Advertisement
ಹಣೆಗೆ ಬೊಟ್ಟು ಅಥವಾ ಬಿಂದಿ ಇಟ್ಟರೆ ಉಟ್ಟ ಉಡುಗೆಗೆ ಹೊಸ ಮೆರುಗು ಬರುವುದಲ್ಲದೆ, ಮುಖಕ್ಕೆ ಒಂದು ಕಳೆಯೂ ಬರುತ್ತದೆ. ಹಣೆಬೊಟ್ಟನ್ನು ಹೆಚ್ಚಾಗಿ ಸಾಂಪ್ರದಾಯಕ ದಿರಿಸಿನೊಂದಿಗೆ ಹಾಕಿಕೊಳ್ಳಲಾಗುತ್ತದೆ. ಆದರೀಗ ಜೀನ್ಸ್ ಮೇಲೆ ಕುರ್ತಾ ತೊಟ್ಟು, ಹಣೆಗೆ ಮುದ್ದಾದ ಬಿಂದಿ ಹಾಕಿಕೊಳ್ಳಲು ಹುಡುಗಿಯರು ಇಷ್ಟಪಡುತ್ತಾರೆ. ಮೈಲೀ ಸೈರಸ್, ಅಲಿಸಿ ಯಾಕೀಸ್, ಗ್ವೆನ್ ಸ್ಟೆಫಾನಿ, ಕೇಟಿಪೆರ್ರಿ ಮುಂತಾದ ಇಂಗ್ಲಿಷ್ ಗಾಯಕಿಯರು ಭಾರತದ ಸಂಪ್ರದಾಯ, ಸಂಸ್ಕೃತಿ ಮತ್ತು ಕಲೆಯಿಂದ ಪ್ರೇರಣೆ ಪಡೆದು ಹಲವು ಸಂದರ್ಭ ಗಳಲ್ಲಿ ಹಣೆಬೊಟ್ಟನ್ನು ತೊಟ್ಟಿದ್ದಾರೆ.
ಬಿಂದಿಯಲ್ಲಿ ಬಗೆಬಗೆಯ ಪ್ರಕಾರಗಳಿವೆ. ದೊಡ್ಡಬೊಟ್ಟು, ಚಿಕ್ಕಬೊಟ್ಟು, ಉದ್ದಬೊಟ್ಟು, ನಾಮದಂಥ ಬೊಟ್ಟು, ಡಿಸೈನರ್ ಬೊಟ್ಟು ಇತ್ಯಾದಿ. ಮುಖದ ಆಕಾರಕ್ಕೆ ಹೋಲುವಂತೆ ಬೊಟ್ಟು ಇಟ್ಟುಕೊಂಡರೆ ಚೆಂದ. ಯಾಕೆಂದರೆ ಕೆಲವು ಬಗೆಯ ಬೊಟ್ಟು, ಕೆಲವು ಮುಖಕ್ಕೆ ಮಾತ್ರ ಒಪ್ಪುತ್ತದೆ. ಹಾರ್ಟ್ ಶೇಪ್: ಹೃದಯಾಕಾರದ ಮುಖದವರಿಗೆ ಅಗಲವಾದ ಹಣೆ, ದೊಡ್ಡಕೆನ್ನೆಗಳು ಮತ್ತು ಕಿರಿದಾದ ಗಲ್ಲ ಇರುತ್ತದೆ. ಹಿಂದಿ ಚಿತ್ರ ನಟಿಯರಾದ ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಹೃದಯಾಕಾರದ ಮುಖ ಹೊಂದಿ¨ªಾರೆ. ಈ ಆಕಾರದ ಮುಖ ಉಳ್ಳವರು ದೊಡ್ಡ ಬೊಟ್ಟು ಇಟ್ಟರೆ, ಹಣೆ ಇನ್ನಷ್ಟು ದೊಡ್ಡದಾಗಿ ಕಾಣುತ್ತದೆ. ಆದ್ದರಿಂದ ಇಂಥವರು ಚಿಕ್ಕದಾದ ಬೊಟ್ಟು ಇಟ್ಟುಕೊಳ್ಳಬೇಕು.
