ಧಾರವಾಡ: ಕರ್ನಾಟಕದಲ್ಲಿ ಈಗಾಗಲೇ ಹತ್ತು ಪ್ರದೇಶಗಳನ್ನು ಜೀವ ವೈವಿಧ್ಯ ಪಾರಂಪರಿಕ ತಾಣಗಳೆಂದು ಘೋಷಿಸಲಾಗಿದ್ದು, ಇವುಗಳಿಗೆ ಪ್ರಸಕ್ತ ಸಾಲಿನಲ್ಲಿ ನಾಲ್ಕು ಪ್ರದೇಶಗಳು ಸೇರ್ಪಡೆಯಾಗುತ್ತಿವೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಹೇಳಿದರು.
ಜಿಪಂ ಸಭಾಂಗಣದಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ ಆಶ್ರಯದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಜೀವ ವೈವಿಧ್ಯ ಜಾಗೃತಿ ಅಭಿಯಾನಕ್ಕೆ ಚಾಲನೆ ಹಾಗೂ ಜೀವ ವೈವಿಧ್ಯ ಸಂರಕ್ಷಣೆ ಮಾಡಿರುವ ಸಾಧಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ 11 ಸ್ಥಳಗಳಲ್ಲಿ ಅಪರೂಪದ ಮತ್ಸ ಧಾಮಗಳಿದ್ದು, ಇವುಗಳು ಸೇರಿದಂತೆ ಈ ವರ್ಷ ಮತ್ತೆ 15 ಹೊಸ ಮತ್ಸ ಧಾಮಗಳನ್ನು ಸೇರಿಸಿ ಪಾರಂಪರಿಕ ತಾಣಗಳಾಗಿ ಗುರುತಿಸಲಾಗುವುದು. ರಾಜ್ಯದ ಪ್ರಮುಖ ಮತ್ತು ಐತಿಹಾಸಿಕವಾಗಿರುವ 10 ಮರಗಳನ್ನು ಪಾರಂಪರಿಕ ವೃಕ್ಷಗಳೆಂದು ಘೋಷಿಸಲಾಗಿದೆ. ಈಗಿನ ಆಧುನಿಕ ಕೃಷಿ ಪದ್ಧತಿಯಿಂದ ಅರಣ್ಯ ಕಡಿಮೆಯಾಗುತ್ತಿದ್ದು, ಅಮೂಲ್ಯವಾದ ಸಸ್ಯ ಸಂಪತ್ತು, ಜಲಚರಗಳನ್ನು ಕಾಪಾಡುವ ಮೂಲಕ ಜೀವ ವೈವಿಧ್ಯತೆಯನ್ನು ಸಂರಕ್ಷಿಸಬೇಕಿದೆ.
ಕೃಷಿ, ತೋಟಗಾರಿಕೆಯಲ್ಲಿ ಗಿಡಗಳ ಸಂಖ್ಯೆ ಹೆಚ್ಚಿಸುವ ಮೂಲಕ ಸುಸ್ಥಿರ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದರು. ಜೀವ ವೈವಿಧ್ಯ ಜಾಗೃತಿ ಅಭಿಯಾನದಲ್ಲಿ ಅರಣ್ಯ, ಪರಿಸರ ಮತ್ತು ಜೀವವೈವಿಧ್ಯ ಕಾಯ್ದೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗುತ್ತದೆ. ಗ್ರಾಮ, ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ರಚಿತವಾಗಿರುವ ಜೀವ ವೈವಿಧ್ಯ ಸಮಿತಿಗಳನ್ನು ಸಕ್ರಿಯಗೊಳಿಸುವುದು ಮುಖ್ಯ ಉದ್ದೇಶವಾಗಿದೆ. ಗ್ರಾಮಗಳಲ್ಲಿ ಕಂಡುಬರುವ ಜೀವ ವೈವಿಧ್ಯಗಳನ್ನು ದಾಖಲಿಸಿ ಸಂರಕ್ಷಿಸುವ ಕುರಿತು ಜನರಿಗೆ ತಿಳಿವಳಿಕೆ ನೀಡುವ ಕಾರ್ಯವನ್ನು ಅಭಿಯಾನದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
