Advertisement

ಸಂಪೂರ್ಣ ಹದಗೆಟ್ಟ ಬೈಲೂರು-ನೆಲ್ಲಿಕಟ್ಟೆ ರಸ್ತೆ

12:34 AM May 22, 2019 | sudhir |

ಅಜೆಕಾರು: ಬೈಲೂರಿನಿಂದ ನೆಲ್ಲಿಕಟ್ಟೆ ಸಂಪರ್ಕಿಸುವ ಸುಮಾರು 10 ಕಿ.ಮೀ. ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಹೊಂಡಗುಂಡಿಗಳಿಂದ ಕೂಡಿದೆ.

Advertisement

ಬೈಲೂರು, ಎರ್ಲಪಾಡಿ, ಚಿಕ್ಕಲ್ಬೆಟ್ಟು, ನೆಲ್ಲಿಕಟ್ಟೆ ಸಂಪರ್ಕದ ಪ್ರಮುಖ ರಸ್ತೆ ಇದಾಗಿದ್ದು ರಸ್ತೆಯಲ್ಲಿ ನಿರ್ಮಾಣವಾದ ಬೃಹತ್‌ ಹೊಂಡಗಳಿಂದ ವಾಹನ ಸಂಚಾರ ಅಸಾಧ್ಯವಾಗಿದೆ.

ಮೂರು ಪಂಚಾಯತ್‌ ವ್ಯಾಪ್ತಿಯನ್ನು ಸಂಪರ್ಕಿ ಸುವ ರಸ್ತೆ ಇದಾಗಿದ್ದು 1985ರಲ್ಲಿ ಡಾಮಾರು ಭಾಗ್ಯ ಕಂಡಿತ್ತು. ಅನಂತರದ ದಿನಗಳಲ್ಲಿ ತೇಪೆ ಕಾರ್ಯ ಬಿಟ್ಟರೆ ಮರುಡಾಮರೀಕರಣ ಇದುವರೆಗೆ ಕಂಡಿಲ್ಲ.

ಕಳೆದ 3 ವರ್ಷಗಳ ಹಿಂದೆ ತೇಪೆ ಕಾಮಗಾರಿ ನಡೆದಿದ್ದು ಈಗ ರಸ್ತೆಯ ಡಾಮಾರು ಸಂಪೂರ್ಣ ಕಿತ್ತು ಹೋಗಿ ಜಲ್ಲಿಕಲ್ಲುಗಳ ರಾಶಿ ರಸ್ತೆಯಲ್ಲಿ ಬಿದ್ದಿದೆ.

ಬಸ್‌ ಸಂಚಾರ ಸ್ಥಗಿತ!

Advertisement

ಬೈಲೂರು ನೆಲ್ಲಿಕಟ್ಟೆಯಾಗಿ ಕಾರ್ಕಳ ಸಂಪರ್ಕಿಸುವ ಬಸ್ಸುಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು ರಸ್ತೆಯ ಅವ್ಯವಸ್ಥೆಯಿಂದಾಗಿ ಬಸ್‌ ಮಾಲಕರು ಸಂಚಾರ ಸ್ಥಗಿತಗೊಳಿಸುವ ಬಗ್ಗೆ ಚಿಂತನೆಯಲ್ಲಿದ್ದಾರೆ. ಈ ರಸ್ತೆಯ ಮೂಲಕ ಪ್ರತೀನಿತ್ಯ ಎರಡು ಬಸ್ಸುಗಳು 5ರಿಂದ 6 ಬಾರಿ ಸಂಚರಿಸುತ್ತಿದ್ದವು. ಒಂದು ವೇಳೆ ಬಸ್‌ ಸಂಚಾರ ಸ್ಥಗಿತಗೊಂಡಲ್ಲಿ ಈ ಭಾಗದ ವಿದ್ಯಾರ್ಥಿಗಳು ಹಾಗೂ ನಿತ್ಯ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಲಿದ್ದಾರೆ.

ಚಿಕ್ಕಲ್ಬೆಟ್ಟು ಎರ್ಲಪಾಡಿ ಭಾಗದ ವಿದ್ಯಾರ್ಥಿ ಗಳು ಕಾಲೇಜು ಶಿಕ್ಷಣಕ್ಕೆ ಬೈಲೂರು ಅಥವಾ ಕಾರ್ಕಳಕ್ಕೆ ತೆರಳಬೇಕಾಗಿದ್ದು ರಸ್ತೆ ಅವ್ಯವಸ್ಥೆಯಿಂದಾಗಿ ಶಿಕ್ಷಣ ಮೊಟಕುಗೊಳಿಸುವ ಸನ್ನಿವೇಶ ನಿರ್ಮಾಣವಾಗಲಿದೆ.

ಆಟೋ ಚಾಲಕರು ಹಿಂದೇಟು

ರಸ್ತೆಯಲ್ಲಿ ಬೃಹತ್‌ ಹೊಂಡಗಳು ನಿರ್ಮಾಣ ವಾಗಿರುವುದರಿಂದ ಆಟೋ ಚಾಲಕರು ಈ ಭಾಗಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಈ ಪರಿಸರದ ಕೃಷಿಕರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಕೃಷಿಕರು ಬೆಳೆದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕೊಂಡೊಯ್ಯಲು ಹಾಗೂ ಪೇಟೆಯಿಂದ ಗೃಹೋಪಯೋಗಿ ವಸ್ತುಗಳನ್ನು ತರಲು ಸಮಸ್ಯೆ ಉಂಟಾಗಿದೆ.

ಜಿಲ್ಲಾ ಪಂಚಾಯತ್‌ ರಸ್ತೆ

ಈ ರಸ್ತೆಯು ಜಿಲ್ಲಾ ಪಂಚಾಯತ್‌ ರಸ್ತೆಯಾಗಿದ್ದು ಬೈಲೂರು ಜಿಲ್ಲಾ ಪಂಚಾಯತ್‌ ಕ್ಷೇತ್ರ ಹಾಗೂ ಬಜಗೋಳಿ ಜಿಲ್ಲಾ ಪಂಚಾಯತ್‌ ಕ್ಷೇತ್ರದ ವ್ಯಾಪ್ತಿ ಯಲ್ಲಿ ಬರುತ್ತಿದ್ದು ಜನಪ್ರತಿನಿಧಿಗಳು ರಸ್ತೆ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next