Advertisement

ಗುತ್ತಿಗೆ ಪೌರಕಾರ್ಮಿಕರಿಗೆ ಬಯೋ ಮೆಟ್ರಿಕ್‌ 

12:40 PM Jun 10, 2017 | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವತ್ಛತಾ ಕಾರ್ಯ ನಡೆಸುತ್ತಿರುವ ಕಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರ ಹಾಜರಾತಿಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ನಗರದ ಪ್ರತಿಯೊಂದು ಮಸ್ಟರಿಂಗ್‌ ಸೆಂಟರ್‌ನಲ್ಲಿ ಬೆರಳಚ್ಚು (ಬಯೋ ಮೆಟ್ರಿಕ್‌) ಯಂತ್ರ ಅಳವಡಿಕೆಗೆ ಬಿಬಿಎಂಪಿ ಮುಂದಾಗಿದೆ. 

Advertisement

ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸುವ ಉದ್ದೇಶದಿಂದ ಮತ್ತು ಕಾರ್ಮಿಕರಿಗೆ ಬಿಸಿಯೂಟ ಯೋಜನೆ ಜಾರಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿನ ಪೌರಕಾರ್ಮಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದಕ್ಕೆ ಪೂರಕವೆಂಬಂತೆ ಯೋಜನೆಗಳ ಘೋಷಣೆಗೆ ಮೊದಲು ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ 23 ಸಾವಿರ ಪೌರಕಾರ್ಮಿಕರ ಸಂಖ್ಯೆ ಏಕಾಏಕಿ 32 ಸಾವಿರಕ್ಕೇರಿದೆ. 

ಇದರೊಂದಿಗೆ ಪೌರಕಾರ್ಮಿಕರು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದಿದ್ದರೂ ನಕಲಿ ಹಾಜರಾತಿ ಮೂಲಕ ಪಾಲಿಕೆಗೆ ವಂಚನೆ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಆದರ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲು ಮುಂದಾಗಿರುವ ಪಾಲಿಕೆಯ ಅಧಿಕಾರಿಗಳು ಬಯೋ ಮೆಟ್ರಿಕ್‌ ಯಂತ್ರಗಳನ್ನು ಬಳಸುವ ಮೂಲಕ ಅಕ್ರಮಗಳಿಗೆ ಕಡಿವಾಣ ಹಾಕಲು ತೀರ್ಮಾನಿಸಿದ್ದಾರೆ.

ಈಗಾಗಲೇ ಉಪ ವಲಯವಾರು ಪೌರಕಾರ್ಮಿಕರ ಸಂಪೂರ್ಣ ಮಾಹಿತಿ ಕಲೆ ಹಾಕುವ ಕಾರ್ಯ ಆರಂಭವಾಗಿದೆ. ಆ ಮೂಲಕ ಪೌರಕಾರ್ಮಿಕರ ಆಧಾರ್‌ ಗುರುತಿನ ಚೀಟಿಯಲ್ಲಿನ ವಿವರಗಳನ್ನು ಬಯೋ ಮೆಟ್ರಿಕ್‌ಗೆ ಅಳವಡಿಸಲಾಗುತ್ತದೆ. ಪೌರಕಾರ್ಮಿಕರು ಪ್ರತಿದಿನ ಬೆಳಗ್ಗೆ ಯಂತ್ರದಲ್ಲಿ ತಮ್ಮ ತಂಬ್‌ ಇಂಪ್ರಷನ್‌ ಮಾಡಿದಾಗ ಅವರ ಭಾವಚಿತ್ರ ಮೂಡಲಿದೆ. ಆ ಮೂಲಕ ಪೌರಕಾರ್ಮಿಕರ ಸಂಖ್ಯೆ ಹಾಗೂ ಹಾಜರಾತಿಯಲ್ಲಿ ಪಾರದರ್ಶಕತೆ ಮೂಡುತ್ತದೆ ಎಂಬುದು ಪಾಲಿಕೆ ಅಧಿಕಾರಿಗಳ ಅಭಿಪ್ರಾಯ. 
ಪತ್ತೆಯಾಗಲಿವೆ ನಕಲಿ ಅಂಕಿ-ಅಂಶಗಳು!

ಪಾಲಿಕೆಯ ದಾಖಲೆಗಳಲ್ಲಿರುವ ಗುತ್ತಿಗೆ ಪೌರಕಾರ್ಮಿಕರ ಸಂಖ್ಯೆ ಹಾಗೂ ವಾಸ್ತವದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಸಂಖ್ಯೆಯಲ್ಲಿ ವ್ಯತ್ಯಾಸಗಳಿರುವ ಬಗ್ಗೆ ಮೊದಲಿನಿಂದಲೂ ಆರೋಪಗಳಿವೆ. ಇದರೊಂದಿಗೆ ಈ ಹಿಂದೆ ಸಫಾಯಿ ಕಾರ್ಮಚಾರಿಗಳ ಆಯೋಗದ ಅಧ್ಯಕ್ಷರಾಗಿದ್ದ ನಾರಾಯಣ್‌ ಅವರು ಬಿಬಿಎಂಪಿಯಲ್ಲಿ ಕೇವಲ 12 ಸಾವಿರ ಗುತ್ತಿಗೆ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, 24 ಸಾವಿರ ಕಾರ್ಮಿಕರಿಗೆ ಪಾಲಿಕೆಯಿಂದ ವೇತನ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. 