ಜೀವವೈವಿಧ್ಯ ಪಾರಂಪರಿಕ ತಾಣಗಳನ್ನು ಘೋಷಿಸುವ ಮೂಲಕ ಅಪರೂಪದ ಅರಣ್ಯ, ಮರ, ಐತಿಹಾಸಿಕ ಕೆರೆ ಮತ್ತು ಅರಣ್ಯೀಕೃತ ಪ್ರದೇಶಗಳನ್ನು ಸಂರಕ್ಷಿಸುವುದು ಮಂಡಳಿ ಪ್ರಮುಖ ಉದ್ದೇಶವಾಗಿದೆ ಎಂದರು. ಡಿಸಿ ನಿತೇಶ ಪಾಟೀಲ ಮಾತನಾಡಿ, ಕೃಷಿ ಮತ್ತು ತೋಟಗಾರಿಕೆಯಲ್ಲಿ ನಿಷೇ ಧಿತ ಕಳೆನಾಶಕ, ಕೀಟನಾಶಕ ಬಳಸದಂತೆ ಎಚ್ಚರವಹಿಸಲು ಮತ್ತು ನಕಲಿ ರಾಸಾಯನಿಕ ಗೊಬ್ಬರ ಬಳಸದಂತೆ ಮುಂಜಾಗೃತೆ ವಹಿಸಲು ನಿರಂತರ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಕೃಷಿ ಪದವಿಧರರು ಕೇವಲ 2,000 ರೂ. ಶುಲ್ಕ ತುಂಬಿ ಗೊಬ್ಬರ ಹಾಗೂ ಕಳೆ, ಕೀಟನಾಶಕ ಮಾರಾಟಕ್ಕೆ ಪರವಾನಗಿ ಪಡೆದುಕೊಳ್ಳಬಹುದು. ಈ ಕುರಿತು ಪದವೀಧರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಧಾರವಾಡ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾ ಧಿಕಾರಿ ಯಶಪಾಲ ಕ್ಷೀರಸಾಗರ, ಪಶ್ಚಿಮ ಘಟ್ಟ ಕಾರ್ಯಪಡೆ ಹಾಗೂ ಔಷ ಧ ಸಸ್ಯಗಳ ಪ್ರಾಧಿ ಕಾರದ ಸದಸ್ಯ ಡಾ| ಕೇಶವ, ಕೃಷಿ ಇಲಾಖೆ ಉಪ ನಿರ್ದೇಶಕಿ ಸ್ಮಿತಾ ಆರ್., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕಾಶೀನಾಥ ಭದ್ರಣ್ಣವರ ಮಾತನಾಡಿದರು. ಪರಿಸರ ಪ್ರೇಮಿ ಡಾ| ಮಹಾಂತೇಶ ಚಂದ್ರಶೇಖರ ತಪಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಮನಸೂರ ಹಾಗೂ ಮನಗುಂಡಿ ಗ್ರಾಪಂ ವ್ಯಾಪ್ತಿಯಲ್ಲಿ ಲಭ್ಯವಿರುವ ಜೀವ ವೈವಿಧ್ಯಗಳನ್ನು ಸಮೀಕ್ಷೆ ಮಾಡಿ ಗುರುತಿಸಿ ದಾಖಲಿಸಿರುವ ಸಿಡಿಗಳನ್ನು ಬಿಡುಗಡೆ ಮಾಡಲಾಯಿತು.
ಪ್ರೊಬೆಷನರಿ ಐಎಫ್‌ಎಸ್ ಅಧಿಕಾರಿ ಸೌರಭಕುಮಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಮೊದಲಾದವರಿದ್ದರು. ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಕೃಷ್ಣ ಎಸ್. ನಿರೂಪಿಸಿದರು. ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ಈಳಗೇರ ವಂದಿಸಿದರು.