Advertisement
ಬೆರಳಚ್ಚು ಒಂದು ಕಡೆ, ರೇಷನ್ ಇನ್ನೊಂದು ಕಡೆಪಿಲಿಚಂಡಿಕಲ್ಲು ಮುಖ್ಯ ಸೊಸೈಟಿಯಲ್ಲಿ ಬಯೋಮೆಟ್ರಿಕ್ ಯಂತ್ರ ಅಳವಡಿಸಲಾಗಿದ್ದು, ಮದ್ದಡ್ಕದ ಜನರು ಪಿಲಿಚಂಡಿಕಲ್ಲು ಸೊಸೈಟಿಗೆ ಬಂದು, ಬೆರಳಚ್ಚು ನೀಡಿ, ಮತ್ತೆ ಪಡಿತರ ಪಡೆಯಲು ಮದ್ದಡ್ಕ ಸೊಸೈಟಿಗೆ ಹೋಗಬೇಕು. ಪಿಲಿಚಂಡಿ ಕಲ್ಲು ಸೊಸೈಟಿಗೆ ಸಂಬಂಧಿಸಿ 600 ಹಾಗೂ ಮದ್ದಡ್ಕ ಸೊಸೈಟಿಗೆ ಸಂಬಂಧಿಸಿ 390 ಪಡಿತರ ಚೀಟಿಗಳಿವೆ. ತಿಂಗಳಲ್ಲಿ 10 ದಿನ ಮಾತ್ರ ರೇಷನ್ ನೀಡುವ ಕಾರಣ ಜನಜಂಗುಳಿ ಇರುತ್ತದೆ.
ಬಯೋಮೆಟ್ರಿಕ್ ಆದ ಕಾರಣ ಡಾಟಾದಲ್ಲಿ ದಾಖಲಾಗದೆ ರೇಷನ್ ಕೊಡುವಂತಿಲ್ಲ. ಮದ್ದಡ್ಕ ಜನರು ರೇಷನ್‌ಗಾಗಿ ತಮ್ಮ ಬೆರಳಚ್ಚು ನೀಡಲು ಪಿಲಿಚಂಡಿ ಕಲ್ಲು ಸೊಸೈಟಿಗೆ ಹೋದರೆ ಅಲ್ಲಿ ಸರ್ವರ್ ಸಮಸ್ಯೆ. ದಿನವಿಡೀ ಕಾದು ಬರಿಗೈಯಲ್ಲಿ ಮರಳುವ ಸ್ಥಿತಿ. ರೇಷನ್‌ಗಾಗಿ ರಜೆ ಮಾಡಿದರೆ ಅಂದಿನ ಕೂಲಿಯೂ ಹೋಯಿತು, ಮದ್ದಡ್ಕದಿಂದ ಹೋಗಲು ಆಟೋ ಬಾಡಿಗೆಯೂ ಖರ್ಚಾಯಿತು ಎನ್ನುತ್ತಾರೆ ಸ್ಥಳೀಯರು. ಬಯೋಮೆಟ್ರಿಕ್ ರದ್ದು ಮಾಡಲಿ
ಮದ್ದಡ್ಕದ 400 ಪಡಿತರ ಚೀಟಿದಾರರು ಪ್ರತೀ ತಿಂಗಳು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಪಿಲಿಚಂಡಿಕಲ್ಲು ಸೊಸೈಟಿಯಲ್ಲೇ ಅಕ್ಕಿ, ಬೇಳೆ ವಿತರಿಸಿದರೆ ತಕ್ಕಮಟ್ಟಿಗೆ ಅನುಕೂಲವಾಗಬಹುದು. ಬಯೋಮೆಟ್ರಿಕ್‌ನಿಂದ ಗ್ರಾಮೀಣ ಭಾಗದ ಎಲ್ಲೆಡೆ ಸಮಸ್ಯೆಯಾಗುತ್ತಿದೆ. ಸರಕಾರ ಇದನ್ನು ರದ್ದು ಮಾಡಬೇಕು ಎನ್ನುವುದು ಜನರ ಅಭಿಪ್ರಾಯ. ಮದ್ದಡ್ಕ ಅಂಗನವಾಡಿ ಕೇಂದ್ರದಲ್ಲಿ ಅಧಿಕಾರಿಗಳು ಮಕ್ಕಳ ಆಧಾರ್ ಕಾರ್ಡ್ ವಿವರಗಳನ್ನು ಆಂಗ್ಲಭಾಷೆಯಲ್ಲಿ ಎಂಟ್ರಿ ಮಾಡಿದ್ದಾರೆ. ರೇಷನ್ ಕಾರ್ಡ್ ಎಂಟ್ರಿ ಮಾಡಲು ಹೋದಾಗ ಆಂಗ್ಲಭಾಷೆಯಲ್ಲಿ ಇದ್ದದ್ದು ಆಗುವುದಿಲ್ಲ ಎನ್ನುತ್ತಾರೆ. ಆಹಾರ ಇಲಾಖೆಯಲ್ಲಿ ಕೇಳಿದರೆ ಪಂಚಾಯತ್ ನಿಂದ ವಾಸ್ತವ್ಯ ದೃಢೀಕರಣ ಪತ್ರ ಬೇಕು ಎನ್ನುತ್ತಾರೆ. ಅಧಿಕಾರಿಗಳು ಮಾಡಿದ ತಪ್ಪಿನಿಂದ ಜನರು ಅಲ್ಲಿಂದಿಲ್ಲಿಗೆ ಓಡಾಡುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
