Advertisement
ಆ. 26ರಂದು ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀನಾರಾಯಣ ಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಸ್ಥೆಯು ತನ್ನ ಸಂಚಾಲಕತ್ವದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ವತಿಯಿಂದ ವಾರ್ಷಿಕವಾಗಿ ಕೊಡಮಾಡುವ ಜಯ ಸಿ.ಸುವರ್ಣ ಅವರ ಮಾತೃಶ್ರೀ ದಿ| ಅಚ್ಚು ಸಿ.ಸುವರ್ಣ ಸ್ಮರಣಾರ್ಥ 13ನೇ ವಾರ್ಷಿಕ ಯಕ್ಷಗಾನ ಕಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಚಿನ್ನಪ್ಪ ಗೌಡ ಅವರು ಮಾತನಾಡಿದರು.
Related Articles
Advertisement
ಪ್ರಶಸ್ತಿಗೆ ಉತ್ತರಿಸಿ ಎಂ.ಟಿ ಪೂಜಾರಿ ಅವರು, ಕಲೆಯಿಂದ ಒಂದು ಹೊತ್ತಿನ ಊಟದಲ್ಲೂ ಸಂತಸ ಪಟ್ಟವ ನಾನು. ಯಕ್ಷಗಾನದ ಪರಿಕರಗಳ ಪೆಟ್ಟಿಗೆ ಹೊತ್ತು ಅನುಭವವುಳ್ಳವನು. ಇದಕ್ಕೆ ಕಾರಣ ಬಾಲ್ಯದಿಂದಲೇ ಯಕ್ಷಗಾನದ ರುಚಿ ಉಂಡವನಾಗಿದ್ದೇನೆ. ಅಂದಿನ ಆ ಕಲಾ ಭಾವನೆ ನನ್ನನ್ನು ಬೆಳೆಸಿದೆ. ಯಕ್ಷಗಾನ ಎಲ್ಲರಿಗೂ ಹಿಡಿಯುವ ಕಲೆಯಲ್ಲ. ಆದುದರಿಂದ ಪ್ರತಿಷ್ಠೆಗಾಗಿ ಯಕ್ಷಗಾನದ ಸದ್ಬಳಕೆ ಸಲ್ಲದು. ಯಕ್ಷಗಾನದಲ್ಲಿ ಅಭಿರುಚಿ ಇಲ್ಲದವರಿಗೆ ಪೋಷಣೆ ಅಸಾಧ್ಯ. ನಾನು ಎಪ್ಪತ್ತರ ದಶಕದಿಂದಲೇ ಜಯ ಸುವರ್ಣರಲ್ಲಿನ ಯಕ್ಷಗಾನ ಪ್ರೋತ್ಸಾಹಕತೆ ತಿಳಿದಿದ್ದೇನೆ. ಮರಾಠಿ ಮಣ್ಣಿನಲ್ಲಿದ್ದು ಯಕ್ಷಗಾನ ಮಂಡಳಿ ನಡೆಸುವ ಬಿಲ್ಲವರ ಅಸೋಸಿಯೇಶನ್ ಸಾಧ್ಯವಾದಲ್ಲಿ ಮರಾಠಿ ಯಕ್ಷಗಾನ ಪ್ರೋತ್ಸಾಹಿಸಿದರೆ ಒಳಿತು ಎಂದು ತಿಳಿಸಿದರು.
ಎಚ್.ಬಿ.ಎಲ್ ರಾವ್ ಅಭಿನಂದನಾ ನುಡಿಗಳನ್ನಾಡಿ, ಇಂದಿನ ಪ್ರಶಸ್ತಿ ಪುರಸ್ಕೃತ ಎಂ.ಟಿ. ಪೂಜಾರಿ ಅವರು ಪೂರ್ಣನಾಮದ ಮುತ್ತಪ್ಪ ಟಿ. ಪೂಜಾರಿ ಆಗಿದ್ದಾರೆ. ಮಾತೃದೇವೋಭವವೋ ಅಂತೆಯೇ ಪಿತೃದೇವೋಭವವೂ ಎನ್ನುವ ವೇದವಾಕ್ಯವನ್ನು ಪೂರ್ಣಗೊಳಿಸುವಲ್ಲಿ ಜಯ ಸುವರ್ಣ ಅವರು ಬೇಗನೇ ಪಿತೃಸ್ಮರಣಾರ್ಥದ ಮುಖೇನ ಕಲಾಪೋಷಣೆ ಮಾಡಿಸಿಕೊಂಡು ವೇದವಾಕ್ಯ ಉಳಿಸಬೇಕು. ಪುರಸ್ಕಾರದಿಂದಲೇ ಕಲಾವಿದರಿಗೆ ಸಮಾಜದಲ್ಲಿ ಹೊಸ ಜೀವನ ಬಂದಿದೆ. ಬಿಲ್ಲವರ ಅಸೋಸಿಯೇಶನ್‌ನಂತಹ ಸಂಸ್ಥೆಗಳ ಪೋಷಣೆಯಿಂದ ಮುಂಬಯಿ ಯಕ್ಷಗಾನಕ್ಕೆ ತವರೂರು ಆಗುವಂತಾಗಲಿ ಎಂದರು.
