ಶಿರಸಿ: ಕರ್ನಾಟಕ ಜೀವ ವೈವಿಧ್ಯ ಮಂಡಳಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸಮಾಲೋಚನಾ ಕಾರ್ಯಾಗಾರ ನಡೆಸಿತು. ಜೀವವೈವಿಧ್ಯ ದಾಖಲಾತಿ ಉಪಯೋಗ ಹಾಗೂ ಪಂಚಾಯತ್ ಜೀವವೈವಿಧ್ಯ ಸಮಿತಿಗಳ ಬಲವರ್ಧನೆ ಕುರಿತು ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಂದ ಜೀವವೈವಿಧ್ಯ ಸಂಯೋಜಕರು, ಸಂಸ್ಥೆಗಳು, ಜಿಲ್ಲಾ ಸಾಮಾಜಿಕ ಅರಣ್ಯ ಅಧಿಕಾರಿಗಳು, ತಜ್ಞ ಸಮೀತಿಗಳ ಸದಸ್ಯರು ಪಾಲ್ಗೊಂಡಿದ್ದರು.
ಮುಖ್ಯ ಅತಿಥಿ ಗ್ರಾಮೀಣ ಅಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಆಗಮಿಸಿ ವಿನಾಶದ ಅಂಚಿನ ಸಸ್ಯ ಪ್ರಾಣಿಗಳ ಕುರಿತು ಅಧ್ಯಯನ ವರದಿ ಬಿಡುಗಡೆ ಮಾಡಿದರು. ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಪಂಚಾಯತ್ ರಾಜ್ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದರು.
ರಾಜ್ಯದ 6010 ಗ್ರಾಪಂ 175 ತಾಪಂಗಳು, 30 ಜಿಪಂಗಳಲ್ಲಿರುವ ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ಕ್ರಿಯಾಶೀಲಗೊಳಿಸಬೇಕು. ತಜ್ಞರು, ಪರಿಸರ ಸಂಸ್ಥೆಗಳ ಕಾರ್ಯಕರ್ತರನ್ನು ಈ ಸಮೀತಿಗಳಿಗೆ ಸೇರ್ಪಡೆ ಮಾಡಬೇಕು. ತರಬೇತಿ, ಜಾಗೃತಿ ಮಾಡಿಸಲು ಜಿಪಂಗಳ ಮೂಲಕ ವಿಶೇಷ ಕ್ರಮಬೇಕು. 15ನೇ ಹಣಕಾಸು ನಿಧಿ ವಿನಿಯೋಗ ಆದೇಶದಲ್ಲಿ ಜೀವವೈವಿಧ್ಯ ವಿಷಯ ಸೇರ್ಪಡೆ ಆಗಬೇಕು. ಮುಂತಾದ 10 ಅಂಶಗಳ ಬೇಡಿಕೆಗಳನ್ನು ಅಶೀಸರ ಮಂಡಿಸಿದರು.
ಸಮಾರೋಪ ಭಾಷಣ ಮಾಡಿದ ಸಚಿವ ಕೆ.ಎಸ್‌ಈಶ್ವರಪ್ಪ, ಜೀವ ವೈವಿಧ್ಯ ಮಂಡಳಿ ಕ್ರಿಯಾಶೀಲವಾಗಿದೆ. ಅಧ್ಯಕ್ಷರು ಛಲದಿಂದ ಕೆಲಸ ಮಾಡುತ್ತಾರೆ. ಪಂಚಾಯತ್ ರಾಜ್ ಇಲಾಖೆ ಜೀವವೈವಿಧ್ಯ ನಿರ್ವಹಣೆ-ರಕ್ಷಣೆಗೆ ಎಲ್ಲ ಸಹಾಯ-ಸಹಕಾರ ನೀಡಲು ಬದ್ಧವಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ಜೀವವೈವಿಧ್ಯ ಮಂಡಳಿ ಜೊತೆ ನಮ್ಮ ಇಲಾಖೆ ಹಿರಿಯ ಅಧಿಕಾರಿಗಳು ಮಾತುಕತೆ ನಡೆಸುತ್ತಾರೆ. ಬಜೆಟ್‌ನಲ್ಲಿ ಸಹಾ ಇದಕ್ಕೆ ಅವಕಾಶ ಕಲ್ಪಿಸುತ್ತೇವೆ.
ಇದನ್ನೂ ಓದಿ:ಬಾಲಕಿಯರಿಗೆ ಉನ್ನತಾಧಿ ಕಾರದ ಗೌರವ
ಜೀವವೈವಿಧ್ಯ ರಕ್ಷಣೆ ಪಂಚಾಯತ್ ರಾಜ್ ಇಲಾಖೆಯದೇ ಒಂದು ವಿಷಯ ಎಂದು ಪರಿಗಣಿಸುತ್ತೇವೆ ಎಂದು ತಿಳಿಸಿದರು. ಮೇ 22 ರಂದು ಎಲ್ಲ ಗ್ರಾಪಂಗಳಲ್ಲಿ ಜೀವವೈವಿಧ್ಯ ದಿನಾಚರಣೆ ಮಾಡಲು ಆದೇಶ ನೀಡುತ್ತೇನೆ ಎಂದರು. ಜೀವವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿ ಪುನೀತ್ ಪಾಠಕ್, ಪಿಸಿಸಿಎಫ್ ಸಂಜಯ್ ಮೋಹನ್, ಮಂಡಳಿ ಸದಸ್ಯ ಕೆ. ವೆಂಕಟೇಶ್, ಡಾ| ಪ್ರಕಾಶ್ ಮೇಸ್ತ, ಎಪಿಸಿಸಿಎಫ್ ಅನಿತಾ ಅರೇಕಲ್, ಡಾ| ಸುಮಾ, ಡಾ| ಕಿರಣ್, ಡಾ| ರಘು ಶ್ರೀಪಾದ ಬಿಚ್ಚುಗತ್ತಿ, ಗ್ರಾಮೀಣ ಅಭಿವೃದ್ಧಿ ಇಲಾಖೆ ನಿರ್ದೇಶಕ ಯಾಲಕ್ಕಿಗೌಡ ಮೊದಲಾದವರು ಪಾಲ್ಗೊಂಡಿದ್ದರು. ಮಂಡಳಿ ತೋಟಗಾರಿಕಾ ಅಧಿಕಾರಿ ಪವಿತ್ರ ವಂದಿಸಿದರು.