Related Articles
ಬಯೋಮೆಟ್ರಿಕ್ ಕಡ್ಡಾಯ ಆದ ಮೇಲೆ ಹೊಸ ಬೆರಳಚ್ಚು ಯಂತ್ರ ಖರೀದಿಸಲು ಸೊಸೈಟಿಯಲ್ಲಿ ಹಣದ ಕೊರತೆ ಇತ್ತು. ಅದಕ್ಕಾಗಿ ತಾತ್ಕಾಲಿಕವಾಗಿ ಬೇರೆ ಯಂತ್ರ ಉಪಯೋಗಿಸುತ್ತಿದ್ದೇವೆ. ಹೊಸ ಯಂತ್ರ ಖರೀದಿಸುವ ಸಾಮರ್ಥ್ಯ ಸದ್ಯಕ್ಕಿಲ್ಲ. ಸೊಸೈಟಿಯಿಂದ ಯಾವುದೇ ಲಾಭ ಇಲ್ಲ. ಸಿಬಂದಿ ವೇತನ ಕೊಡಬೇಕು. ಪಿಲಿಚಂಡಿ ಕಲ್ಲಿನಲ್ಲಿಯೇ ಎಲ್ಲರಿಗೂ ವಿತರಿಸಲು ಗೋದಾಮು ಸಮಸ್ಯೆ ಇದೆ. ಅದಕ್ಕಾಗಿ ಮದ್ದಡ್ಕ ಸೊಸೈಟಿಯಲ್ಲಿ ವಿತರಿಸಲಾಗುತ್ತಿದೆ. ಸರಕಾರವೇ ಉಚಿತ ಬಯೋಮೆಟ್ರಿಕ್ ಯಂತ್ರ ನೀಡಿದರೆ ಉತ್ತಮ.
– ರಾಜಶ್ರೀ ರಮಣ, ಅಧ್ಯಕ್ಷೆ, ಮಹಿಳಾ ವಿವಿಧೋದ್ದೇಶ ಸೊಸೈಟಿ, ಗುರುವಾಯನಕೆರೆ
Advertisement
ಕಷ್ಟವಾಗುತ್ತಿದೆಸೊಸೈಟಿ ನಡೆಸಲು ತುಂಬಾ ಕಷ್ಟವಾಗುತ್ತಿದೆ. ಆಸಕ್ತರು ಮುನ್ನಡೆಸಬಹುದು. ಜಿಲ್ಲಾಧಿಕಾರಿಗೂ ಪತ್ರ ಬರೆದಿದ್ದೇವೆ. ಜನರೂ ಸ್ಪಂದಿಸುತ್ತಿಲ್ಲ, ನಮ್ಮ ಸೊಸೈಟಿಗೆ ಆದಾಯ ಬರುವ ಹಾಗೆ ಸಹಕರಿಸುತ್ತಿಲ್ಲ. ಸರಕಾರದಿಂದ ಸಿಗುವ ವಸ್ತುಗಳನ್ನು ಬಿಟ್ಟರೆ ಬೇರೆ ಯಾವುದೇ ವಸ್ತು ಖರೀದಿಸುವುದಿಲ್ಲ. ನಡೆಸುವವರಿದ್ದರೆ ಅವರ ಹೆಸರಲ್ಲೇ ಲೈಸೆನ್ಸ್ ಮಾಡಿಕೊಡುತ್ತೇವೆ.
– ಸಜೀತಾ ಬಂಗೇರ, ಸ್ಥಾಪಕ ಅಧ್ಯಕ್ಷೆ ಪರಿಹಾರ ಕಲ್ಪಿಸಿ
ಮದ್ದಡ್ಕ ವ್ಯಾಪ್ತಿಯ ಜನರು ರೇಷನ್‌ಗೆ ಬೆರಳಚ್ಚು ನೀಡಲು ಪಿಲಿಚಂಡಿಕಲ್ಲು ಕೇಂದ್ರಕ್ಕೆ ಹೋಗಿ ಬರಬೇಕು. ಅವತ್ತೇ ಅಕ್ಕಿ ಸಿಗುತ್ತದೆ ಎಂದು ಆಟೋದಲ್ಲಿ ಹೋಗುತ್ತಾರೆ. ತಾಂತ್ರಿಕ ದೋಷದಿಂದಾಗಿ ಬೆರಳಚ್ಚು ನೀಡಲು ಆಗದಿದ್ದರೆ ದಿನ ವ್ಯರ್ಥವಾಗುತ್ತದೆ. ಉಚಿತವಾಗಿ ಸಿಗುವ ಅಕ್ಕಿ, ಬೇಳೆಗೆ ನೂರಾರು ರೂಪಾಯಿ ಖರ್ಚು ಮಾಡಬೇಕಾಗುತ್ತಿದೆ. ಮದ್ದಡ್ಕ ಸೊಸೈಟಿಗೂ ಬಯೋಮೆಟ್ರಿಕ್ ಯಂತ್ರ ಅಳವಡಿಕೆಯಾಗಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೆ ಸಮಸ್ಯೆ ಬಗೆಹರಿಯಬಹುದು.
-ಶಿವರಾಮ ಶೆಟ್ಟಿ, ಮದ್ದಡ್ಕ, ಸ್ಥಳೀಯರು — ಪ್ರಮೋದ್ ಬಳ್ಳಮಂಜ