Advertisement

ಮೀನುಗಾರಿಕೆ ಬೋಟ್‌ಗಳಲ್ಲಿ “ಬಯೋ ಟಾಯ್ಲೆಟ್‌’ ; ಸ್ವಚ್ಛತೆ, ಸುರಕ್ಷೆಗಾಗಿ ಶೌಚಾಲಯ ಕಡ್ಡಾಯ

12:16 AM Jun 06, 2022 | Team Udayavani |

ಮಂಗಳೂರು: ಸ್ವಚ್ಛತೆ, ಆರೋಗ್ಯ ಮತ್ತು ಸುರಕ್ಷೆಗಾಗಿ ಎಲ್ಲ ಯಾಂತ್ರೀಕೃತ ಮೀನುಗಾರಿಕೆ ಬೋಟ್‌ಗಳಲ್ಲಿಯೂ ಜೈವಿಕ ಶೌಚಾಲಯ (ಬಯೋ ಟಾಯ್ಲೆಟ್‌) ರಚನೆ ಕಡ್ಡಾಯಗೊಳಿಸಲು ಇಲಾಖೆ ಮುಂದಾಗಿದ್ದು, ಪೂರಕ ತಯಾರಿ ನಡೆಸಿದೆ.

Advertisement

ಆಳಸಮುದ್ರ ಮೀನುಗಾರಿಕೆಗೆ ತೆರಳುವ ಬೋಟ್‌ಗಳಲ್ಲಿ ಶೌಚಾಲಯ ಇಲ್ಲದೆ ನೈರ್ಮಲ್ಯ, ಮೀನುಗಾರರ ಆರೋಗ್ಯ, ಸುರಕ್ಷೆಗೂ ಕಂಟಕ ವಾಗಿದೆ. ಹೀಗಾಗಿ ಬಯೋ ಟಾಯ್ಲೆಟ್‌ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ.

ಶೇ. 10ಕ್ಕೂ ಅಧಿಕ ಸಾವಿಗೆ ಕಾರಣ!
ಆಳಸಮುದ್ರ ಮೀನುಗಾರಿಕೆಗೆ ತೆರಳುವ ಪರ್ಸಿನ್‌ ಮತ್ತು ಟ್ರಾಲ್‌ಬೋಟ್‌ಗಳು ಸುಮಾರು 10 ದಿನಗಳ ಕಾಲ ಕಡಲಿನಲ್ಲಿರುತ್ತವೆ. ಟ್ರಾಲ್‌ಬೋಟ್‌ಗಳಲ್ಲಿ 8ರಿಂದ 10 ಮಂದಿ ಮತ್ತು ಪರ್ಸಿನ್‌ ಬೋಟ್‌ಗಳಲ್ಲಿ ಸುಮಾರು 30 ಮಂದಿ ಇರುತ್ತಾರೆ. ಈ ಮೀನುಗಾರರು ಬಹಿರ್ದೆಸೆಗೆ ಪರದಾಡಬೇಕಾಗುತ್ತದೆ. ಅನೇಕ ಬಾರಿ ಬಹಿರ್ದೆಸೆ ಸಂದರ್ಭ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಇಲಾಖೆಯ ಅಂದಾಜಿನ ಪ್ರಕಾರ ಸುಮಾರು ಶೇ. 10ಕ್ಕೂ ಅಧಿಕ ಮಂದಿ ಮೀನುಗಾರರು ಹೀಗೆ ಮೃತಪಟ್ಟಿದ್ದಾರೆ. ಇದರ ಜತೆಗೆ ನೈರ್ಮಲ್ಯಕ್ಕೂ ಆದ್ಯತೆ ನೀಡಲು ಉದ್ದೇಶಿಸಲಾಗಿದೆ.

4,700ಕ್ಕೂ ಅಧಿಕ ಬೋಟ್‌ಗಳು
ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ 1,405, ಉಡುಪಿ ವ್ಯಾಪ್ತಿಯಲ್ಲಿ 2,166 ಮತ್ತು ಉ.ಕ. ವ್ಯಾಪ್ತಿಯಲ್ಲಿ 1,200ಕ್ಕೂ ಅಧಿಕ ಯಾಂತ್ರೀಕೃತ ಮೀನುಗಾರಿಕೆ ಬೋಟ್‌ಗಳಿವೆ. ಈ ಸಾಲಿನಲ್ಲಿಯೇ ಶೌಚಾಲಯ ಅಳವಡಿಕೆಗೆ ಸೂಚನೆ ನೀಡಲಾಗಿದ್ದು, ಕೆಲವು ಹೊಸ ಬೋಟ್‌ಗಳಲ್ಲಿ ಅಳವಡಿಕೆ ಮಾಡಲಾಗುತ್ತಿದೆ.

