Advertisement

Gadaga: ಟೊಮಾಟೋ ಬೆಳೆದು ಬಂಪರ್‌ ಲಾಭ ತೆಗೆದ ಬಿಂಕದಕಟ್ಟಿ ರೈತ

06:43 PM Aug 08, 2023 | Team Udayavani |

ಗದಗ: ಕಳೆದ 27 ವರ್ಷಗಳ ನಿರಂತರ ಶ್ರಮಕ್ಕೆ ಭೂಮಿ ತಾಯಿ ಒಲಿದಿದ್ದು, ಟೊಮ್ಯಾಟೋ ಬೆಳೆದ ಜಿಲ್ಲೆಯ ರೈತರೊಬ್ಬರು ಕಳೆದ 20 ದಿನಗಳಲ್ಲೇ 8 ಲಕ್ಷ ರೂ. ನಿವ್ವಳ ಲಾಭ ಪಡೆಯುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

Advertisement

20 ದಿನಗಳ ಹಿಂದೆ ಟೊಮ್ಯಾಟೋ ಕಟಾವು ಆರಂಭಿಸಿರುವ ಬಿಂಕದಕಟ್ಟಿ ಗ್ರಾಮದ ರೈತ ಬಸನಗೌಡ ತಿಮ್ಮನಗೌಡ್ರ ಅವರಯ ದಿನಂಪ್ರತಿ 40ರಿಂದ 50 ಕ್ರೇಟ್‌ ಟೊಮಾಟೋ ಉತ್ಪಾದನೆ ಮಾಡುತ್ತಿದ್ದು, ಪ್ರತಿ ಕ್ರೇಟ್‌ ಟೊಮಾಟೋಗೆ 1,700-1,800 ರೂ. ಗೆ ಮಾರಾಟ ಮಾಡುತ್ತಿದ್ದಾರೆ. ಅಂದರೆ ಪ್ರತಿದಿನ ಸರಾಸರಿ 68,000-72,000 ರೂ. ಸಂಪಾದನೆ ತೆಗೆಯುತ್ತಿದ್ದಾರೆ.

ತಾವು ಬೆಳೆದ ಟೊಮ್ಯಾಟೋ ಬೆಳೆಯನ್ನು ಎಪಿಎಂಸಿಯಲ್ಲಿ ಮಧ್ಯವರ್ತಿಗಳ, ದಲಾಲರ ಹಾಗೂ ಹಮಾಲರ ನೆರವಿಲ್ಲದೇ ನೇರವಾಗಿ ಮಾರಾಟ ಮಾಡುತ್ತ ಬಂದಿರುವ ರೈತ ತಿಮ್ಮನಗೌಡ್ರ ಅವರು ಕಮಿಶನ್‌ನಲ್ಲೂ ಲಾಭಾಂಶ ಪಡೆಯುವ ಮೂಲಕ ಬಂಪರ್‌ ಬೆಳೆಗೆ ಬಂಪರ್‌ ಬೆಲೆ ಪಡೆಯುತ್ತ ಸಾಗಿದ್ದಾರೆ.

ಮೂಲತಃ ಸಣ್ಣ ರೈತ ಕುಟುಂಬದಿಂದ ಬಂದಿರುವ ಬಸನಗೌಡ ತಿಮ್ಮನಗೌಡ್ರ ಅವರು 1996ರಿಂದ ತಮ್ಮ 2 ಎಕರೆ ಪ್ರದೇಶದಲ್ಲಿ
ನಿರಂತರವಾಗಿ ಟೊಮಾಟೋ ಬೆಳೆಯುತ್ತಲೇ ಬಂದಿದ್ದಾರೆ. ಆರಂಭದಲ್ಲಿ ಟ್ಯಾಂಕರ್‌ ಮೂಲಕ ನೀರು ಹರಿಸಿ, ನಂತರ ಬೋರ್‌ವೆಲ್‌ ಹಾಕಿಸಿ ನೀರು ಹರಿಸಿದ್ದಾರೆ. ಆರಂಭದಲ್ಲಿ ಟೊಮ್ಯಾಟೋಗೆ ಉತ್ತಮ ಲಾಭ ಪಡೆದಿದ್ದ ಅವರು ಕಳೆದ ಐದಾರು ವರ್ಷಗಳಿಂದ ಟೊಮಾಟೋ ಬೆಳೆಗೆ ಹೆಚ್ಚಿನ ದರ ಇರದ ಕಾರಣ ನಷ್ಟ ಅನುಭವಿಸಿದ್ದರು.

ಪ್ರಸ್ತುತ 1.5 ಎಕರೆ ಪ್ರದೇಶದಲ್ಲಿ ಟೊಮ್ಯಾಟೋ ಬೆಳೆದ ರೈತ ತಿಮ್ಮನಗೌಡ್ರ ಅವರು ಕೂಲಿ ಆಳುಗಳ ನೆರವಿಲ್ಲದೇ ತಮ್ಮ ಇಬ್ಬರು ಮಕ್ಕಳೊಂದಿಗೆ ನಾಟಿ, ಬದು ನಿರ್ಮಾಣ ಸೇರಿ ದಾರ ಕಟ್ಟುವುದು, ಕಳೆ ತೆಗೆಯುವ ಕೆಲಸ ಮಾಡಿದ್ದಾರೆ. ಕಟಾವಿನ ಸಂದರ್ಭದಲ್ಲಿ ಮಾತ್ರ ಕೂಲಿ ಆಳುಗಳ ನೆರವು ಪಡೆಯುತ್ತಿದ್ದಾರೆ. ಅಂದಾಜು 1 ಲಕ್ಷ ರೂ. ಖರ್ಚು ಮಾಡಿ ಬೆಳೆದ ಟೊಮ್ಯಾಟೋ ಬೆಳೆ ರಕ್ಷಣೆಗೆ ಸಿಸಿ ಕ್ಯಾಮೆರಾ ಅಳವಡಿಸಿರುವ ರೈತ ಬಸನಗೌಡ ತಿಮ್ಮನಗೌಡ್ರ ಅವರು ಇನ್ನು 8ರಿಂದ 10 ಲಕ್ಷ ರೂ. ಆದಾಯದ
ನಿರೀಕ್ಷೆಯಲ್ಲಿದ್ದಾರೆ.

Advertisement

ನನ್ನ 50 ವರ್ಷದ ಕೃಷಿ ಕಾಯಕದಲ್ಲಿ ಟೊಮ್ಯಾಟೋ ಬೆಳೆಗೆ ಇಷ್ಟೊಂದು ಬೆಲೆ ಬಂದಿರಲಿಲ್ಲ. ನಂಬಿದ ಬೆಳೆ ಕೊನೆಗೂ ಕೈ ಹಿಡಿದಿದ್ದು, ಟೊಮಾಟೋ ನನ್ನ ಅದೃಷ್ಟವನ್ನು ಬದಲಾಯಿಸಿದೆ.
ಬಸನಗೌಡ ತಿಮ್ಮಗೌಡ್ರ,
ಟೊಮ್ಯಾಟೋ ಬೆಳೆದ ರೈತ

*ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next