ನ್ಯೂಯಾರ್ಕ್: “ಮೈಕ್ರೋಸಾಫ್ಟ್ ದಿಗ್ಗಜ’ ಬಿಲ್‌ಗೇಟ್ಸ್ ಈಗ “ಅಮೆರಿಕದ ಅತೀ ದೊಡ್ಡ ರೈತ’!
“ಅರೆ! ಕಂಪ್ಯೂಟರ್ ಲೋಕದೊ ಳಗೇ ಸದಾ ವಿಹರಿಸುವ ಬಿಲ್‌ಗೇಟ್ಸ್‌ಗೂ, ಹೊಲ-ಗದ್ದೆಗಳಿಗೂ ಎತ್ತಣಿಂದೆತ್ತ ಸಂಬಂಧ’ ಎಂಬ ಸಂಶಯವೇ? ಅಚ್ಚರಿ ಹೌದಾದರೂ ಇದು ಸತ್ಯ. “ಸಾಫ್ಟ್ವೇರ್ ಮಾಂತ್ರಿಕ’ ಅಮೆರಿಕದ 18 ರಾಜ್ಯಗಳಲ್ಲಿ ಒಟ್ಟು 2.42 ಲಕ್ಷ ಎಕ್ರೆ ಕೃಷಿಭೂಮಿಯನ್ನು ಖರೀದಿಸಿದ್ದಾರೆ! ಈ ಮೂಲಕ ಅಮೆರಿಕದ ಅತೀ ಹೆಚ್ಚು ಜಮೀನು ಹೊಂದಿರುವ ರೈತ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಎಲ್ಲೆಲ್ಲಿ, ಎಷ್ಟೆಷ್ಟು?: ಲೂಸಿಯಾನಾದಲ್ಲಿ 69 ಸಾವಿರ ಎಕ್ರೆ, ಅರ್ಕಾನ್ಸಸ್‌ನಲ್ಲಿ 48 ಸಾವಿರ ಎಕ್ರೆ, ಅರಿಜೋನಾ ರಾಜ್ಯದಲ್ಲಿ 25 ಸಾವಿರ ಎಕ್ರೆ ಕೃಷಿಭೂಮಿ ಯನ್ನು ಬಿಲ್‌ಗೇಟ್ಸ್ ಪ್ರಧಾನವಾಗಿ ಖರೀದಿಸಿದ್ದಾರೆ. ಇಷ್ಟು ಬೃಹತ್ ಮೊತ್ತದ ಜಮೀನು ಖರೀದಿ ಹಿಂದಿನ ಗುಟ್ಟನ್ನು ಅವರಿನ್ನೂ ಬಹಿರಂಗಪಡಿಸಿಲ್ಲ.
ರೈತರೆಂದರೆ ಪ್ರೀತಿ: ಮೈಕ್ರೋಸಾಫ್ಟ್ ಕಂಪೆನಿಯನ್ನು ಉತ್ತುಂಗಕ್ಕೇರಿಸುತ್ತಲೇ ಬಿಲ್‌ಗೇಟ್ಸ್ ಕೂಡ ಜಗತ್ತಿನ ಟಾಪ್ ಸಿರಿವಂತರ ಸಾಲಿನಲ್ಲಿ ನಿಂತಿದ್ದು ಇತಿಹಾಸ. ಇಷ್ಟು ಅಗಾಧ ಹಣದ ಹೊಳೆ ಹರಿಯುತ್ತಿದ್ದ ದಿನಗಳಲ್ಲಿ “ಬಿಲ್‌ಗೇಟ್ಸ್ ಫೌಂಡೇಶನ್’ ಅನ್ನೂ ಸ್ಥಾಪಿಸಿ, ಆ ಮೂಲಕ ರೈತರಿಗೆ ನೆರವಾಗಿದ್ದರು.
ಆಫ್ರಿಕ ಮತ್ತು ಇತರ ಬಡರಾಷ್ಟ್ರಗಳ ರೈತರ ಅಭಿವೃದ್ಧಿಗಾಗಿ ಫೌಂಡೇಶನ್ ಬರೋಬ್ಬರಿ 2,238 ಕೋಟಿ ರೂ. ದಾನ ಮಾಡಿತ್ತು. ಬಿಲ್‌ಗೇಟ್ಸ್ ಈ ಮೂಲಕ ಸಂಕಷ್ಟದಲ್ಲಿದ್ದ ಬರ ಪೀಡಿತ ದೇಶಗಳ ಸಣ್ಣ ಮತ್ತು ಬಡ ರೈತರ ಕೈಹಿಡಿದಿದ್ದರು. ಇವೆಲ್ಲದರ ನಡುವೆ ಅಮೆರಿಕ ದಲ್ಲಿ ಕೃಷಿ ಭೂಮಿ ಯತ್ತ ಅವರು ಚಿತ್ತನೆಟ್ಟಿದ್ದು 2018 ರಲ್ಲಿ. ತವರು ರಾಜ್ಯ ವಾಷಿಂಗ್ಟನ್ನಿನಲ್ಲಿ ಆ ವರ್ಷ 16 ಸಾವಿರ ಎಕ್ರೆ ಜಮೀನು ಖರೀದಿಸಿ, ಅಲ್ಲಿ ಸಾಕಷ್ಟು ರೈತ ಕುಟುಂಬ ಗಳಿಗೆ ಉದ್ಯೋಗ ಕಲ್ಪಿಸಿದ್ದರು.