ಹೊಸ ಬೋಟ್‌ಗಳಿಗೆ ಕಡ್ಡಾಯ
ಹೊಸ ಮೀನುಗಾರಿಕೆ ಬೋಟ್‌ಗಳಲ್ಲಿ ಬಯೋ ಟಾಯ್ಲೆಟ್‌ ಕಡ್ಡಾಯವಾಗಿ ಅಳವಡಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಪ್ರಸ್ತುತ ಪ್ರಧಾನಮಂತ್ರಿ ಮತ್ಸé ಸಂಪದ ಯೋಜನೆಯಲ್ಲಿ ಸಹಾಯಧನದಡಿ ನಿರ್ಮಾಣಗೊಳ್ಳುವ ಬೋಟ್‌ಗಳಿಗೆ ಕಡ್ಡಾಯಗೊಳಿಸಲಾಗಿದೆ. ಈಗ ಇರುವ ಬೋಟ್‌ಗಳಲ್ಲಿ ಬಯೋ ಟಾಯ್ಲೆಟ್‌ ರಚಿಸುವವರಿಗೆ ಸಹಾಯಧನ ನೀಡ ಲಾಗುತ್ತಿದೆ.

Advertisement

ಒಂದು ಬಯೋ ಟಾಯ್ಲೆಟ್‌ ನಿರ್ಮಾಣಕ್ಕೆ 50 ಸಾವಿರ ರೂ. ಘಟಕ ವೆಚ್ಚ ನಿಗದಿಪಡಿಸಲಾಗಿದ್ದು, ಸಾಮಾನ್ಯ ವರ್ಗ ದವರಿಗೆ ಶೇ. 40, ಎಸ್‌.ಸಿ., ಎಸ್‌.ಟಿ. ಮತ್ತು ಮಹಿಳೆಯರಿಗೆ ಶೇ. 60 ಸಹಾಯಧನ ದೊರೆಯುತ್ತದೆ. ಆದರೆ ಪ್ರಸ್ತುತ ಇರುವ ಯಾಂತ್ರೀಕೃತ ಮೀನುಗಾರಿಕೆ ಬೋಟ್‌ಗಳಲ್ಲಿ ಬಯೋ ಟಾಯ್ಲೆಟ್‌ ಅಳವಡಿಸಲು ಜಾಗದ ಸಮಸ್ಯೆ ಇದೆ ಎಂಬುದು ಕೆಲವು ಬೋಟ್‌ ಮಾಲಕರ ಅಭಿಪ್ರಾಯ.

ಶೌಚಾಲಯ ಅಗತ್ಯ
ಆಳಸಮುದ್ರಕ್ಕೆ ಹೋಗುವ ಬೋಟ್‌ಗಳಲ್ಲಿ ಶೌಚಾಲಯದ ಅಗತ್ಯವಿದೆ. ಈ ಬಗ್ಗೆ ಮೀನುಗಾರರಲ್ಲಿಯೂ ಜಾಗೃತಿ ಮೂಡುತ್ತಿದೆ. ಆದರೆ ಈಗ ಇರುವ ಹಳೆ ಬೋಟ್‌ಗಳಲ್ಲಿ ಇದನ್ನು ಅಳವಡಿಸುವುದು ಸ್ವಲ್ಪ ಕಷ್ಟ. ಹೊಸ ಬೋಟ್‌ಗಳಲ್ಲಿ ಸಮಸ್ಯೆಯಾಗದು. ಬಯೋ ಟಾಯ್ಲೆಟ್‌ ಬಗ್ಗೆ ಹೆಚ್ಚಿನ ಜಾಗೃತಿ ಮೂಡಬೇಕಾಗಿದೆ ಎನ್ನುತ್ತಾರೆ ಮೀನು ಗಾರರಾದ ನವೀನ್‌ ಬಂಗೇರ, ಮೋಹನ್‌ ಬೆಂಗ್ರೆ ಮತ್ತು ಪ್ರಕಾಶ್‌ ಬಂಗೇರ ಅವರು.

ಸ್ವಚ್ಛತೆ, ಆರೋಗ್ಯ ಮತ್ತು ಮೀನುಗಾರರ ಸುರಕ್ಷೆಯ ದೃಷ್ಟಿಯಿಂದ ಬೋಟ್‌ಗಳಲ್ಲಿ ಶೌಚಾಲಯ ಅಗತ್ಯ. ಎಲ್ಲ ಯಾಂತ್ರೀಕೃತ ಬೋಟ್‌ಗಳಲ್ಲಿ ಬಯೋ ಟಾಯ್ಲೆಟ್‌ ರಚನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಹೊಸ ಬೋಟ್‌ಗಳಲ್ಲಿ ಇದನ್ನು ಕಡ್ಡಾಯಗೊಳಿಸಲಾಗಿದೆ. ಹಳೆಯ ಬೋಟ್‌ಗಳಿಗೂ ಶೌಚಾಲಯ ಅಳವಡಿಕೆಗೆ ಸೂಕ್ತ ವಿನ್ಯಾಸ, ಫ್ಯಾಬ್ರಿಕೇಟರ್‌ಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಸರಕಾರದಿಂದ ಅಗತ್ಯ ಸಹಾಯಧನ ಕೂಡ ದೊರೆಯುತ್ತದೆ.
– ಹರೀಶ್‌ ಕುಮಾರ್‌, ಗಣೇಶ್‌ ಕೆ.
ಜಂಟಿ ನಿರ್ದೇಶಕರು, ಮೀನುಗಾರಿಕಾ ಇಲಾಖೆ ಮಂಗಳೂರು, ಉಡುಪಿ

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next