Advertisement

ಅಂದುಕೊಂಡಂತಾದರೆ ಘನತ್ಯಾಜ್ಯದಿಂದ ಬಯೋಗ್ಯಾಸ್‌ ಉತ್ಪಾದನೆ

11:51 PM Feb 16, 2021 | Team Udayavani |

ಪುತ್ತೂರು: ಘನ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆಗೈದು ಪೆಟ್ರೋಲಿಯಂ ಅನಿಲಕ್ಕೆ ಪರ್ಯಾಯವಾಗಿ ಬಯೋ ಗ್ಯಾಸ್‌ ಉತ್ಪಾದಿಸುವ ಮೆಗಾ ಯೋಜನೆ ಯೊಂದನ್ನು ಪುತ್ತೂರು ನಗರದಲ್ಲಿ ಅನು ಷ್ಠಾನಗೊಳಿಸಲು ಸಿದ್ಧತೆ ನಡೆದಿದೆ.

Advertisement

ನಗರದ ಘನತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ರೋಟರಿ ಕ್ಲಬ್‌ ಪುತ್ತೂರು ಪೂರ್ವ ನೇತೃತ್ವದಲ್ಲಿ ಬೆಂಗಳೂರಿನ ಸೈನೋಡ್‌ ಬಯೋಸಯನ್ಸ್‌ ಕಂಪೆನಿ ಸಲಹೆಯಡಿ ನಗರಸಭೆಗೆ ಸೇರಿದ ಬನ್ನೂರು ಡಂಪಿಂಗ್‌ ಯಾರ್ಡ್‌ ನಲ್ಲಿ ಕಾರ್ಯಗತಗೊಳಿಸುವ ಪ್ರಸ್ತಾವಕ್ಕೆ ನಗರಸಭೆ ಕೌನ್ಸಿಲ್‌ ಒಪ್ಪಿಗೆ ನೀಡಿದ್ದು ಅನುಮೋದನೆಗಾಗಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಕಳುಹಿಸಿದೆ.

4.15 ಕೋ.ರೂ.ವೆಚ್ಚ
ಸುಮಾರು 4.15 ಕೋ.ರೂ. ವೆಚ್ಚದ ಯೋಜನೆ ಇದಾಗಿದೆ. ರೋಟರಿ ಸಂಸ್ಥೆ ಪೂರ್ಣ ಬಂಡವಾಳ ಹೂಡಲಿದೆ. ನಗರಸಭೆಯು ಡಂಪಿಂಗ್‌ ಯಾರ್ಡ್‌ನಲ್ಲಿ 2 ಎಕ್ರೆ ಜಾಗ, ದಿನಂಪ್ರತಿ 20 ಟನ್‌ನಷ್ಟು ಹಸಿ ತ್ಯಾಜ್ಯ ನಿರ್ವಹಣೆ ಜವಾಬ್ದಾರಿ ವಹಿಸಬೇಕಿದೆ. ಮುಂದಿನ 15 ವರ್ಷಗಳ ಕಾಲ ಯೋಜನೆಗೆ ಜಾಗ ಬಳಸಿಕೊಳ್ಳುವ ಬಗ್ಗೆ ರೋಟರಿ ಸಂಸ್ಥೆಯೊಂದಿಗೆ ನಗರಸಭೆ ಕರಾರು ಒಪ್ಪಂದ ಮಾಡಿಕೊಳ್ಳಬೇಕಿದೆ. ಅವಧಿ ಮುಗಿದ ಬಳಿಕ ಒಪ್ಪಂದ ನವೀಕರಣ ನಡೆಯಲಿದೆ. ಇದಕ್ಕೆ ಪ್ರತಿಫಲವಾಗಿ ನಿರ್ವಹಣೆ ಸಂಸ್ಥೆ ಜೈವಿಕ ಅನಿಲದ ಪ್ರಮಾಣ ಆಧರಿಸಿ ರಾಜಧನವನ್ನು ನಗರಸಭೆಗೆ ಪಾವತಿಸಲಿದೆ.

ಏನಿದು ಬಯೋಗ್ಯಾಸ್‌ ಪ್ಲಾಂಟ್‌?
ಕರ್ನಾಟಕ ರಾಜ್ಯದಲ್ಲಿ ದೊಡ್ಡಬಳ್ಳಾಪುರದಲ್ಲಿ ಬಯೋಗ್ಯಾಸ್‌ ಉತ್ಪಾದನಾ ಘಟಕವಿದೆ. ಎಲ್ಲವು ನಿರೀಕ್ಷೆಯಂತೆ ಸಾಗಿದರೆ ರಾಜ್ಯದ ಎರಡನೆ ಘಟಕ ಪುತ್ತೂರಿನಲ್ಲಿ ತಲೆ ಎತ್ತಲಿದೆ. ಮೊದಲಿಗೆ ಘನತ್ಯಾಜ್ಯದಿಂದ ಬಯೋಗ್ಯಾಸ್‌ ಉತ್ಪಾದಿಸಿ ಅದನ್ನು ಇಂಧನವಾಗಿ ಬಳಸುವುದು ಇಲ್ಲಿನ ಉದ್ದೇಶ.