ಜಯ ಸುವರ್ಣ ಮಾತನಾಡಿ, ನಾನು ಚಿಕ್ಕನಿರುವಾಗ ನನ್ನ ತಾಯಿಯು ಯಕ್ಷಗಾನಕ್ಕೆ ಕರೆದೊಯ್ದು ಪ್ರೋತ್ಸಾಹಿಸಿದ್ದರು. ಅವರಿಗೆ ಯಕ್ಷಗಾನದಲ್ಲಿ ತುಂಬಾ ಆಸಕ್ತಿ ಇತ್ತು. ಅದೇ ಅಭಿರುಚಿ ನನಗೂ ಪ್ರೇರೇಪಿಸಿತು. ಎಚ್.ಬಿ.ಎಲ್ ರಾವ್ ಅವರ ಪಿತೃಸ್ಮರಣಾರ್ಥದ ಆಶಯ ಪೂರೈಸುವ ಪ್ರಯತ್ನ ಮಾಡುವೆ ಎಂದು ಭರವಸೆಯಿತ್ತರು.
ನಾವು ಯಕ್ಷಗಾನ ಕಲೆಯನ್ನು ಸಾಂಪ್ರದಾಯಿಕವಾಗಿಯೇ ಈ ತನಕ ನಡೆಸಿ ಆರಾಧನೆಯಾಗಿಸಿಯೇ ಮುನ್ನಡೆಸಿ ಬಂದಿದ್ದೇವೆ. ಪಾರಂಪರಿಕ ಹಿನ್ನೆಲೆಯೊಂದಿಗೆ ಮುನ್ನಡೆಸುವ ಆಶಯಕ್ಕೆ ಬದ್ಧರಾಗಿದ್ದು ಎಲ್ಲಾ ಕಲಾಪೋಷಣೆಯನ್ನು ನಾರಾಯಣ ಗುರುಗಳ ಅನುಗ್ರಹ, ಮಾರ್ಗದರ್ಶನದಿಂದಲೇ ನಡೆಸುತ್ತಿದ್ದೇವೆ. ಶ್ರೀ ಗುರು ನಾರಾಯಣ ಮರಾಠಿ ಯಕ್ಷಗಾನ ಮಂಡಳಿ ರೂಪಿಸುವ ಬಗ್ಗೆ ಪ್ರಯತ್ನಿಸುತ್ತೇವೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ನಿತ್ಯಾನಂದ ಡಿ.ಕೋಟ್ಯಾನ್ ತಿಳಿಸಿದರು.ಇದೇ ವೇಳೆ ವೇದಿಕೆಯಲ್ಲಿ ಆಸೀನರಾಗಿದ್ದ ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಶಂಕರ ಡಿ.ಪೂಜಾರಿ, ಡಾ| ಯು.ಧನಂಜಯ ಕುಮಾರ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ಅವರು ಭಾಗವತ ಮುದ್ದು ಸುವರ್ಣ, ಕೊಲ್ಯಾರು ರಾಜು ಶೆಟ್ಟಿ, ಜಿ.ಟಿ ಆಚಾರ್ಯ ಮತ್ತು ಶ್ರೀನಿವಾಸ ಆರ್.ಕರ್ಕೇರ ಅವರಿಗೆ ಪುಷ್ಪಗುತ್ಛ ನೀಡಿ ಗೌರವಿಸಿದರು. ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಪ್ರಸ್ತಾವನೆಗೈದರು. ಸಾಂಸ್ಕೃತಿಕ ಉಪಸಮಿತಿ ಕಾರ್ಯಾಧ್ಯಕ್ಷ ದಯಾನಂದ ಆರ್. ಪೂಜಾರಿ ಕಲ್ವಾ ಸ್ವಾಗತಿಸಿದರು. ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು ಅತಿಥಿಗಳನ್ನು ಪರಿಚಯಿಸಿದರು. ಸಹಾಯಕ ಸಂಪಾದಕ ಹರೀಶ್ ಕೆ.ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿ, ಪ್ರಶಸ್ತಿ ಪುರಸ್ಕೃತರ ಸಮ್ಮಾನಪತ್ರ ವಾಚಿಸಿದರು. ಸಾಂಸ್ಕೃತಿಕ ಸಮಿತಿ ಗೌರವ ಕಾರ್ಯದರ್ಶಿ ಅಶೋಕ್ ಕೆ.ಕುಕ್ಯಾನ್ ಸಸಿಹಿತ್ಲು ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಮುಖ್ಯಸ್ಥ ಸಿ.ಟಿ ಸಾಲ್ಯಾನ್ ಮಾರ್ಗದರ್ಶನದಲ್ಲಿ ಮಂಡಳಿಯ ಕಲಾವಿದರು ಈ ವರ್ಷದ ತಿರುಗಾಟದ ಪ್ರಥಮ ಸೇವೆಯಾಟವಾಗಿ “ಭಾರ್ಗವ ವಿಜಯ’ ತುಳು ಯಕ್ಷಗಾನ ಪ್ರದರ್ಶಿಸಿದರು. ಹೆಚ್.ಬಿ.ಎಲ್ ರಾವ್ ಕಲಾವಿದರಿಗೆ ಗೆಜ್ಜೆಗಳನ್ನಿತ್ತು ತಿರುಗಾಟಕ್ಕೆ ಶುಭಹಾರೈಸಿದರು. ಚಿತ್ರ-ವರದಿ: ರೋನ್ಸ್ ಬಂಟ್ವಾಳ್