Related Articles
Advertisement
ರೌಂಡ್ ಫೇಸ್: ವೃತ್ತಾಕಾರದ ಮುಖದವರು ದೊಡ್ಡ ಬೊಟ್ಟು ಹಾಕುವ ಬದಲಿಗೆ ಉದ್ದದ ಬೊಟ್ಟು ಹಾಕಿಕೊಂಡರೆ ಚೆಂದ. ವೃತ್ತಾಕಾರದ ದೊಡ್ಡಬೊಟ್ಟಿನ ಬದಲಿಗೆ ಉದ್ದನೆಯ ರೇಖೆಗಳಿರುವ ಬೊಟ್ಟು ರೌಂಡ್ ಫೇಸ್‌ನ ಅಂದ ಹೆಚ್ಚಿಸುತ್ತದೆ. ವಿದ್ಯಾಬಾಲನ್, ಐಶ್ವರ್ಯಾ ರೈ ಬಚ್ಚನ್, ರಾಣಿ ಮುಖರ್ಜಿ ಉದ್ದಬೊಟ್ಟಿಗೆ ಮಾರುಹೋಗಿದ್ದಾರೆ.
ಸಮಚತುಷ್ಯಕೋನಾಕೃತಿ: ಕಿರಿದಾದ ಹಣೆ, ಅಗಲವಾದ ಕೆನ್ನೆ ಮತ್ತು ಗಲ್ಲ ಉಳ್ಳವರು ರೆಕ್ಟ್ಆ್ಯಂಗುಲರ್ (ಸಮಚತುಷ್ಯಕೋನಾಕೃತಿ)ಆಕಾರದ ಮುಖ ಹೊಂದಿರುತ್ತಾರೆ. ಉದಾಹರಣೆಗೆ ಹಿಂದಿ ನಟಿ ಬಿಪಾಶಾ ಬಸು. ಇಂಥ ಮುಖ ಉಳ್ಳವರು ಯಾವ ಆಕಾರದ ಹಣೆಬೊಟ್ಟನ್ನು ಬೇಕಾದರೂ ಹಾಕಿಕೊಳ್ಳಬಹುದು. ಬಗೆಬಗೆಯ ಪ್ರಯೋಗಗಳನ್ನು ಮಾಡಿ ನೋಡಬಹುದು.
ಚೌಕಾಕಾರ: ಇನ್ನು ಉಳಿದಿರುವುದು ಚೌಕಾಕಾರದ ಮುಖಗಳು. ಹಣೆಯಷ್ಟೇ ಅಗಲವಾದ ಕೆನ್ನೆ ಮತ್ತು ಗಲ್ಲ ಇರುವವರು ಚೌಕಾಕಾರದ ಮುಖ ಹೊಂದಿರುತ್ತಾರೆ. ಉದಾಹರಣೆಗೆ ಹಿಂದಿ ನಟಿ ಕರೀನಾ ಕಪೂರ್. ಇಂಥ ಮುಖದ ಮೇಲೆ ಅರ್ಧಚಂದ್ರ ಮತ್ತು ವೃತ್ತಾಕಾರದ ಚಿಕ್ಕ ಬೊಟ್ಟುಗಳು ಬಹಳ ಚೆನ್ನಾಗಿ ಕಾಣಿಸುತ್ತವೆ. ತ್ರಿಕೋನ, ಚೌಕ ಅಥವಾ ಉದ್ದನೆಯ ಬೊಟ್ಟುಗಳು ಅಂದವಾಗಿ ಕಾಣಿಸುವುದಿಲ್ಲ. ನಿಮ್ಮ ಮುಖದ ಆಕಾರ ಯಾವುದು ಎಂಬುದನ್ನು ಕನ್ನಡಿ ಮುಂದೆ ನಿಂತು ಗಮನಿಸಿ. ನಂತರ ನಿಮ್ಮ ಮುಖದ ಆಕಾರಕ್ಕೆ ಹೋಲುವ ಹಣೆಬೊಟ್ಟು ತೊಟ್ಟು ಮಿಂಚಿ!
ಅದಿತಿಮಾನಸ ಟಿ.ಎಸ್.