Advertisement

ಜತೆಗೆ ಗುತ್ತಿಗೆ ಪೌರಕಾರ್ಮಿಕರಿಗೆ ಇಎಸ್‌ಐ ಮತ್ತು ಪಿಎಫ್ ಸಹ ನೀಡದೆ ವಂಚಿಸಿದ ಪ್ರಕರಣಗಳಿವೆ. ಇದನ್ನು ಸಿಐಡಿ ತನಿಖೆಗೆ ಆದೇಶಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಅವರು ಪತ್ರ ಬರೆದಿದ್ದರು. ಇದರೊಂದಿಗೆ ಇತ್ತೀಚೆಗೆ ಪಾಲಿಕೆಯ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿರುವ ಪೌರಕಾರ್ಮಿಕರ ಪಟ್ಟಿಯಲ್ಲಿಯೂ ಹಲವಾರು ಲೋಪಗಳಿರುವುದು ಕಂಡು ಬಂದಿದೆ. 

ಹಾಜರಾತಿಗೆ ಮಾತ್ರ ಬಿಲ್‌ ಪಾವತಿ!: ಪಾಲಿಕೆಯ ವತಿಯಿಂದ ಜಾರಿಗೊಳಿಸುತ್ತಿರುವ ಆಧಾರ್‌ ಆಧಾರಿತ ಬಯೋ ಮೆಟ್ರಿಕ್‌ ವ್ಯವಸ್ಥೆಯಿಂದ ಗುತ್ತಿಗೆದಾರರು ಪಾಲಿಕೆಗೆ ಮಾಡುವ ವಂಚನೆ ತಪ್ಪಲಿದೆ. ಇದರೊಂದಿಗೆ ಆಟೋ ಟಿಪ್ಪರ್‌ ಚಾಲಕರಿಂದಲೂ ಹಾಜರಾತಿ ಪಡೆಯಲು ತೀರ್ಮಾನಿಸಿದ್ದು, ಪೌರಕಾರ್ಮಿಕರು ಹಾಗೂ ಚಾಲಕರ ಹಾಜರಾತಿಗೆ ಅನುಗುಣವಾಗಿ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲು ಪಾಲಿಕೆ ತೀರ್ಮಾನಿಸಿದೆ. 

600 ಯಂತ್ರಗಳ ಪೂರೈಕೆಗೆ ಟೆಂಡರ್‌: ಪೌರಕಾರ್ಮಿಕರ ಹಾಜರಾತಿಗಾಗಿ 600 ಬಯೋ ಮೆಟ್ರಿಕ್‌ ಯಂತ್ರಗಳ ಪೂರೈಕೆಗೆ ಪಾಲಿಕೆಯಿಂದ ಟೆಂಡರ್‌ ಕರೆಯಲಾಗಿದೆ. ಪಾಲಿಕೆಗೆ ಯಂತ್ರಗಳನ್ನು ಪೂರೈಕೆ ಮಾಡುವಂತಹ ಸಂಸ್ಥೆಯು ಆಯಾ ದಿನ ಹಾಜರಾತಿಯ ಡಿಜಿಟಲ್‌ ಮಾಹಿತಿಯನ್ನು ಪಾಲಿಕೆಯ ಘನತ್ಯಾಜ್ಯ ವಿಭಾಗಕ್ಕೆ ಸಲ್ಲಿಸಬೇಕು. ಜತೆಗೆ ಯಂತ್ರಗಳನ್ನು ಸಂಸ್ಥೆಯೇ 2 ವರ್ಷಗಳ ಕಾಲ ನಿರ್ವಹಣೆ ಮಾಡಬೇಕು.

ಬಿಬಿಎಂಪಿ ವತಿಯಿಂದ ಪೌರಕಾರ್ಮಿಕರಿಗೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಕಾಯಂಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ, ಪಾಲಿಕೆಯಲ್ಲಿರುವ ಪೌರಕಾರ್ಮಿಕರ ಸಂಖ್ಯೆಯಲ್ಲಿ ವ್ಯತ್ಯಾಸಗಳಿವೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಯೋ ಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸುವ ಉದ್ದೇಶದಿಂದ ಟೆಂಡರ್‌ ಆಹ್ವಾನಿಸಲಾಗಿದೆ. 
– ಜಿ.ಪದ್ಮಾವತಿ, ಮೇಯರ್‌

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next