Advertisement

ಉದ್ದೇಶಿತ ಪ್ರದೇಶದ ಸರ್ವೇ ಕಾರ್ಯಕ್ಕೆ ಚಾಲನೆ :  ಉರುಂಬಿಗೆ ಜೈವಿಕ ಸೂಕ್ಷ್ಮಪ್ರದೇಶ ಪಟ್ಟ

11:09 PM Feb 24, 2021 | Team Udayavani |

ಕಡಬ: ಕಡಬ ತಾಲೂಕಿನ ಕುಂತೂರು ಪೆರಾಬೆ ಗ್ರಾಮದ ಕುಮಾರಧಾರಾನದಿ ತೀರದ ಉರುಂಬಿ ಪ್ರದೇಶಕ್ಕೆ ಜೈವಿಕ ಸೂಕ್ಷ್ಮ ಪ್ರದೇಶ ಎನ್ನುವ ಪಟ್ಟ ನೀಡುವ ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಕಾರ್ಯಕ್ಕೆ ಚಾಲನೆ ದೊರೆತಿದೆ. ಉರುಂಬಿ ಪ್ರದೇಶದಲ್ಲಿ ತಾಲೂಕು ಜೀವ ವೈವಿಧ್ಯ ಸಮಿತಿ ಸರ್ವೇ ನಡೆಸಿದೆ.

Advertisement

ಕಡಬ ತಾಲೂಕಿನ ಉರುಂಬಿ ಮಾತ್ರವಲ್ಲದೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಆದಿ ನಾರಾಯಣ ಸ್ವಾಮಿ ಬೆಟ್ಟ, ನೆಲಮಂಗಲ ತಾಲೂಕಿನ ಮಹಿಮಾರಂಗ ಬೆಟ್ಟ, ಕೋಲಾರದ ಅಂತರಗಂಗೆ ಬೆಟ್ಟವನ್ನು ಕೂಡ ಜೀವ ವೈವಿಧ್ಯ ತಾಣಗಳು ಎಂದು ಘೋಷಿಸಲು ಸರಕಾರ ಮುಂದಾಗಿದೆ.

ಜೈವಿಕವಾಗಿ ಶ್ರೀಮಂತ
ಜೈವಿಕ ಸೂಕ್ಷ್ಮ ಪ್ರದೇಶವೆಂದರೆ ಭೂಮಿಯಲ್ಲಿ ಜೈವಿಕವಾಗಿ ಶ್ರೀಮಂತ ಮತ್ತು ಹೆಚ್ಚು ಅಳಿವಿನಂಚಿನಲ್ಲಿರುವ ಪರಿಸರ ಪ್ರದೇಶಗಳು ಎಂದು ಪರಿಸರ ತಜ್ಞರು ವಿಶ್ಲೇಷಿಸುತ್ತಾರೆ. ಅಂತಹ ಪ್ರದೇಶಗಳಲ್ಲಿ ನಡೆಯುವ ಪರಿಸರ ವಿರೋಧಿ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗುತ್ತದೆ.

ತಾಲೂಕು ಜೀವ ವೈವಿಧ್ಯ ಸಮಿತಿಯಿಂದ ಪರಿಶೀಲನೆ
ಕಡಬ ತಾಲೂಕು ಜೀವ ವೈವಿಧ್ಯ ಸಮಿತಿಯ ಅಧ್ಯಕ್ಷೆ, ಕಡಬ ತಾಲೂಕು ಪಂಚಾಯತ್‌ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಕುಮಾರಧಾರಾ ಪರಿಸರ ಸಂರಕ್ಷಣ ಸಮಿತಿಯ ಅಧ್ಯಕ್ಷ ಎನ್‌.ಕರುಣಾಕರ ಗೋಗಟೆ, ಪಂಜ ವಲಯ ಅರಣ್ಯಾಧಿಕಾರಿ ಮಂಜುನಾಥ್‌, ತಾ.ಪಂ.ಉಪಾಧ್ಯಕ್ಷೆ ಜಯಂತಿ ಆರ್‌. ಗೌಡ, ಸದಸ್ಯೆ ತೇಜಸ್ವಿನಿ ಗೌಡ, ಸರ್ವೇ ಇಲಾಖೆಯ ಗಿರಿ ಗೌಡ, ಕುಟ್ರಾಪ್ಪಾಡಿ ಪಿಡಿಒ ಜೆರಾಲ್ಡ್‌ ಮಸ್ಕರೇನ್ಹಸ್‌, ಪೆರಾಬೆ ಪಿಡಿಒ ಶಾಲಿನಿ, ಕುಟ್ರಾಪ್ಪಾಡಿ ಗ್ರಾ.ಪಂ. ಸದಸ್ಯರಾದ ಕಿರಣ್‌ ಗೋಗಟೆ, ಮಾಧವಿ, ಪ್ರಮುಖರಾದ ವಾಸುದೇವ ಇಡ್ಯಾಡಿ, ಗೋಪಾಲಕೃಷ್ಣ ಗೌಡ, ಎಲ್ಸಿ ಥಾಮಸ್‌ ಮತ್ತಿತರರು ಮಂಗಳವಾರ ಉರುಂಬಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜೈವಿಕ ಸೂಕ್ಷ್ಮಪ್ರದೇಶ: ಬೇಡಿಕೆ
ಉರುಂಬಿ ಪ್ರದೇಶದಲ್ಲಿ ಕುಮಾರಧಾರಾ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ ಜಲವಿದ್ಯುತ್‌ ಸ್ಥಾವರ ಪ್ರಾರಂಭಿಸಲಾಗುವುದು ಎನ್ನುವ ಸುದ್ದಿಯ ಹಿನ್ನೆಲೆಯಲ್ಲಿ ಅದನ್ನು ವಿರೋಧಿಸಿ ಕುಮಾರಧಾರಾ ಪರಿಸರ ಸಂರಕ್ಷಣ ಸಮಿತಿಯ ನೇತೃತ್ವದಲ್ಲಿ ಕುಮಾರಧಾರಾ ಉಳಿಸಿ ಎನ್ನುವ ಹೆಸರಿನಲ್ಲಿ ಕಳೆದ ಸುಮಾರು 10 ವರ್ಷಗಳ ಹಿಂದೆ ಹುಟ್ಟಿಕೊಂಡ ಹೋರಾಟವು ಉರುಂಬಿ ಪ್ರದೇಶವನ್ನು ಜೈವಿಕ ಸೂಕ್ಷ್ಮಪ್ರದೇಶವೆಂದು ಘೋಷಣೆ ಮಾಡಬೇಕೆಂಬ ಬೇಡಿಕೆಯನ್ನು ಸರಕಾರದ ಮುಂದಿಡುತ್ತಲೇ ಬಂದಿತ್ತು. ಪರಿಸರ ಅಧ್ಯಯನಕಾರರು ಆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಜೀವ ವೈವಿಧ್ಯದ ಕುರಿತು ಅಧ್ಯಯನ ನಡೆಸಿ ಉರುಂಬಿ ಜೈವಿಕ ಸೂಕ್ಷ್ಮಪ್ರದೇಶವೆನ್ನುವ ವಿಚಾರಕ್ಕೆ ಪೂರಕವಾಗಿ ವರದಿಗಳನ್ನು ಮಂಡಿಸಿದ್ದರು. ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಕಳೆದ ತಿಂಗಳು ಉರುಂಬಿ ಪ್ರದೇಶಕ್ಕೆ ಭೇಟಿ ನೀಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next