ಹೊಸದಿಲ್ಲಿ: ಬಳಸಿದ ಅಡುಗೆ ಎಣ್ಣೆ (ಯುಸಿಒ)ಯಿಂದ ತಯಾರಿಸಿದ ಬಯೋಡೀಸೆಲ್ ಮಿಶ್ರಿತ ಡೀಸೆಲ್‌ನ ಮೊದಲ ಸರಬರಾಜಿಗೆ ಇಂಡಿಯನ್ ಆಯಿಲ್‌ನ ತಿಕ್ರಿಕಾನ್ ಟರ್ಮಿನಲ್‌ನಲ್ಲಿ ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಉಕ್ಕು ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವರ್ಚುವಲ್ ಆಗಿ ಚಾಲನೆ ನೀಡಿದರು. ಈ ಸಂದರ್ಭ ಪೆಟ್ರೋ ಲಿಯಂ ಸಚಿವಾಲಯದ ಕಾರ್ಯದರ್ಶಿ ತರುಣ್ ಕಪೂರ್, ಇಂಡಿಯನ್ ಆಯಿಲ್‌ನ ಚೇರ್ಮೆನ್ ಎಸ್. ಎಂ. ವೈದ್ಯ ಮೊದಲಾದವರು ಉಪಸ್ಥಿತರಿದ್ದರು.
ಬಳಸಿದ ಅಡುಗೆ ತೈಲವನ್ನು ಸಂಗ್ರಹಿಸಿ ಬಯೋಡೀಸೆಲ್ ಆಗಿ ಪರಿವರ್ತಿಸಲು ಮತ್ತು ಇದರಲ್ಲಿ ಔದ್ಯೋಗಿಕ ಅವಕಾಶ ವನ್ನು ವಿಸ್ತರಿಸಲು ಪೆಟ್ರೋಲಿಯಂ ಇಲಾಖೆಯು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿಜ್ಞಾನ, ತಂತ್ರಜ್ಞಾನ ಮತ್ತು ಭೂವಿಜ್ಞಾನ ಇಲಾಖೆಯ ಸಹಯೋಗದೊಂದಿಗೆ 2019ರ ಆ. 10ರ ವಿಶ್ವ ಜೈವಿಕ ಇಂಧನ ದಿನದಂದು ಯೋಜನೆಯೊಂದನ್ನು ಆರಂಭಿಸಿತ್ತು. ಇದರ ಪ್ರಕಾರ 2019ರ ಆ. 10ರಿಂದ 2020ರ ನ. 9ರವರೆಗೆ 11 ಇಒಐ (ಎಕ್ಸ್‌ಪ್ರೆಶನ್ ಆಫ್ ಇಂಟೆರೆಸ್ಟ್)ಗಳು 200 ಪ್ರದೇಶಗಳಲ್ಲಿ ಈ ಬಗ್ಗೆ ಕಾರ್ಯೋನ್ಮುಖವಾಗಿದ್ದವು.
ಇದೀಗ ಈ ಅವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದ್ದು, 2021ರ ಡಿ. 31ರ ವೇಳೆಗೆ 300 ಪ್ರದೇಶಗಳಿಗೆ ವಿಸ್ತರಣೆಯಾಗಲಿದೆ. ಈ ಯೋಜನೆ ಪ್ರಕಾರ ತೈಲ ಮಾರುಕಟ್ಟೆ ದೇಶಗಳು ತೈಲ ಕಂಪೆನಿಗಳಿಗೆ ದರ ಖಾತರಿ ಸಹಿತ ಕೆಲವು ಕೊಡುಗೆಗಳನ್ನು ಘೋಷಿಸಿವೆ. ಇಲ್ಲಿಯವರೆಗೆ ಇಂಡಿಯನ್ ಆಯಿಲ್ ಕಂಪೆನಿಯು ಬಯೋಡೀಸೆಲ್ ಪ್ಲಾಂಟ್‌ಗಳಿಗೆ 22.95 ಕೋಟಿ ಲೀಟರ್ ಸಾಮರ್ಥ್ಯದಲ್ಲಿ 23 ಎಲ್‌ಒಐಗಳನ್ನು ಬಿಡುಗಡೆ ಮಾಡಿದೆ. ಇದರಡಿ ಯಲ್ಲಿ ಇಂಡಿಯನ್ ಆಯಿಲ್ ಕಂಪೆನಿಯು 2021ರ ಮಾ. 31ರ ವರೆಗೆ ತಿಕ್ರಿಕಾನ್ ಟರ್ಮಿನಲ್‌ನಲ್ಲಿ 51 ಕೆಎಲ್ ಯುಸಿಒ- ಬಯೋಡೀಸೆಲ್ ಅನ್ನು ಪಡೆದುಕೊಂಡಿದೆ.
ಈ ಹೊಸ ಯೋಜನೆಗಾಗಿ ಧರ್ಮೇಂದ್ರ ಪ್ರಧಾನ್ ಅವರು ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದ್ದು, ಈಗಿನ ಸಂಕಷ್ಟದ ಸಂದರ್ಭದಲ್ಲಿ ಇಂಥದ್ದೊಂದು ಯೋಜನೆ ಉತ್ತಮವಾಗಿದೆ. ಕೊರೊನಾ ಸಾಂಕ್ರಾಮಿಕದ ಸವಾಲಿನ ನಡುವೆಯೂ ಪರ್ಯಾಯ ಇಂಧನ ಮಾರ್ಗಗಳನ್ನು ಹುಡುಕುತ್ತಿರುವುದು ಉತ್ತಮ ಬೆಳವಣಿಗೆ. ಇಂಡಿಯನ್ ಆಯಿಲ್ ಸಂಸ್ಥೆಯು ಈ ಹೊಸ ಯೋಜನೆ ಮೂಲಕ ದೇಶದ ತೈಲದ ಅಗತ್ಯವನ್ನು ನಿಭಾಯಿಸುವ ನಿಟ್ಟಿನಲ್ಲಿ ಹೊಸ ಮೈಲುಗಲ್ಲಾಗಲಿದೆ ಹಾಗೂ ಪರಿಸರದ ಮೇಲೆ ಗುಣಾತ್ಮಕ ಪರಿಣಾಮ ಬೀರಲಿದೆ. ತೈಲ ಆಮದು ಪ್ರಮಾಣವನ್ನು ಇಳಿಸಲು ಹಾಗೂ ಗ್ರಾಮೀಣ ಭಾಗದ ನಿರುದ್ಯೋಗವನ್ನು ಕಡಿಮೆ ಮಾಡಲು ಕೂಡ ಇದು ಸಹಕಾರಿಯಾಗಿದೆ ಎಂದರು.
ಎಸ್.ಎಂ. ವೈದ್ಯ ಮಾತನಾಡಿ, ನಾವು ಜನರು ಬಳಸಿದ ಅಡುಗೆ ಎಣ್ಣೆಯ ಕೊನೆಯ ಒಂದು ಬಿಂದುವನ್ನೂ ಬಯೋಡೀಸೆಲ್ ಆಗಿ ಪರಿವರ್ತಿಸುವ ಮೂಲಕ ಆರೋಗ್ಯ ಕಾಪಾಡಲು ಕೂಡ ಶ್ರಮಿಸುತ್ತೇವೆ ಮತ್ತು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವ ನಿಟ್ಟಿನಲ್ಲೂ ಪೂರಕ ಹೆಜ್ಜೆ ಇರಿಸುತ್ತೇವೆ ಎಂದರು.