ಮುಳಬಾಗಿಲು: ಸೀಗೇನಹಳ್ಳಿ ಗ್ರಾಮದಂಚಿನಲ್ಲಿ ಜೈವಿಕ ಇಂಧನಕ್ಕೆ ಬಳಕೆಯಾಗುವ, ಮಳೆಯಾಶ್ರಿತ ಹಾಗೂ ಪರಿಸರ ಸ್ನೇಹಿಯಾದ 2 ಸಾವಿರ ಸೀಮೆ ತಂಗಡಿ ಗಿಡಗಳನ್ನು ಪ್ರಕೃತಿ ಸಂಸ್ಥೆ ಬೆಳೆಸಿದ್ದು, ಇದರ ಮಹತ್ವ, ಅನುಕೂಲದ ಬಗ್ಗೆ ಅರಣ್ಯ ಇಲಾಖೆ ರೈತರಿಗೆ ಅರಿವು ಮೂಡಿಸಬೇಕಿದೆ.
ಬರಪೀಡಿತ ತಾಲೂಕಿನಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು, ಇಲ್ಲಿನ ರೈತರು ರೇಷ್ಮೆ, ಮಾವು, ಟೊಮೆಟೋ, ಆಲೂಗಡ್ಡೆ, ಬೀನ್ಸ್, ಮೂಲಂಗಿ, ಹೂ ಕೊಸನ್ನು ಸಾಕಷ್ಟು ಬಂಡವಾಳ ಹಾಕಿ ಬೆಳೆಯುತ್ತಾರೆ. ಆದರೆ, ಫಸಲಿಗೆ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಹೀಗಾಗಿ ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾದ ಸೀಮೆ ತಂಗಡಿ ಗಿಡಗಳಿಂದ ಸಿಗುವ ಲಾಭದ ಬಗ್ಗೆ ವಿವರಣೆ ನೀಡಬೇಕಿದೆ. ಗಿಡಗಳು ಬಿಡುವ ಎಣ್ಣೆ ಬೀಜಗಳಿಂದ ಇಂಧನ ತಯಾರಿಸಬಹುದಾಗಿದ್ದು, ಈ ಬಗ್ಗೆ ಮತ್ತಷ್ಟು ಮಾಹಿತಿ ನೀಡಿದ್ರೆ ಹಲವು ರೈತರಿಗೆ ಅನುಕೂಲವಾಗುತ್ತದೆ.
ಪರ್ಯಾಯ ಇಂಧನಕ್ಕೆ ಆದ್ಯತೆ: ರೈತ ಸ್ನೇಹಿಯಾದ ಈ ತಂಗಡಿ ಗಿಡಗಳಿಂದ ಮಣ್ಣಿನ ಸವೆತ ತಡೆಗಟ್ಟಬಹುದು. ಅಲ್ಲದೆ, ಉದುರಿದ ಎಲೆಯಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಆಧುನಿಕ ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ವಸ್ತು ಇಂಧನ, ಇದರ ಬಳಕೆ ಹೆಚ್ಚಾದಂತೆಲ್ಲ ತನ್ನ ಲಭ್ಯತೆಯು ಕ್ಷೀಣಿಸುತ್ತಾ ಬರುತ್ತಿದ್ದು, ಪರ್ಯಾಯ ಇಂಧನಕ್ಕೆ ಒತ್ತು ನೀಡಲಾಗುತ್ತಿದೆ.
ಹಿಂದಿನ ಕಾಲದಲ್ಲಿ ಅಡುಗೆ ತಯಾರಿಕೆ, ಬೆಳಕಿಗಾಗಿ, ಉಪಕರಣಗಳ ಚಾಲನೆಗಾಗಿ ದೇಶಿ ಸೊಬಗಿನ ಇಂಧನವನ್ನು ಬಳಸಲಾಗು=ತ್ತಿತ್ತು. ಅದೇ ಸೊಬಗಿಗೆ ಈಗ ಆಧುನಿಕತೆಯ ಸ್ಪರ್ಶ ನೀಡಿ ಜೈವಿಕ ಇಂಧನ ತಯಾರಿಸಲಾಗುತ್ತಿದೆ. ಬತ್ತಲಾಗದ ಜೈವಿಕ ಇಂಧನಕ್ಕಾಗಿ ಈಗಾಗಲೇ ಮುಂದುವರಿದ ರಾಷ್ಟ್ರಗಳು ಮಹತ್ವ ನೀಡಿವೆ. ಅದೇ ರೀತಿ ಕೇಂದ್ರ ಸರ್ಕಾರವು ಕಚ್ಚಾ ತೈಲವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು, ಇದನ್ನು ನಿಯಂತ್ರಿಸಲು ಹಾಗೂ ಸಾವಲಂಬನೆ ಸಾಧಿಸಲು ಜೈವಿಕ ಇಂಧನ ತಯಾರಿಗೆ ಆದ್ಯತೆ ನೀಡಬೇಕಿದೆ.
ಇದಕ್ಕೆ ಪೂರಕವೆಂಬಂತೆ ಐದು ವರ್ಷಗಳ ಹಿಂದೆ ಮುಳಬಾಗಿಲು ತಾಲೂಕಿನ ಸಿಗೇನಹಳ್ಳಿ ಗ್ರಾಮದಲ್ಲಿದ್ದ ಪ್ರಕೃತಿ ಸಂಸ್ಥೆಯು ಎಸ್.ಸಿ.ಐ.ಎ.ಎಫ್ ಎಂಬ ಎನ್.ಜಿ.ಒ ಸಂಸ್ಥೆ ನೆರವಿನೊಂದಿಗೆ ಮಾರಂಡಹಳ್ಳಿ ಮಾರ್ಗವಾಗಿ ಹಾದು ಹೋಗುವ ರಸ್ತೆ ಪಕ್ಕದಲ್ಲಿನ ಗೋಮಾಳದಲ್ಲಿ 2000ಕ್ಕೂ ಹೆಚ್ಚು ಸೀಮೆ ತಂಗಡಿ ಗಿಡಗಳನ್ನು ನೆಟ್ಟು, ಜೈವಿಕ ಇಂಧನ ತಯಾರಿಕೆಗೆ ಎಂಬ ಬೋರ್ಡ್ ಹಾಕಿದೆ.
ಯಾರು ನಿರ್ವಹಣೆ ಮಾಡದಿದ್ದರೂ ಗಿಡಗಳು ಬೆಳೆದಿವೆ. ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಈ ಗಿಡಗಳನ್ನು ಉಳಿಸಿ, ಸೀಮೆ ತಂಗಡಿ ಗಿಡದ ಪ್ರಾಮುಖ್ಯತೆ, ವೈಜ್ಞಾನಿಕ ಬಳಕೆಯ ಬಗ್ಗೆ ರೈತರಿಗೆ ತಿಳಿಸಬೇಕು. ಇದಕ್ಕೆ ಬೇಕಾದ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕು. ಇದರಿಂದ ತಾಲೂಕಿನ ಬರಡು ಭೂಮಿ ಅರಣ್ಯೀಕರಣದೊಂದಿಗೆ, ರೈತರ ಆರ್ಥಿಕಾಭಿವೃದ್ಧಿಗೂ ನೆರವಾಗುತ್ತದೆ.
● ಎಂ.ನಾಗರಾಜಯ್ಯ