರ್ವಾನುಮತಿ ಪಡೆಯದೆ ಗೈರಾಗುವವರ ಮೇಲೆ ಹಾಗೂ ಕರ್ತವ್ಯದಲ್ಲಿ ಚಕ್ಕರ್ ಹೊಡೆಯುವವರ ಮೇಲೆ ನಿಗಾ ವಹಿಸಲು ಅನುಕೂಲವಾಗುತ್ತದೆ.
• ಡಾ| ರಾಮಲಿಂಗಪ್ಪ ಅಂಟರತಾನಿ, ಕಿಮ್ಸ್ ನಿರ್ದೇಶಕ
•ಶಿವಶಂಕರ ಕಂಠಿ