ಆಹಾರ ಮತ್ತು ತರಕಾರಿ, ಶೌಚಾಲಯ, ಕೋಳಿ ಮತ್ತು ಮಾಂಸ, ಹಸಿ ಹುಲ್ಲು ತ್ಯಾಜ್ಯವನ್ನು ಸಂಸ್ಕರಿಸಿ ಬಯೋಗ್ಯಾಸ್‌ ಉತ್ಪಾದಿಸಲಾಗುತ್ತದೆ. ಸಂಗ್ರಹಿತ ತ್ಯಾಜ್ಯದಲ್ಲಿ ಹಸಿ ಮತ್ತು ಕೊಳೆಯುವ ತ್ಯಾಜ್ಯ ಬಹುಪಾಲು ಇದ್ದು ಇದನ್ನು ಸೂಕ್ತ ಪ್ರಮಾಣದಲ್ಲಿ ವ್ಯವಸ್ಥೆಗೊಳಿಸಿ ಸಂಕುಚಿತ ಜೈವಿಕ ಅನಿಲ ಉತ್ಪಾದಿಸಲಾಗುತ್ತದೆ. ಬಯೋಗ್ಯಾಸ್‌ ಉತ್ಪಾದನೆಯಿಂದ ಪರಿಸರಕ್ಕೆ ಸೇರುವ ಮಿಥೇನ್‌ ಪ್ರಮಾಣ ಕಡಿಮೆಗೊಳಿಸಲು ಸಾಧ್ಯವಿದೆ. ಬಯೋಗ್ಯಾಸ್‌ ಉತ್ಪಾದನೆ ಸಂದರ್ಭ ಪರಿಸರಕ್ಕೆ ಯಾವುದೇ ರೀತಿಯ ಹಾನಿಕಾರಕ ಪದಾರ್ಥಗಳು ಬಿಡುಗಡೆ ಆಗುವುದಿಲ್ಲ. ಎಲ್ಲ ರೀತಿಯಲ್ಲಿ ಸುರಕ್ಷತೆ ಕ್ರಮವನ್ನು ಅನುಸರಿಸಿ ಅನುಷ್ಠಾನಿಸಲಾಗುವುದು ಎನ್ನುತ್ತಾರೆ ಯೋಜನೆಯ ಸಲಹೆಗಾರ ಡಾ| ರಾಜೇಶ್‌ ಬೆಜ್ಜಂಗಳ.

Advertisement

ನಗರಸಭೆಗೆ ಪ್ರಸ್ತಾವನೆ
ರೋಟರಿ ಕ್ಲಬ್‌ ಪುತ್ತೂರು ಪೂರ್ವ ವೈಜ್ಞಾನಿಕ ಮಾದರಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಯೋಜನೆ ರೂಪಿಸಿ ನಗರಸಭೆಗೆ ಪ್ರಸ್ತಾವನೆ ಕಳುಹಿಸಿದೆ. ಇದಕ್ಕೆ ಕೌನ್ಸಿಲ್‌ ಸಭೆ ಒಪ್ಪಿಗೆ ನೀಡಿ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ ಕಳುಹಿಸಲಿದೆ.
-ಜೀವಂಧರ್‌ ಜೈನ್‌, ಅಧ್ಯಕ್ಷರು, ಪುತ್ತೂರು ನಗರಸಭೆ

ಲಾಭಗಳೇನು?
ಇದು ಪರಿಸರ ಸ್ನೇಹಿ ಯೋಜನೆ. ಜತಗೆ ಇಂಧನ ವಲಯಕ್ಕೆ ಮಹತ್ವದ ಕೊಡುಗೆ ನೀಡಲಿದೆ. ಇಲ್ಲಿ ಉತ್ಪಾದಿತ ಗ್ಯಾಸ್‌ ಅನ್ನು ವಾಹನಗಳಿಗೆ, ವಾಣಿಜ್ಯ ಆಧಾರಿತವಾಗಿ ಬಳಸುವ ಸಿಲಿಂಡರ್‌ಗಳಿಗೆ ಪರ್ಯಾಯವಾಗಿ ಬಳಸಲು ಸಾಧ್ಯವಿದೆ. ಈಗಿನ ಸಿಲಿಂಡರ್‌ ಗ್ಯಾಸ್‌ಗಳಿಗೆ ಹೋಲಿಸಿದರೆ ಇದರ ದರವು ಕಡಿಮೆ. ಬಯೋಗ್ಯಾಸ್‌ ಉತ್ಪಾದನೆ ವೇಳೆ ದೊರೆಯುವ ಉಪ ಉತ್ಪನ್ನ ಜೈವಿಕ ಗೊಬ್ಬರ ರಾಸಾಯನಿಕ ರಹಿತವಾಗಿದ್ದು, ಇದನ್ನು ತರಕಾರಿ, ಹಣ್ಣಿನ ಬೆಳೆಗಳಿಗೆ ಗೊಬ್ಬರವಾಗಿ ಬಳಸಿದರೆ ಸಾವಯವ ಸಹಿತ ಉತ್ಪನ್ನಗಳು ದೊರೆಯಲು ಸಾಧ್ಯವಿದೆ ಎನ್ನುತ್ತಾರೆ ಯೋಜನೆಯ ರೂವಾರಿ ರೋಟರಿ ಕ್ಲಬ್‌ ಪುತ್ತೂರು ಪೂರ್ವ ಅಧ್ಯಕ್ಷ ಕೃಷ್ಣ ನಾರಾಯಣ ಮುಳಿಯ.

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next