ಬೆಳಗಾವಿ: ಬಿಮ್ಸ್ ಕೋವಿಡ್ ವಾರ್ಡ್‌ನಲ್ಲಿಯೇ ಶವ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದನ್ನು ಖಂಡಿಸಿ ಮಂಗಳವಾರ ಶುಶ್ರೂಷಕರು ಬಿಮ್ಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಸ್ಪತ್ರೆ ಎದುರು ಜಮಾಯಿಸಿದ್ದ ಶುಶ್ರೂಷಕರು ಬಿಮ್ಸ್ ಅ ಧಿಕಾರಿಗಳ ವಿರುದ್ಧ ಹರಿಹಾಯ್ದರು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿ ನಮ್ಮನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ. ತಮ್ಮನ್ನು ರಕ್ಷಿಸಿಕೊಳ್ಳಲು ತಳ ಮಟ್ಟದ ಸಿಬ್ಬಂದಿಗಳ ಮೇಲೆ ಆರೋಪ ಹೊರಿಸಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಶುಶ್ರೂಷಕರು, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಿಮ್ಸ್‌ನ ಕೋವಿಡ್ ವಾರ್ಡಿಗೆ ಭೇಟಿ ನೀಡಿದ ವೇಳೆ ಶವವನ್ನು ಅಲ್ಲಿಯೇ ಇರಿಸಲಾಗಿತ್ತು. ವ್ಯಕ್ತಿ ಮೃತಪಟ್ಟಿರುವ ಬಗ್ಗೆ ದೃಢಪಡಿಸಲು ವೈದ್ಯರು ಬರಬೇಕಾಗಿತ್ತು. ಆದರೆ ಆ ವೇಳೆ ವೈದ್ಯರು ನಮಗೆ ಏನೂ ಹೇಳಿರಲಿಲ್ಲ. ಹೀಗಾದಾಗ ಶವವನ್ನು ನಾವು ಬೇರೆ ಕಡೆಗೆ ಸ್ಥಳಾಂತರ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಶವವನ್ನು ಶವಾಗಾರಕ್ಕೆ ಸ್ಥಳಾಂತರಿಸಲು ಅಗತ್ಯ ಉಪಕರಣಗಳು ಬೇಕಾಗುತ್ತವೆ. ಶವ ಪ್ಯಾಕ್ ಮಾಡಲು ಉಪಕರಣಗಳ ಅಗತ್ಯ ಇರುತ್ತದೆ. ಆದರೆ ಸ್ಟೋರ್ ರೂಮ್‌ನಲ್ಲಿ ಸರಿಯಾದ ಉಪಕರಣಗಳು ಇರುವುದಿಲ್ಲ. ಹೀಗಾದರೆ ಶವ ಸಾಗಿಸುವುದಾದರೂ ಹೇಗೆ. ಆಂಬ್ಯುಲೆನ್ಸ್ ಸಿಬ್ಬಂದಿ ಬಂದು ಮೃತದೇಹ ಒಯ್ಯಬೇಕಾಗುತ್ತದೆ. ಆದರೆ ಕೆಲವರು ತಮ್ಮನ್ನು ರಕ್ಷಿಸಿಕೊಳ್ಳಲು ನಮ್ಮ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿದರು. ಹತ್ತು ತಿಂಗಳುಗಳಿಂದ ಬಿಮ್ಸ್‌ನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ದಿನದ 16 ಗಂಟೆಗಳ ಕಾಲ ಶ್ರಮ ವಹಿಸಿ ದುಡಿಯುತ್ತಿದ್ದೇವೆ. ಕುಟುಂಬದ ಬಗ್ಗೆ ಕಾಳಜಿ ಬಿಟ್ಟು ಸೋಂಕಿತರ ಸೇವೆಯಲ್ಲಿ ತೊಡಗಿದ್ದೇವೆ.
ಜಿಲ್ಲಾ ಸರ್ಜನ್ ಡಾ. ಹುಸೇನಸಾಬ್ ಖಾಜಿ ಅವರು ನಿವೃತ್ತಿ ವೇಳೆ ನಮ್ಮನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ. ಕೂಲಂಕಷವಾಗಿ ವಿಚಾರಣೆ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಆದರೆ ತಪ್ಪೇ ಮಾಡದ ನಮ್ಮಂಥವರಿಗೆ ಈ ರೀತಿ ಶಿಕ್ಷೆ ನೀಡಿರುವುದು ಸರಿಯೇ ಎಂದು ಪ್ರಶ್ನಿಸಿದರು. ಆಸ್ಪತ್ರೆಯಲ್ಲಿ ರೋಗಿಗಳು ಮೃತಪಟ್ಟ ಅರ್ಧ ಗಂಟೆಯಲ್ಲಿ ವೈದ್ಯರು ಬಂದಿರುವ ಉದಾಹರಣೆಗಳು ನಮಗೆ ಕಾಣ ಸಿಕ್ಕಿಲ್ಲ.
ವೈದ್ಯರು ಬಂದು ಹೇಳುವವರೆಗೆ ನಾವು ಶವ ರವಾನೆ ಮಾಡಲು ಬರುವುದಿಲ್ಲ. ಅಂಥ ಅಧಿಕಾರ ನಮ್ಮ ಬಳಿ ಇಲ್ಲ. ಈಗ ಏನೇನೋ ಸುಳ್ಳು ಆರೋಪ ಹೊರಿಸಿ ಬಿಡುಗಡೆಗೊಳಿಸಿರುವುದು ಯಾವ ನ್ಯಾಯ ಎಂದು ಶುಶ್ರೂಷ ಅ ಧೀಕ್ಷಕರಾದ ಕೆ. ಸೂರ್ಯವಂಶಿ, ಹಿರಿಯ ಶುಶ್ರೂಷಧಿಕಾರಿಗಳಾದ ವಿದ್ಯಾವತಿ ಪ್ರಧಾನ, ಸುಜಾತಾ ಬತ್ತುಲಾ ಹಾಗೂ ಶುಶ್ರೂಷಾಧಿಕಾರಿಗಳಾದ ಸವಿತಾ ತಮ್ಮಣ್ಣಾಚೆ, ಸುಶೀಲಾ ಶೆಟ್ಟಿ, ಜಯಲಕ್ಷ್ಮೀ ಪತ್ತಾರ, ಶೆ„ಲಜಾ ಕುಲಕರ್ಣಿ ಆರೋಪಿಸಿದ್ದಾರೆ. ಜೀವವನ್ನು ಪಣಕ್ಕಿಟ್ಟು ಕೋವಿಡ್ ಸೋಂಕಿತರ ಸೇವೆ ಮಾಡುತ್ತಿದ್ದೇವೆ. ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸರಿಪಡಿಸದೇ ನಮಗೆ ಮೆಮೋ, ರಿಲೀವ್ ಆರ್ಡರ್ ಕೊಡುತ್ತಿದ್ದಾರೆ.
ಮೇಲ ಧಿಕಾರಿಗಳ ತಪ್ಪಿಗೆ ನಮಗೆ ಶಿಕ್ಷೆ ಕೊಡುತ್ತಿದ್ದಾರೆ. ಸೂಕ್ತ ನ್ಯಾಯ ನೀಡಬೇಕು ಎಂದು ಆಗ್ರಹಿಸಿದರು.