ಟೊರಂಟೊ: ಕೋವಿಡ್ ವೈರಸ್ ಸೋಂಕಿಗೊಳಗಾಗುವುದರಿಂದ ಪಾರಾಗುವ ಸಲುವಾಗಿ ಪ್ರಪಂಚದಾದ್ಯಂತ ಜನರು ಮಾಸ್ಕ್
ಗಳನ್ನು ಧರಿಸುತ್ತಿದ್ದರೆ. ಕೋಟಿಗಟ್ಟಲೆ ಮಾಸ್ಕ್ ಗಳು ಈಗ ಬಳಕೆಯಲ್ಲಿವೆ. ಈ ಮಾಸ್ಕ್ ಗಳು ನಮ್ಮನ್ನು ರಕ್ಷಿಸಬಹುದು. ಆದರೆ ಪ್ರಕೃತಿಯ ಮೇಲೆ ಹೊಸದೊಂದು ಹೊರೆ ಬಿದ್ದಿದೆ. ಅದು ಈ ಮಾಸ್ಕ್ ಗಳ ವಿಲೇವಾರಿ.
ಬಟ್ಟೆಯಿಂದ ಮಾಡುವ ಮಾಸ್ಕ್ ಮಣ್ಣಿನಲ್ಲಿ ಕರಗುತ್ತದೆಯಾದರೂ ಅದಕ್ಕೆ ಬಹಳ ಸಮಯ ಹಿಡಿಯುತ್ತದೆ. ಹೀಗಾಗಿ ಮುಂದೆ ಮಾಸ್ಕ್ ಗಳ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಲಿದೆ. ಇದಕ್ಕೆ ಪರಿಹಾರ ಎಂಬಂತೆ ಕೆನಡದ ಸಂಶೋಧಕರು ಕೊಳೆತು ಮಣ್ಣಿನಲ್ಲಿ ಕರಗಬಲ್ಲ “ಬಯೊಡಿಗ್ರೇಡಬಲ್’ ಎನ್ 95 ಮಾಸ್ಕ್ ಕಂಡು ಹಿಡಿದಿದ್ದಾರೆ.
ಕೆನಡದ ಯುನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯದಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ಕೆನಡಿಯನ್ ಮಾಸ್ಕ್ ಅಥವಾ ಕ್ಯಾನ್ ಮಾಸ್ಕ್ ನ ಅಂಚನ್ನು ಲಘುವಾದ ಮರದಿಂದ ತಯಾರಿಸಲಾಗಿದೆ. ಇದರಲ್ಲಿ ಒಂದು ಎನ್ 95 ಫಿಲ್ಟರ್ ಮತ್ತು ಅದರ ಹಿಂದೆ ಮರದಿಂದಲೇ ತಯಾರಿಸಿರುವ ವಿಶೇಷ ಫಿಲ್ಟರ್ ಇದೆ.
ಮಾಸ್ಕ್ ಗಳು ನದಿ, ಕೆರೆ, ಸಮುದ್ರ ಪ್ರವೇಶಿಸಿದರೆ ಅದರಿಂದ ಆಗುವ ಮಾಲಿನ್ಯ ಅಪಾರ. ಈ ಹಿನ್ನೆಲೆಯಲ್ಲಿ ಬಯೊಡಿಗ್ರೇಡಬಲ್ ಮಾಸ್ಕ್ ಅದು ಅತ್ಯುತ್ತಮ ಪರಿಹಾರವಾಗಬಲ್ಲದು ಎಂದು ಇಲ್ಲಿನ ಸಂಶೋಧಕರು ಹೇಳಿದ್ದಾರೆ.