ನವದೆಹಲಿ: 2026ರ ವೇಳೆಗೆ ಭಾರತದಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ದುಪ್ಪಟ್ಟಾಗಲಿದೆ ಎಂದು ಕ್ರೆಡಿಟ್ ಸ್ಯೂಸ್ಸೆ ವಾರ್ಷಿಕ ಜಾಗತಿಕ ಸಂಪತ್ತು ವರದಿ-2022 ಅಂದಾಜಿಸಿದೆ.
ವರದಿ ಪ್ರಕಾರ, 2021ರಲ್ಲಿ ಭಾರತದಲ್ಲಿ 7.96 ಲಕ್ಷ ಕೋಟ್ಯಧಿಪತಿಗಳಿದ್ದಾರೆ. 2026ರ ವೇಳೆಗೆ ಈ ಸಂಖ್ಯೆ ಶೇ.105ರಷ್ಟು ಏರಿಕೆಯಾಗಲಿದ್ದು, 16.32 ಲಕ್ಷ ಮಂದಿ ಕೋಟ್ಯಾಧೀಶರಾಗಲಿದ್ದಾರೆ. ಆಫಿಕಾ (ಶೇ.173) ಹಾಗೂ ಬ್ರೆಜಿಲ್(ಶೇ.115) ನಂತರ ಕೋಟ್ಯಧಿಪತಿಗಳ ಸಂಖ್ಯೆ ಏರಿಕೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿರಲಿದೆ ಎಂದು ವರದಿ ಅಂದಾಜಿಸಿದೆ.
ಪ್ರಸ್ತುತ ಅಮೆರಿಕದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯ ಕೋಟ್ಯಧಿಪತಿಗಳಿದ್ದಾರೆ. ನಂತರದ ಸ್ಥಾನದಲ್ಲಿ ಚೀನ ಇದೆ. ವಿಶ್ವದ ಒಟ್ಟು ಕೋಟ್ಯಧಿಪತಿಗಳ ಪೈಕಿ ಭಾರತದಲ್ಲಿ ಶೇ.1ರಷ್ಟು ಮಂದಿ ಇದ್ದಾರೆ.
ವರದಿಯ ಪ್ರಕಾರ, ಜಾಗತಿಕ ಸಂಪತ್ತು ಅಂದಾಜು 463.6 ಟ್ರಿಲಿಯನ್ ಅಮೆರಿಕನ್ ಡಾಲರ್ ಇದೆ. 2020ಕ್ಕೆ ಹೋಲಿಸಿದರೆ ಜಾಗತಿಕ ಸಂಪತ್ತು ಶೇ. 9.8ರಷ್ಟು ಏರಿಕೆಯಾಗಿದೆ. ಕಳೆದ 21 ವರ್ಷಗಳಲ್ಲಿ ಇದು ದಾಖಲೆಯ ಏರಿಕೆ ಕಂಡಿದೆ. ಅಲ್ಲದೇ 2020ಕ್ಕೆ ಹೋಲಿಸಿದರೆ ಸರಾಸರಿ ಜಾಗತಿಕ ಸಂಪತ್ತಿನ ಬೆಳವಣಿಗೆ 2021ರಲ್ಲಿ ಶೇ.12.7ರಷ್ಟಾಗಿದೆ. ಇದು ಈವರೆಗೂ ದಾಖಲಾದ ಅತಿ ವೇಗದ ಬೆಳವಣಿಗೆಯಾಗಿದೆ.
ಇನ್ನೊಂದೆಡೆ, ಸರಾಸರಿ ಸಂಪತ್ತಿನಲ್ಲಿ ಆಸ್ಟ್ರೇಲಿಯನ್ನರು ವಿಶ್ವದ ಶ್ರೀಮಂತ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಬೆಲ್ಜಿಯಂ ಮತ್ತು ನ್ಯೂಜಿಲೆಂಡ್ ಇದೆ.